ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಸಾಲು ಮಂಟಪಗಳು ಭಾರೀ ಗಾಳಿ-ಮಳೆಗೆ ಉರುಳಿ ಬಿದ್ದ ಬಳಿಕ ಎಚ್ಚೆತ್ತುಕೊಂಡ ಭಾರತೀಯ ಪುರಾತತ್ವ ಇಲಾಖೆ, ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಆದ್ಯತೆ ನೀಡಿದೆ. ಈಗ ಹಂಪಿಯ ಸ್ಮಾರಕಗಳನ್ನು ಗುರುತಿಸಿ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ ಆಸರೆ ಒದಗಿಸಲಾಗುತ್ತಿದೆ. ಈ ಸ್ಮಾರಕಗಳನ್ನು ಮುಂದೆ ಜೀರ್ಣೋದ್ಧಾರಗೊಳಿಸಲು ಯೋಜನೆ ರೂಪಿಸಿದೆ.ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ದೇಶ, ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಾರೆ. ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಸಹಜ ಸ್ಥಿತಿಯಲ್ಲಿ ಕಾಪಾಡಲು ಯುನೆಸ್ಕೊ ಸಲಹೆ ನೀಡಿದೆ. ಸ್ಮಾರಕಗಳು ಗಾಳಿ-ಮಳೆಗೆ ಹಾಳಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಇದರ ಭಾಗವಾಗಿ ಕಬ್ಬಿಣದ ರಾಡ್ ಅಳವಡಿಸಿ ಅವುಗಳಿಗೆ ಆಸರೆ ನೀಡಲಾಗುತ್ತಿದೆ.
ಕೊರೋನ ಕಾಲಘಟ್ಟದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಈ ಭಾಗದಲ್ಲಿ ಹೋಟೆಲ್, ರೆಸಾರ್ಟ್‌ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಪ್ರವಾಸೋದ್ಯಮದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕೂಡ ಸೃಷ್ಟಿಯಾಗುತ್ತಿದೆ.ಹೊಣೆಗಾರಿಕೆ ಮೆರೆಯಲಿ: ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕಿದೆ. ಮಳೆಗಾಲದಲ್ಲಿ ಈ ಸ್ಮಾರಕಗಳು ಹಾಳಾಗದಂತೆ ಕ್ರಮ ವಹಿಸಿದರೆ ಮುಂದಿನ ಪೀಳಿಗೆಗೆ ಇವುಗಳನ್ನು ನಾವು ದಾಟಿಸಬಹುದು. ಆದರೆ, ನಮ್ಮ ಪೂರ್ವಜರ ಕೊಡುಗೆಗಳು ನಶಿಸುತ್ತಿರುವುದು ಸಲ್ಲದು. ಸಂಬಂಧಿಸಿದ ಇಲಾಖೆಗಳು ಕೂಡ ಎಚ್ಚೆತ್ತು ತಮ್ಮ ಹೊಣೆಗಾರಿಕೆ ಮೆರೆಯಬೇಕು ಎಂದು ಹೇಳುತ್ತಾರೆ ಚರಿತ್ರೆಪ್ರಿಯ ಸುರೇಶ್.
ಜೀರ್ಣೋದ್ಧಾರಕ್ಕೆ ಪ್ಲಾನ್: ಹಂಪಿಯ ದೇಗುಲ, ಮಂಟಪ, ಸ್ಮಾರಕಗಳು ಶಿಥಿಲವಾಗಿದ್ದರೆ, ಅವುಗಳನ್ನು ಗುರುತಿಸುವ ಕಾರ್ಯವನ್ನು ಭಾರತೀಯ ಪುರಾತತ್ವ ಇಲಾಖೆ ಕೈಗೊಂಡಿದೆ. ವಿಜಯನಗರ ಅರಸರ ಕಾಲದ ಸ್ಮಾರಕಗಳನ್ನು ಸಹಜ ಸ್ಥಿತಿಯಲ್ಲಿ ಕಾಪಾಡಬೇಕಾದ ಹೊಣೆಗಾರಿಕೆ ಭಾರತೀಯ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಗೆ ಇದೆ. ಹಂಪಿಯಲ್ಲೇ ಈ ಇಲಾಖೆಗಳ ಕಚೇರಿಗಳನ್ನು ತೆರೆಯಲಾಗಿದೆ.ಈ ಹಿಂದೆ ಬಿದ್ದ ಸ್ಮಾರಕಗಳು: ಹಂಪಿಯ ವರಾಹ ದೇಗುಲ, ಕುದುರೆಗೊಂಬೆ ಮಂಟಪ, ಮಾಲ್ಯವಂತ ರಘುನಾಥ ದೇವಾಲಯದ ಗಾಳಿ ಗೋಪುರ, ಕಮಲ ಮಹಲ್ ಬಳಿಯ ರಕ್ಷಣಾ ಗೋಡೆ, ಹಂಪಿಯ ಶ್ರೀಕೃಷ್ಣ ಬಜಾರ್‌ನ ಮಂಟಪ ಸೇರಿದಂತೆ ಕೆಲ ಸ್ಮಾರಕಗಳು ಬಿದ್ದಿದ್ದವು. ಈ ಸ್ಮಾರಕಗಳನ್ನು ಪುರಾತತ್ವ ಇಲಾಖೆ ಜೀರ್ಣೋದ್ಧಾರ ಮಾಡಿದೆ. ಶ್ರೀ ವಿರೂಪಾಕ್ಷೇಶ್ವರ ದೇಗುಲದ ರಥಬೀದಿಯ ಸಾಲು ಮಂಟಪದ ಎರಡು ಮಂಟಪಗಳು ಇತ್ತೀಚೆಗೆ ಮಳೆಗೆ ಉರುಳಿ ಬಿದ್ದಿವೆ.
ಶಿಥಿಲ ಸ್ಮಾರಕಗಳಿಗೆ ಆಸರೆ: ಹಂಪಿಯ ನೆಲಸ್ತರದ ಶಿವಾಲಯ ದೇವಾಲಯದ ಗೋಪುರ, ಪಾನ್ ಸುಪಾರಿ ಬಜಾರ್‌ನ ಮಂಟಪ, ಗಜಶಾಲೆ ಹಿಂಬದಿಯ ರಂಗ ದೇವಾಲಯ, ಜೈನ ಬಸದಿ, ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯ ಸಾಲುಮಂಟಪದಲ್ಲಿ ವಾಲಿರುವ ಕೆಲ ಸ್ಮಾರಕಗಳು ಸೇರಿದಂತೆ ಹಂಪಿಯ ವಿವಿಧ ಸ್ಮಾರಕಗಳಿಗೆ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ ತಕ್ಕಮಟ್ಟಿಗೆ ಆಸರೆ ಒದಗಿಸಲಾಗಿದೆ. ಪುರಾತತ್ವ ಇಲಾಖೆ ಶಿಥಿಲ ಸ್ಮಾರಕಗಳನ್ನು ಗುರುತಿಸಿ ಈ ಕಾರ್ಯ ಕೈಗೊಂಡಿದೆ. ಮುಂದಿನ ಹಂತದಲ್ಲಿ ಈ ಸ್ಮಾರಕಗಳನ್ನು ಜೀರ್ಣೋದ್ಧಾರ ಕೈಗೊಳ್ಳುವ ಪ್ಲಾನ್ ಮಾಡಿದೆ.ಹಂಪಿಯ ಸ್ಮಾರಕಗಳನ್ನು ಜೀರ್ಣೋದ್ಧಾರ ಕೈಗೊಳ್ಳುವ ಕಾರ್ಯವನ್ನು ಹಂತ ಹಂತವಾಗಿ ನಡೆಸಲಾಗುವುದು. ನೆಲಸ್ತರದ ಶಿವ ದೇವಾಲಯ ಸೇರಿ ಕೆಲ ಸ್ಮಾರಕಗಳಿಗೆ ಆಸರೆ ಒದಗಿಸಲಾಗುತ್ತಿದೆ. ಈಗಾಗಲೇ ಹಂಪಿಯಲ್ಲಿ ಶಿಥಿಲ ಸ್ಮಾರಕಗಳನ್ನು ಗುರುತಿಸುವ ಕಾರ್ಯವನ್ನು ಇಲಾಖೆಯ ಅಧಿಕಾರಿಗಳು ಕೈಗೊಂಡಿದ್ದಾರೆ ಎನ್ನುತ್ತಾರೆ ಹಂಪಿ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ನಿಹಿಲ್ ದಾಸ್.