ನನೆಗುದಿಗೆ ಬಿದ್ದ ನೀರಾವರಿ ಯೋಜನೆಗಳಿಗೆ ಸಿಕ್ಕೀತೆ ಆದ್ಯತೆ?

| Published : Feb 13 2024, 12:49 AM IST

ಸಾರಾಂಶ

ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ ಫೆ. 16ರಂದು ಮಂಡಿಸಲಿದ್ದು, ಜಿಲ್ಲೆಯಲ್ಲಿ ಹಲವಾರು ನಿರೀಕ್ಷೆಗಳು ಹುಟ್ಟಿವೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಸರ್ಕಾರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸಿಕ್ಕಿತೆ ಎನ್ನುವುದೇ ಈಗಿರುವ ದೊಡ್ಡ ನಿರೀಕ್ಷೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಜಿಲ್ಲೆಯಲ್ಲಿ ನೀರಾವರಿ ವಿಪುಲ ಅವಕಾಶಗಳು ಇವೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಮಂಜೂರಾದ, ಜಾರಿಯಾದ ಯೋಜನೆಗಳು ಕುಂಟುತ್ತಾ ತೆವಳುತ್ತಾ ಸಾಗುತ್ತಿದ್ದು, ಇವುಗಳಿಗೆ ಅಗತ್ಯ ಅನುದಾನ ಈ ವರ್ಷದ ಬಜೆಟ್‌ನಲ್ಲಿಯಾದರೂ ಸಿಕ್ಕೀತೆ ಎನ್ನುವುದೇ ಬಹುದೊಡ್ಡ ನಿರೀಕ್ಷೆ.

ಜಿಲ್ಲೆಯಲ್ಲಿ ಸುಮಾರು 3,08,000 ಹೆಕ್ಟೇರ್ ಬಿತ್ತನೆ ಪ್ರದೇಶ ಇದ್ದು, ಅದರಲ್ಲಿ ಶೇ. 70 ಮಳೆಯಾಶ್ರಿತ ಪ್ರದೇಶವೇ ಇದೆ. ಆದರೆ, ಇರುವ ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದೇ ಆದರೆ ಶೇ. 70 ಪ್ರದೇಶ ನೀರಾವರಿಯಾಗುವ ಅವಕಾಶ ಜಿಲ್ಲೆಯಲ್ಲಿ ಇದೆ. ಆದರೆ, ಅವುಗಳ ಅನುಷ್ಠಾನಕ್ಕೆ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಮಾಡಿದರೂ ಸರ್ಕಾರದಲ್ಲಿ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ.

ಹನ್ನೆರಡು ವರ್ಷ: ಸಿಂಗಟಾಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿ ಹನ್ನೆರಡು ವರ್ಷಗಳೇ ಕಳೆದರೂ ಅದು ಜಿಲ್ಲೆಯ ಪಾಲಿಗೆ ಮಾತ್ರ ಬಿಸಿಲ್ಗುದುರೆಯಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲಭಾಗದಲ್ಲಿ ಹನ್ನೆರಡು ವರ್ಷಗಳಿಂದ ನೀರಾವರಿಯಾಗುತ್ತಿದೆ. ಆದರೆ, ಎಡಭಾಗದಲ್ಲಿ ಮಾತ್ರ ನೀರಾವರಿಯಾಗುತ್ತಲೇ ಇಲ್ಲ. ಕೊಪ್ಪಳ ಜಿಲ್ಲೆಯಲ್ಲಿಯೇ ಸುಮಾರು 2.45 ಲಕ್ಷ ಎಕರೆ ಪ್ರದೇಶದ ನೀರಾವರಿಗೆ ಅವಕಾಶ ಇದೆ. ಆದರೆ, ಇದು ಜಾರಿಯಾಗುತ್ತಲೇ ಇಲ್ಲ.

ಕಾಲುವೆ ಮೂಲಕ ನೀರಾವರಿ ಮಾಡುವ ಯೋಜನೆಯನ್ನು ಕೈಬಿಟ್ಟು, ಹನಿ ನೀರಾವರಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಯಿತಾದರೂ ಅದು ಯಶಸ್ವಿಯಾಗಲಿಲ್ಲ. ಈಗ ಮಧ್ಯಪ್ರದೇಶ ಮಾದರಿಯಲ್ಲಿ ನೀರಾವರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಇನ್ನೂ ಕಾರ್ಯಗತವಾಗಿಯೇ ಇಲ್ಲ. ಪರಿಣಾಮ ಹನ್ನೆರಡು ವರ್ಷಗಳಿಂದ ನೀರು ಪೋಲಾಗುತ್ತಲೇ ಇದೆ.

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬುತ್ತಿರುವುದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಈಗಾಗಲೇ 28 ಟಿಎಂಸಿಗೆ ಕುಸಿದಿದೆ. ಹೀಗಾಗಿ, ಇದಕ್ಕೆ ಪರ್ಯಾಯವಾಗಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ಯೋಜನೆಯೂ ಕುಂಟುತ್ತಾ, ತೆವಳುತ್ತಾ ಸಾಗಿದೆ.

ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಸ್ತು ಎಂದು, ಡಿಪಿಆರ್ ರಚನೆಗೆ ಆದೇಶ ಮಾಡಿತಾದರೂ ಆನಂತರ ಅಂತಾರಾಜ್ಯದ ಅನುಮತಿ ಬೇಕಾಗಿದ್ದರಿಂದ ಅದು ಮತ್ತೆ ನನೆಗುದಿಗೆ ಬಿದ್ದಿದೆ. ಇದಲ್ಲದೆ ತುಂಗಭದ್ರಾ ನದಿಗೆ 9 ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ಯೋಜನೆಗಳಿಗೆ ಅನುಮೋದನೆ ಸಿಕ್ಕು, ಅನುದಾನ ಇಲ್ಲದೆ ಕಳೆದ 30 ವರ್ಷಗಳಿಂದ ಪೂರ್ಣವಾಗದೇ ಉಳಿದಿದೆ. ಇವುಗಳ ಕುರಿತು ಯಾವೊಬ್ಬ ಜನಪ್ರತಿನಿಧಿಯೂ ಧ್ವನಿ ಎತ್ತುವುದೇ ಇಲ್ಲ.ಇದಲ್ಲದೆ ಹತ್ತಾರು ಏತ ನೀರಾವರಿ ಯೋಜನೆಗಳು ಇದ್ದು, ಅವುಗಳು ಸಹ ನಾನಾ ಕಾರಣಗಳಿಗಾಗಿ ಜಾರಿಯಾಗುತ್ತಲೇ ಇಲ್ಲ. ಬೆಟಗೇರಿ ಏತ ನೀರಾವರಿ ಯೋಜನೆ ಪೂರ್ಣಗೊಂಡು ವರ್ಷಗಳೇ ಉರುಳಿದರೂ ಜಾರಿಯಾಗುತ್ತಲೇ ಇಲ್ಲ. ಬಹದ್ದೂರು ಬಂಡಿ ಏತ ನೀರಾವರಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಇದೇ ರೀತಿ ಅಪೂರ್ಣವಾಗೇ ಉಳಿದಿದೆ.

ಹಿರೇಹಳ್ಳ ಜಲಾಶಯ: ಹಿರೇಹಳ್ಳ ಜಲಾಶಯ ಲೋಕಾರ್ಪಣೆಯಾಗಿ 22 ವರ್ಷಗಳಾಗುತ್ತ ಬಂದರೂ ನಿರೀಕ್ಷೆಯಷ್ಟು ನೀರಾವರಿಯಾಗುತ್ತಲೇ ಇಲ್ಲ. ಯೋಜಿತ ಪ್ರದೇಶದಲ್ಲಿ ಶೇ. 50ರಷ್ಟು ನೀರಾವರಿಯಾಗಿಲ್ಲ ಮತ್ತು ಕಾಲುವೆಗಳಿಗೆ ನೀರು ಹರಿಯುತ್ತಲೇ ಇಲ್ಲ. ನೀರಿನ ಅಭಾವ ಕಾಡುತ್ತಿದೆ. ಹೀಗಾಗಿ, ಜಲಾಶಯದ ಎತ್ತರ ಹೆಚ್ಚಳ ಮಾಡುವ ಪ್ರಯತ್ನವೂ ಶೈಶವಾವಸ್ಥೆಯಲ್ಲಿಯೇ ಇದೆ. ಹೀಗಾಗಿ, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಜಾರಿಗೆ ಆಗಬೇಕಾದಷ್ಟು ಪ್ರಗತಿಯಾಗುತ್ತಲೇ ಇಲ್ಲ. ವಿಶೇಷವಾಗಿ ಅನುದಾನದ ಕೊರತೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನೇ ಜಾರಿ ಮಾಡಿರುವ ಸರ್ಕಾರ ಹನ್ನೆರಡು ವರ್ಷಗಳಿಂದ ಕಾಲುವೆ ನಿರ್ಮಾಣಕ್ಕೆ ಒತ್ತು ನೀಡದಿರುವುದು ಮಾತ್ರ ದುರಂತವೇ ಸರಿ.

ಇದಲ್ಲದೆ ಕೆರೆ ತುಂಬಿಸುವ ಯೋಜನೆಗಳು, ಬ್ಯಾರೇಜ್ ತುಂಬಿಸುವ ಯೋಜನೆಗಳು ಎಲ್ಲವೂ ಬಾಕಿ ಬಿದ್ದಿವೆ. ಇವುಗಳ ಜಾರಿಗೆ ಸರ್ಕಾರ ಮುಂದಾಗಬೇಕಾಗಿದೆ.

ಸಾವಿರಾರು ಕೋಟಿ: ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯವನ್ನು ಆಧುನೀಕರಣ ಮಾಡುವುದು ಸೇರಿದಂತೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ಮೂಲಕ ನದಿಯ ಮೂಲಕ ಹರಿದು ಹೋಗಿ ವ್ಯಯವಾಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕಾಗಿ ಸಾವಿರಾರು ಕೋಟಿ ರುಪಾಯಿ ಅನುದಾನದ ಅಗತ್ಯವಿದೆ. ಹೀಗಾಗಿ, ತುಂಗಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವ ಪ್ರಯತ್ನ ಆಗಬೇಕಾಗಿದೆ. ಇದಲ್ಲದೆ ಸಿಂಗಟಾಲೂರು ಏತ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳು ಸೇರಿದಂತೆ ಹಲವಾರು ಏತ ನೀರಾವರಿ ಯೋಜನಗಳಿಗೆ ರಾಜ್ಯ ಸರ್ಕಾರ ಮಂಡನೆ ಮಾಡುವ ಬಜೆಟ್‌ನಲ್ಲಿ ಆದ್ಯತೆ ನೀಡುವರೇ ಎನ್ನುವುದು ಸದ್ಯದ ಕುತೂಹಲದ ಪ್ರಶ್ನೆಯಾಗಿದೆ.