ಕೊಪ್ಪಳ ತಾಲೂಕಿನ ನವಲಕಲ್ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ ಅರ್ಧಕ್ಕೆ ನಿಂತಿತ್ತು. ಏಳೆಂಟು ಗ್ರಾಮಗಳ ರೈತರು ಅದರಿಂದಲೇ ನೀರಾವರಿ ಮಾಡಿಕೊಂಡು ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೋಟ್ಯಂತರ ರುಪಾಯಿ ವ್ಯಯಿಸಿ ನಿರ್ಮಾಣ ಮಾಡಿದ ಏತ ನೀರಾವರಿ ಯೋಜನೆ ಕಾಲುವೆಗಳು ಇಲ್ಲದೆ ಪಾಳು ಬಿದ್ದಿತ್ತು, ನೀರು ಪೋಲಾಗುತ್ತಿತ್ತು. ಇದರ ಏರ್‌ವಾಲ್ವ್‌ಗೆ ಪೈಪ್ ಅಳವಡಿಸಿಕೊಳ್ಳುವ ಮೂಲಕ ರೈತರು ನೀರಾವರಿ ಮಾಡಿಕೊಂಡು, ಬರದಲ್ಲೂ ಬಂಪರ್ ಬೆಳೆ ಬೆಳೆಯುತ್ತಿದ್ದಾರೆ!

ಬಯಲು ಸೀಮೆಯ ಮಳೆಯಾಶ್ರಿತ ಭೂಮಿಯಲ್ಲಿ ಇಂಥ ಭೀಕರ ಬರದಲ್ಲೂ ಬೆಳೆ ಕಂಗೊಳಿಸುತ್ತಿದೆ.

ಇದು, ರೈತರ ಚಾಣಾಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ. ಈಗ ರೈತರ ಏತ ನೀರಾವರಿ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್ ಮಾಡಿಕೊಂಡು, ನೀರಾವರಿ ವ್ಯವಸ್ಥೆ ನಿರ್ವಹಣೆ ಮಾಡುತ್ತಿದ್ದಾರೆ.

ಕೊಪ್ಪಳ ತಾಲೂಕಿನ ನವಲಕಲ್ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ ಅರ್ಧಕ್ಕೆ ನಿಂತಿತ್ತು. ಏಳೆಂಟು ಗ್ರಾಮಗಳ ರೈತರು ಅದರಿಂದಲೇ ನೀರಾವರಿ ಮಾಡಿಕೊಂಡು ರಾಜ್ಯಕ್ಕೆ ಮಾದರಿಯಾಗಿದ್ದಾರೆ. 3-4 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು, ಮೆಕ್ಕೆಜೋಳ, ಮೆಣಸಿನ ಗಿಡ, ಸಜ್ಜೆ, ಶೇಂಗಾ ಮೊದಲಾದ ಬೆಳೆಗಳನ್ನು ಬೆಳೆದಿದ್ದಾರೆ.

ಚಾಣಾಕ್ಷತನ: ನವಲಕಲ್ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆಯನ್ನು ಕಳೆದ ವರ್ಷ ಶಾಸಕ ರಾಘವೇಂದ್ರ ಹಿಟ್ನಾಳ್ ಉದ್ಘಾಟಿಸಿದ್ದರು. ಯೋಜನೆಗೆ ಕಾಲುವೆ ನಿರ್ಮಾಣ ಆಗದೆ ಇರುವುದರಿಂದ ಹೊಸಹಳ್ಳಿ, ಕುಣಿಕೇರಿ ಗ್ರಾಮಗಳ ಕೆರೆ ತುಂಬಿಸಲಾಯಿತು. ಕೆರೆ ತುಂಬಿಸಿದ ಬಳಿಕ ನೀರು ಪೋಲಾಗಿ ಹೋಗುತ್ತಿತ್ತು. ಏರ್ ವಾಲ್ ಬಳಿ ನೀರು ಸೋರಿಕೆ ಆಗುತ್ತಿತ್ತು. ಇನ್ನೊಂದೆಡೆ ಮಳೆಯಾಶ್ರಿತ ಭೂಮಿಯಲ್ಲಿ ಹಾಕಿದ್ದ ಬೆಳೆ ಒಣಗಲಾರಂಭಿಸಿತ್ತು. ವ್ಯಯವಾಗುವ ನೀರು ನಾವೇಕೆ ಬಳಸಿಕೊಳ್ಳಬಾರದು ಎಂದು ಚಿಂತಿಸಿದ ರೈತರು ಏರ್‌ವಾಲ್ವ್‌ಗೆ ಪೈಪ್‌ ಅಳವಡಿಸಿ, ತಮ್ಮ ಭೂಮಿಗೆ ಹಾಯಿಸಿದರು. ಈಗ ಒಣಗುತ್ತಿರುವ ಬೆಳೆಗಳು ಚೇತರಿಸಿಕೊಂಡು ಕಂಗೊಳಿಸುತ್ತಿವೆ.

ಇದಕ್ಕೆ ಕೆಲವು ಕಿಡಿಗೇಡಿಗಳು ವಿರೋಧ ಮಾಡಿ, ಅಡ್ಡಿಪಡಿಸಲು ಯತ್ನಿಸಿದರು. ಮಧ್ಯಪ್ರವೇಶ ಮಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್, ಕಾಲುವೆ ನಿರ್ಮಾಣ ಆಗುವವರೆಗೂ ರೈತರು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಇದರಿಂದ ಕುಣಿಕೇರಿ, ಕುಣಿಕೇರಿ ತಾಂಡಾ, ಮಳ್ಳಿಕೇರಿ, ಮುದ್ದಾಬಳ್ಳಿ, ಹ್ಯಾಟಿ, ಬಿ. ಹೊಸಳ್ಳಿ ಹಾಗೂ ಹೂವಿನಹಾಳ ಗ್ರಾಮದ ನೂರಾರು ರೈತರು 3-4 ಸಾವಿರ ಎಕರೆ ಪ್ರದೇಶದಲ್ಲಿನ ಬೆಳೆಯನ್ನು ರಕ್ಷಣೆ ಮಾಡಿಕೊಂಡಿದ್ದಾರೆ.

ವಾಟ್ಸ್‌ಆ್ಯಪ್‌ ಗ್ರೂಪ್ ರಚನೆ: ನವಲಕಲ್ ಏತ ನೀರಾವರಿ ಯೋಜನೆಯ ರೈತರ ಸಂಘ ಎನ್ನುವ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿಕೊಂಡಿದ್ದಾರೆ. ಪರಸ್ಪರ ಹೊಂದಾಣಿಕೆ ಮೂಲಕ ತಮ್ಮ ಹೊಲಗಳಿಗೆ ನೀರು ಉಣಿಸುತ್ತಿದ್ದಾರೆ. ಏತ ನೀರಾವರಿ ಪಂಪ್‌ಸೆಟ್‌, ವಿದ್ಯುತ್, ಪೈಪ್‌ಲೈನ್‌ ಸಮಸ್ಯೆ ಆಗುತ್ತಿದ್ದಂತೆ ಗ್ರೂಪ್‌ನಲ್ಲಿ ಚರ್ಚೆ ಮಾಡಿಕೊಂಡು, ಒಂದೆಡೆ ಸೇರಿ, ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಯಾರಾದರೂ ಕಿಡಿಗೇಡಿಗಳು ತೊಂದರೆ ಕೊಡುವ ಯತ್ನ ಮಾಡಿದರೆ ಎಲ್ಲರೂ ಒಗ್ಗಟ್ಟಾಗಿ ತೊಂದರೆ ಕೊಡಲು ಬಂದವರ ಚಳಿ ಬಿಡಿಸಿ ಕಳುಹಿಸುತ್ತಾರೆ.

ಬಂಪರ್ ಬೆಳೆ: ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ ಕಾಲುವೆ ನಿರ್ಮಾಣ ಮಾಡದೆ ಅರ್ಧಕ್ಕೆ ನಿಂತಿದ್ದರೂ ರೈತರ ಚಾಣಾಕ್ಷತನದಿಂದ ನೀರಾವರಿ ಮಾಡಿಕೊಂಡು ಭೀಕರ ಬರದಲ್ಲೂ ಬಂಪರ್ ಬೆಳೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಉತ್ತಮ ಬೆಳೆ ನಿರೀಕ್ಷೆ: ಮನೆಮಂದಿಯಲ್ಲ ಗುಳೆ ಹೋಗುವ ಪರಿಸ್ಥಿತಿ ಇತ್ತು. ಆದರೆ, ಅರ್ಧಕ್ಕೆ ನಿಂತ ಏತ ನೀರಾವರಿ ಯೋಜನೆಯ ಏರ್‌ವಾಲ್‌ಗೆ ಪೈಪ್‌ ಜೋಡಿಸಿಕೊಂಡು ನೀರಾವರಿ ಮಾಡಿಕೊಂಡಿದ್ದೇವೆ. ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಕುಣಿಕೇರಿ ತಾಂಡಾ ರೈತ ಶಂಕ್ರಪ್ಪ ಮಾಳಿಗಿ ಹೇಳಿದರು.

ರೈತರು ತೋರಿದ ಬುದ್ಧಿವಂತಿಕೆಯಿಂದ ಪೋಲಾಗುತ್ತಿದ್ದ ನೀರು ಸದ್ಬಳಕೆಯಾಗಿದೆ. 8-10 ಗ್ರಾಮಗಳ ರೈತರು ಭೀಕರ ಬರದಲ್ಲೂ ಬಂಪರ್ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದಾರೆ ಎಂದು ಮುಖಂಡ ವಿರೂಪಾಕ್ಷಪ್ಪ ನವೋದಯ ಹೇಳಿದರು.ನವಲಕಲ್ ಏತ ನೀರಾವರಿ ಯೋಜನೆಗೆ ಇನ್ನೂ ಕಾಲುವೆ ಮಾಡಬೇಕಾಗಿದೆ. ಹೀಗಾಗಿ ಕಾಲುವೆ ನಿರ್ಮಾಣ ಮಾಡುವ ವರೆಗೂ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಕಾಲುವೆ ನಿರ್ಮಾಣ ಮಾಡಿದ ಮೇಲೆ ಈ ರೈತರು ಸೇರಿದಂತೆ ಯೋಜನೆ ವ್ಯಾಪ್ತಿಯ ಎಲ್ಲ ರೈತರಿಗೂ ಅನುಕೂಲವಾಗಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.