ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡರೂ ಕೂಡ ಈ ಬಾರಿ ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂಬ ಮಾತುಗಳು ಸದ್ಯ ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಕೇಳಿ ಬರುತ್ತಿವೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಹೊಸದಾಗಿ ಸಚಿವರಾಗುವ ಹಲವು ಶಾಸಕರ ಕನಸು ಈಡೇರುವ ಕಾಲ ಸನ್ನಿಹಿತವಾಗಿದ್ದು, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡರೂ ಕೂಡ ಈ ಬಾರಿ ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂಬ ಮಾತುಗಳು ಸದ್ಯ ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಕೇಳಿ ಬರುತ್ತಿವೆ.

ಕಾಂಗ್ರೆಸ್‌ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿರುವ ನಾಡಗೌಡರು ಪಕ್ಷ ನೀಡಿದ ಹಲವು ಮಹತ್ತರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜತೆಗೆ, ಪ್ರಬಲ ಲಿಂಗಾಯತ ರೆಡ್ಡಿ ಸಮುದಾಯದ ಮುಖಂಡರಾಗಿದ್ದು, ಕಳೆದ 2-3 ಬಾರಿ ಸಚಿವ ಸ್ಥಾನದಿಂದ ವಂಚಿತಗೊಂಡಿದ್ದರೂ ಪಕ್ಷದ ವಿರುದ್ಧವಾಗಲಿ ಅಥವಾ ಹೈಕಮಾಂಡ್‌ ವಿರುದ್ಧವಾಗಲಿ ಮಾತಾಡದೆ ಪಕ್ಷದ ಏಳಿಗೆಗೆ ಶ್ರಮಿಸಿದ್ದಾರೆ.

‘ಈ ಬಾರಿ ಅಪ್ಪಾಜಿ ನಾಡಗೌಡರನ್ನು ಗೆಲ್ಲಿಸಿ, ಅವರನ್ನು ಮಂತ್ರಿ ಮಾಡುತ್ತೇವೆ’ ಎಂದು 2023ರ ಚುನಾವಣೆಯಲ್ಲಿ ಕೈ ನಾಯಕರು ಭರವಸೆ ನೀಡಿದ್ದರು. ಆದರೆ, ಮಂತ್ರಿಗಳ ಪಟ್ಟಿಯಿಂದ ಕೈಡಲಾಯಿತು. ಅದು ಯಾವ ಕಾರಣಕ್ಕೆ ಕೈಬಿಡಲಾಯಿತು ಎಂಬುದು ಇಂದಿಗೂ ಕೂಡ ಯಕ್ಷ ಪ್ರಶ್ನೆಯಾಗಿದೆ.

1981ರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಕಾಲಿಟ್ಟು 6 ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಸಿ.ಎಸ್.ನಾಡಗೌಡ ಅವರನ್ನು ಕ್ಯಾಬಿನೆಟ್‌ ದರ್ಜೆಯ ಸಚಿವ ಸ್ಥಾನ ನೀಡಿ ಗೌರವಿಸಬೇಕೆನ್ನವುದು ಈ ಭಾಗದ ಜನರ ಬೇಡಿಕೆಯಾಗಿದೆ. 2013ರಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚೇತಕರಾಗಿ, ಸಿಎಲ್‌ಪಿ ಕಾರ್ಯದರ್ಶಿಯಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ ಮತ್ತು ಹಲವು ಸಮಿತಿಗಳ ಸದಸ್ಯರಾಗಿ ಹಾಗೂ ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಮತಕ್ಷೇತ್ರ ಅಭಿವೃದ್ಧಿ ಹಾಗೂ ಜಿಲ್ಲೆಯ ಜನತೆಯ ಪ್ರೀತಿ, ವಿಶ್ವಾಸದೊಂದಿಗೆ ಸಾವಿರಾರು ಕೋಟಿಗಳ ಅನುದಾನ ತರುವ ಮೂಲಕ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸರ್ಕಾರದ ಜನಪ್ರಿಯತೆಗೆ ಶ್ರಮಿಸಿದ್ದಾರೆ. ಹೀಗಾಗಿ ಇತ್ತೀಚಿನ 3 ದಶಕಗಳಲ್ಲಿಯೇ ಕರ್ನಾಟಕದ ವಿಧಾನಸಭಾ ಕಂಡ ಅತಿ ಅಪರೂಪದ ರಾಜಕಾರಣಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

2023ರಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಇಡೀ ರಾಜ್ಯದಲ್ಲಿಯೇ 135 ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಶಾಸಕರ ಹಿರಿತನ ಮುನ್ನೆಲೆಗೆ ಬಂದಿದೆ. ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಇವೆಲ್ಲವೂ ಈ ಬಾರಿ ರಾಜ್ಯ ಸರ್ಕಾರದ ಕ್ಯಾಬಿನೆಟ್‌ ದರ್ಜೆ ಸಚಿವರಾಗುವುದಲ್ಲಿ ಅವರಿಗೆ ಸಹಕಾರಿ ಆಗಲಿದೆ ಎಂಬ ಮಾತು ಕೈ ಪಾಳಯದಲ್ಲಿಯೇ ಕೇಳಿ ಬರುತ್ತಿದೆ. ಅವರಿಗೆ ಅವಕಾಶ ಸಿಕ್ಕರೆ ಈ ಭಾಗ ಇನ್ನಷ್ಟು ನೀರಾವರಿ ಪ್ರದೇಶ ಆಗುವುದರಲ್ಲಿ ಸಂದೇಹವಿಲ್ಲ ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಅಲ್ಲದೆ, ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಗಣ್ಯ ವ್ಯಾಪಾರಸ್ಥರು, ಹೋರಾಟಗಾರರು, ಸಾಹಿತಿಗಳ ಒತ್ತಾಯವು ಸಹ ಅದೇ ಆಗಿದೆ.

---------

ಪ್ರಾಮಾಣಿಕನಿಗೆ ಆದ್ಯತೆ ನೀಡಿ

ಈಗಾಗಲೇ ಮತಕ್ಷೇತ್ರದ ಅಭಿವೃದ್ಧಿಗೆ ಸಿ.ಎಸ್.ನಾಡಗೌಡರು ಶ್ರಮಿಸಿದ್ದು, ಮೈಸೂರು ಸ್ಯಾಂಡಲ್‌ ಸಾಬೂನು ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೂ ಸರ್ಕಾರಕ್ಕೆ, ಸಂಸ್ಥೆಗೆ ಹೆಚ್ಚು ಲಾಭ ಕಲ್ಪಿಸಿದ್ದಾರೆ. ಅಲ್ಲದೇ ವಿದೇಶಗಳಲ್ಲಿಯೂ ಮೈಸೂರು ಸ್ಯಾಂಡಲ್ ಸಂಸ್ಥೆಯ ಉತ್ಪನ್ನಗಳ ಬೇಡಿಕೆ ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ. ತಮಗೆ ನೀಡಿದ ಹುದ್ದೆಯನ್ನು ಅತ್ಯಂತ ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ನಿರ್ವಹಿಸುವ ಅಪ್ಪಾಜಿ ನಾಡಗೌಡರಿಗೆ ಕಾಂಗ್ರೆಸ್ ಹೈಮಾಂಡ್‌ ನಾಯಕರು ಸಂಪುಟ ದರ್ಜೆ ಸಚಿವ ಸ್ಥಾನಮಾನ ನೀಡಬೇಕು.

-ಶ್ರೀಶೈಲ ಮರೋಳ, ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಅಧ್ಯಕ್ಷರು, ಪಿಕೆಪಿಎಸ್‌ ತಂಗಡಗಿ.

---

ಕ್ಯಾಬಿನೆಟ್‌ ಸ್ಥಾನ ನೀಡಿ

ನಾಡಗೌಡರು ದೇಶಗತ್ತಿ ಮನೆತನದವರು. ಅಲ್ಲದೇ, ಸರಳ ಸ್ವಭಾವ, ಜಾತ್ಯಾತೀತ ಮನೋಭಾವವುಳ್ಳ ನಾಯಕರಾಗಿದ್ದಾರೆ. ಬರಡು ಭೂಮಿ ಆಗಿದ್ದ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಾಗರಬೆಟ್ಟ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ ಹಾಗೂ ಪಿರಾಪೂರ ಬೂದಿಹಾಳ ಏತ ನೀರಾವರಿ ಪ್ರಾರಂಭಿಸುವ ಮೂಲಕ ರೈತರು ಮೆಣಸಿನಕಾಯಿ, ದ್ರಾಕ್ಷಿ, ಕಬ್ಬು ಸೇರಿ ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಲಕ್ಷ, ಲಕ್ಷ ಆದಾಯ ಬರುವಂತೆ ಮಾಡಿದ ಕೀರ್ತಿ ಸಿ.ಎಸ್.ನಾಡಗೌರಿಗೆ ಸಲ್ಲುತ್ತದೆ. ಅವರೊಬ್ಬ ಅನುಭವಿ ಹಿರಿಯ ರಾಜಕಾರಿಣಿ, ಹೈಕಮಾಂಡ್ ಅವರನ್ನು ಕ್ಯಾಬಿನೆಟ್‌ ದರ್ಜೆಯ ಸಚಿವ ಸ್ಥಾನಕ್ಕೆ ಸೂಚಿಸಬೇಕು.

-ಅಕ್ಷತಾ ಶರಣಬಸು ಚಲವಾದಿ, ಅಧ್ಯಕ್ಷರು ತಾಲೂಕು ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಘಟಕ ಮುದ್ದೇಬಿಹಾಳ.