ಶಿಸ್ತಿನ ಪಕ್ಷದಲ್ಲಿ ಅಶಿಸ್ತು, ಸಹನೀಯವೇ ?

| Published : Mar 23 2024, 01:04 AM IST

ಸಾರಾಂಶ

ಬಿಜೆಪಿ ವರಿಷ್ಠರು, ಸಚಿವರು, ಮಾಜಿ ಸಚಿವರು, ಶಾಸಕರು ನಮ್ಮದು ಅತ್ಯಂತ ಶಿಸ್ತಿನ ಪಕ್ಷವೆಂದು ಎಲ್ಲ ಕಡೆಗಳಲ್ಲಿಯೂ ಹೇಳುತ್ತಲೇ ಬರುತ್ತಾರೆ. ಆದರೆ ವೈರುಧ್ಯ ಎನ್ನುವಂತೆ ಅವರ ಪಕ್ಷದ ಹಲವಾರು ಕಾರ್ಯಕರ್ತರು ರೆಬಲ್ ಆಗಿ ಪಕ್ಷದ ಕಚೇರಿಯಲ್ಲಿ ನೇರವಾಗಿಯೇ ವಿರೋಧ ವ್ಯಕ್ತಪಡಿಸಿದ್ದು ಖುದ್ದು ಅಂದಿನ ಸಭೆಯಲ್ಲಿದ್ದ ನಾಯಕರಿಗೆ ಮುಜುಗುರ ತಂದಿದೆ

ಶಿವಕುಮಾರ ಕುಷ್ಟಗಿ ಗದಗ

ಲೋಕ ಸಮರದಲ್ಲಿ ಬಿಜೆಪಿ ಗೆದ್ದು ಬೀಗುವ ವಿಶ್ವಾಸದಲ್ಲಿದೆ. ಆದರೆ ಗದಗ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಹಲವಾರು ತಿಂಗಳಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಸೋಮವಾರ ಗದಗ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ಸ್ಫೋಟಗೊಂಡಿದೆ.

ಬಿಜೆಪಿ ವರಿಷ್ಠರು, ಸಚಿವರು, ಮಾಜಿ ಸಚಿವರು, ಶಾಸಕರು ನಮ್ಮದು ಅತ್ಯಂತ ಶಿಸ್ತಿನ ಪಕ್ಷವೆಂದು ಎಲ್ಲ ಕಡೆಗಳಲ್ಲಿಯೂ ಹೇಳುತ್ತಲೇ ಬರುತ್ತಾರೆ. ಆದರೆ ವೈರುಧ್ಯ ಎನ್ನುವಂತೆ ಅವರ ಪಕ್ಷದ ಹಲವಾರು ಕಾರ್ಯಕರ್ತರು ರೆಬಲ್ ಆಗಿ ಪಕ್ಷದ ಕಚೇರಿಯಲ್ಲಿ ನೇರವಾಗಿಯೇ ವಿರೋಧ ವ್ಯಕ್ತಪಡಿಸಿದ್ದು ಖುದ್ದು ಅಂದಿನ ಸಭೆಯಲ್ಲಿದ್ದ ನಾಯಕರಿಗೆ ಮುಜುಗುರ ತಂದಿದೆ.

ಏನಿದು ಗಲಾಟೆ: ಜಿಲ್ಲೆಯ ಮುಂಡರಗಿ ಮಂಡಲ ಅಧ್ಯಕ್ಷರು ಏಕ ಪಕ್ಷೀಯವಾಗಿ ಪದಾಧಿಕಾರಿಗಳ ನೇಮಕ ಮಾಡಿದ್ದಾರೆ. ಮುಂಡರಗಿ ವಿಭಾಗದ ಎಲ್ಲ ಸಭೆಗಳು ಅಧ್ಯಕ್ಷರ ಮನೆಯಲ್ಲಿಯೇ ನಡೆಸುವುದು ಸೇರಿದಂತೆ ಹಲವಾರು ರೀತಿಯ ಸಮಸ್ಯೆಗಳ ಬಗ್ಗೆ ಹಲವಾರು ದಿನಗಳಿಂದ ಹೇಳುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗದೇ ಇರುವದರಿಂದ ಬೇಸತ್ತು ಸೋಮವಾರ ಜಿಲ್ಲಾ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಬಿದ್ದಿದೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಮತಗಳ ಲೆಕ್ಕಾಚಾರದಲ್ಲಿ ರೋಣ ಕ್ಷೇತ್ರದಲ್ಲಿ ಬಿಜೆಪಿ 25 ಸಾವಿರ ಮತಗಳ ಹಿನ್ನಡೆ ಅನುಭವಿಸಿತ್ತು, ಗದಗ ಕ್ಷೇತ್ರದಲ್ಲಿ 15 ಸಾವಿರ ಹಿನ್ನಡೆ ಅನುಭವಿಸಿತ್ತು. ನರಗುಂದ ಕ್ಷೇತ್ರದಲ್ಲಿ 1800 ಮುನ್ನಡೆ ಕಂಡಿದ್ದರೆ, ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಅತೀ ಹೆಚ್ಚು 28 ಸಾವಿರ ಮತಗಳ ಮುನ್ನಡೆ ಕಂಡುಕೊಂಡಿದ್ದು ಕಾರ್ಯಕರ್ತರ ಒಗ್ಗಟ್ಟಿನ ಫಲದಿಂದಾಗಿ, ಆದರೆ ಈ ಹಿಂದಿನ ಹಲವಾರು ಘಟನೆಗಳನ್ನು ಗಮನಿಸಿದಾಗಲೂ, ಕಾರ್ಯಕರ್ತರು, ಪದಾಧಿಕಾರಿಗಳ ನೇಮಕದ ಗೊಂದಲ ಅತೀ ಹೆಚ್ಚು ಕಂಡು ಬರುತ್ತಿರುವುದು ಶಿರಹಟ್ಟಿ ಕ್ಷೇತ್ರದಲ್ಲಿಯೇ ಯಾಕೆ ? ಇದೇನು ಹಾಲಿ ಶಾಸಕರ ದೌರ್ಬಲ್ಯವೋ? ಅಥವಾ ಅನ್ಯ ಕ್ಷೇತ್ರಗಳ ಪ್ರಭಾವಿಗಳ ದಬ್ಬಾಳಿಕೆಯಿಂದ ಹೀಗಾಗುತ್ತಿದೆಯೋ? ಅಥವಾ ಕ್ಷೇತ್ರದಲ್ಲಿ ಹಿಡಿತ ತಪ್ಪುತ್ತಿದೆ ಎನ್ನುವ ಕಾರಣಕ್ಕಾಗಿ ಪಕ್ಷದಲ್ಲಿರುವವರೇ ಮಾಡುತ್ತಿರುವ ಪ್ರಯತ್ನವೇ? ಇದಕ್ಕೆ ಬಿಜೆಪಿಯ ಹಿರಿಯ ನಾಯಕರೇ ಉತ್ತರಿಸಬೇಕಿದೆ.

ಕ್ರಮವಿಲ್ಲವೇ: ಸೋಮವಾರ ಮಾಜಿ ಸಿಎಂ, ಹಾವೇರಿ-ಗದಗ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ಗೊಂದಲ ಸೃಷ್ಟಿಯಾಗಿದ್ದು, ಇದರ ಎಲ್ಲ ವಿಡಿಯೋ, ಆಡಿಯೋಗಳು ಲಭ್ಯವಿದ್ದರೂ ಪಕ್ಷದ ಜಿಲ್ಲಾಧ್ಯಕ್ಷರು ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ಪಕ್ಷ ಎಂದರೆ ತಾಯಿ ಇದ್ದಂತೆ, ತಾಯಿಗೆ ಅಗೌರವ ತೋರಿದವರ ಮೇಲೆ ಕ್ರಮ ಆಗಬೇಕು, ಒಮ್ಮೆ ಯಾರ ಮೇಲಾದರೂ ಪಕ್ಷ ಶಿಸ್ತಿನ ಕ್ರಮ ಜರುಗಿಸಿದರೆ ಸಾಕು ಇನ್ನುಳಿದವರು ಪಕ್ಷದ ವಿರುದ್ಧ ಮಾತನಾಡುವುದನ್ನು ನಿಲ್ಲಿಸುತ್ತಾರೆ. ಅಂತಾ ಧೈರ್ಯದ ಕ್ರಮ ತೆಗೆದುಕೊಳ್ಳಲು ಇವರಿಂದ ಸಾಧ್ಯವಿಲ್ಲ ಎನ್ನುತ್ತಾರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು.

ಅಂದಿನ ಸಭೆಯಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅವರು ಕೂಡಾ ನಮ್ಮ ಪಕ್ಷದ ಕಾರ್ಯಕರ್ತರೇ, ಈಗಾಗಲೇ ಅವರೊಂದಿಗೆ ಚರ್ಚಿಸಿದ್ದೇವೆ. ಘಟನೆ ಕುರಿತು ಪಕ್ಷದ ವರಿಷ್ಠರಿಗೆ ತಿಳಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು (ತೋಟಪ್ಪ) ಕುರುಡಗಿ ಹೇಳಿದರು.

ಮುಂಡರಗಿ ಮಂಡಲ ಪದಾಧಿಕಾರಿಗಳ ಆಯ್ಕೆಯ ವಿಷಯದಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆಯೇ ನಿಷ್ಕ್ರೀಯವಾಗಿರುವ, ಪಕ್ಷ ಸಂಘಟನೆಗೆ ಸ್ಪಂದಿಸದೇ ಇರುವವರನ್ನು ಬದಲಾಯಿಸಿ ಹೊಸ ಯುವಕರಿಗೆ ಆದ್ಯತೆ ನೀಡಲಾಗಿದೆ. ಮುಂಡರಗಿ ಮಂಡಲದ ಹಿರಿಯರು, ಸದಸ್ಯರೆಲ್ಲ ನಿರ್ಣಯಿಸಿ ಜಿಲ್ಲಾಧ್ಯಕ್ಷರಿಗೆ ಪಟ್ಟಿ ರವಾನಿಸಲಾಗಿತ್ತು. ಪಕ್ಷದ ರಾಜ್ಯ ಘಟಕಕ್ಕೆ ತಿಳಿಸಿ ನಂತರ ಘೋಷಣೆ ಮಾಡಿದ್ದಾರೆ ಎಂದು ಮುಂಡರಗಿ ಮಂಡಲ ಬಿಜೆಪಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹೇಳಿದರು.