- ಜಿಲ್ಲೆಯ 1,230 ಮತಗಟ್ಟೆಗಳ ಪೈಕಿ ಈವರೆಗೆ ಕೇವಲ 690 ಮತಗಟ್ಟೆಗೆ ಮಾತ್ರ ಪಕ್ಷದ ಏಜೆಂಟ್‌ ನೇಮಕ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮತಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ಐಆರ್‌) ವೇಳೆ ಪಶ್ಚಿಮ ಬಂಗಾಳದಲ್ಲಿ 90 ಲಕ್ಷಕ್ಕೂ ಹೆಚ್ಚು ಮತ ದಾರರ ಹೆಸರು ರದ್ದಾದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಕಾಂಗ್ರೆಸ್‌ ನಾಯಕರು ಕಟ್ಟೆಚ್ಚರ ವಹಿಸಿದ್ದರೂ, ಎಐಸಿಸಿ ಹಾಗೂ ಕೆಪಿಸಿಸಿ ಸೂಚನೆ ಹೊರತಾಗಿಯೂ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಮುಖಂಡರು ಎಸ್ಐಆರ್‌ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

ಜಿಲ್ಲೆಯ 1,230 ಮತಗಟ್ಟೆಗಳ ಪೈಕಿ ಈವರೆಗೆ ಕೇವಲ 690 ಮತಗಟ್ಟೆಗೆ ಮಾತ್ರ ಪಕ್ಷದ ಏಜೆಂಟ್‌ಗಳನ್ನು (ಬಿಎಲ್‌ಎ-2) ನೇಮಿಸಿದ್ದು, ಉಳಿದ 540 ಮತಗಟ್ಟೆಗಳಿಗೆ ಈವರೆಗೂ ನೇಮಿಸುವ ಗೋಜಿಗೆ ಹೋಗಿಲ್ಲ. ಪ್ರಾಮಾಣಿಕ ಕಾರ್ಯಕರ್ತರು ಕರ್ತವ್ಯ ನಿರ್ವಹಿಸಲು ಸಿದ್ಧರಿದ್ದರೂ ಅವರನ್ನು ಬಳಕೆ ಮಾಡಿಕೊಳ್ಳಲು ನಾಯಕರು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.


ಇತ್ತೀಚಿಗೆ ಬೆಂಗಳೂರಿನ ಹೊರ ವಲಯದಲ್ಲಿ ರಾಜ್ಯ ಕಾಂಗ್ರೆಸ್‌ ನಿಂದ ಆಯೋಜಿಸಿದ್ದ ಎಸ್‌ಐಆರ್‌ ಕುರಿತ ಸಭೆಗೆ ವಿವಿಧ ಜಿಲ್ಲೆಯ ಸುಮಾರು 30 ಪ್ರಧಾನ ಕಾರ್ಯದರ್ಶಿಗಳು ಹಾಜರಾಗಿರಲಿಲ್ಲ. ಹೀಗಾಗಿ, ಆ ಎಲ್ಲರನ್ನೂ ಹುದ್ದೆಯಿಂದ ವಜಾಗೊಳಿಸಿದ ಕೆಪಿಸಿಸಿ, ಎಸ್‌ಐಆರ್‌ ಪ್ರಕ್ರಿಯೆ ಎಷ್ಟು ಗಂಭೀರ ಎಂಬುದನ್ನು ತಿಳಿಸಿತ್ತು. ಆದರೆ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಮುಖಂಡರಿಗೆ ಎಸ್‌ಐಆರ್‌ ಗಂಭೀರತೆ ಇನ್ನೂ ಅರ್ಥವಾದಂತೆ ಕಾಣುತ್ತಿಲ್ಲ ಎಂಬುದು ಬೂತ್‌ಮಟ್ಟದ ಏಜೆಂಟ್‌-2 (ಬಿಎಲ್‌ಎ-2) ನೇಮಕಾತಿ ನಿರ್ಲಕ್ಷ್ಯ ಧೋರಣೆಯಲ್ಲಿ ಕಾಣುತ್ತಿದೆ.

ಜಿಲ್ಲೆಯಲ್ಲಿ ಇನ್ನೂ ಶೇ.90 ರಷ್ಟು ಮ್ಯಾಪಿಂಗ್‌ ಆಗಿಲ್ಲ. ಇನ್ನೂ 1.03 ಲಕ್ಷಕ್ಕೂ ಹೆಚ್ಚು ಮತದಾರರು ಪತ್ತೆ ಆಗಿಲ್ಲ. ಜಿಲ್ಲೆಯಲ್ಲಿ ಎಸ್‌ಐಆರ್‌ ಮ್ಯಾಪಿಂಗ್‌ ನಲ್ಲಿ ಹಿನ್ನೆಡೆಗೆ ಇದೂ ಸಹ ಪ್ರಮುಖ ಕಾರಣ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಇದೇ ಜೂ.20 ರಿಂದ ಅಧಿಕೃತವಾಗಿ ಎಸ್‌ಐಆರ್‌ ಆರಂಭಗೊಳ್ಳಲಿದ್ದು, ಆಗ ಮ್ಯಾಪಿಂಗ್‌ನಿಂದ ಹೊರಗಿ ರುವ ಬಹುತೇಕ ಮತದಾರರ ಹೆಸರು ಪಟ್ಟಿಯಿಂದ ಡಿಲಿಟ್‌ ಆಗುವ ಸಾಧ್ಯತೆ ಹೆಚ್ಚಾಗಿದೆ. ಈ ಎಲ್ಲ ಮಾಹಿತಿ ಇದ್ದರೂ ಕಾಂಗ್ರೆಸ್‌ ಮುಖಂಡರು ಮಾತ್ರ ನಿಶ್ಚಿಂತೆಯಾಗಿದ್ದಾರೆ.

ರಾಷ್ಟ್ರೀಯ ಪಕ್ಷಗಳಿಗೆ ಏಜೆಂಟ್‌ ನೇಮಕಕ್ಕೆ ಅವಕಾಶ

ಅನಗತ್ಯವಾಗಿ ಅರ್ಹ ಮತದಾರರ ಹೆಸರು ಮತಪಟ್ಟಿಯಿಂದ ಬಿಟ್ಟು ಹೋಗದಂತೆ ನಿಗಾ ವಹಿಸಲು ರಾಷ್ಟ್ರೀಯ ಪಕ್ಷದ ಏಜೆಂಟ್‌ಗಳನ್ನು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ. ಅದರಂತೆ ಜಿಲ್ಲಾ ಚುನಾವಣಾ ಶಾಖೆಯಿಂದ ಹಲವು ಬಾರಿ ಪತ್ರ ಬರೆದು ಬೂತ್‌ಮಟ್ಟದ ಏಜೆಂಟ್‌ ನೇಮಕಕ್ಕೆ ತಿಳಿಸಿದರೂ ಈವರೆಗೆ ಪೂರ್ಣ ಪ್ರಮಾಣದಲ್ಲಿ ನೇಮಿಸಿಲ್ಲ.ಜಿಲ್ಲೆಯಲ್ಲಿ ಒಟ್ಟು 1230 ಮತಗಟ್ಟೆಗಳ ಪೈಕಿ ಬಿಜೆಪಿಯಿಂದ 1208 ಮತಗಟ್ಟೆಗಳಿಗೆ ಬಿಎಲ್‌ಎ-2 ನೇಮಿಸಲಾಗಿದೆ. ಕಾಂಗ್ರೆಸ್‌ ನಿಂದ 690 ಮತಗಟ್ಟೆಗೆ, ಜೆಡಿಎಸ್‌ 172 ಮತಗಟ್ಟೆಗೆ ಮಾತ್ರ ನೇಮಿಸ ಲಾಗಿದೆ. ಉಳಿದಂತೆ ಎಎಪಿ, ಬಿಎಸ್‌ಪಿ, ಸಿಪಿಐ-ಎಂ, ಎನ್‌ಪಿಪಿ ಪಕ್ಷಗಳು ಯಾವುದೇ ಒಂದು ಮತಗಟ್ಟೆಗೂ ನೇಮಿಸಿಲ್ಲ ಎಂದು ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.---ಬಾಕ್ಸ್‌---

ಹಿರಿಯ ನಾಯಕರ ಸೂಚನೆ ನಿರ್ಲಕ್ಷ್ಯ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಹಿರಿಯ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಎಸ್‌ಐಆರ್‌ ಕಾರ್ಯದ ಬಗ್ಗೆ ನಿಗಾವಹಿಸುವುದಕ್ಕೆ ಜಿಲ್ಲೆ ಕಾಂಗ್ರೆಸ್‌ಗೆ ಸೂಚಿಸಲಾಗಿದೆ. ಆದರೆ, ಜಿಲ್ಲೆಯ ಕಾಂಗ್ರೆಸ್‌ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಕಳೆದ ಮೇ ನಲ್ಲಿ ಚಿಕ್ಕಮಗಳೂರಿಗೆ ವಿಧಾನಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಆಗಮಿಸಿದ ವೇಳೆ ಎಸ್‌ಐಆರ್‌ ಕುರಿತು ನಡೆಸಿದ ಸಭೆ ಸೇರಿದಂತೆ ಈವರೆಗೆ 2 ರಿಂದ 3 ಸಭೆಗೆ ಮಾತ್ರ ಜಿಲ್ಲಾ ಕಾಂಗ್ರೆಸ್‌ ಸೀಮಿತವಾಗಿದೆ.

----ಬಾಕ್ಸ್‌---

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಏಜೆಂಟ್‌ ನೇಮಿಸಿಲ್ಲ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 261 ಮತಗಟ್ಟೆಗಳ ಪೈಕಿ ಕಾಂಗ್ರೆಸ್‌ನಿಂದ ಒಂದೇ ಒಂದು ಮತಗಟ್ಟೆಗೆ ಬೂತ್‌ಮಟ್ಟದ ಏಜೆಂಟ್‌ ನೇಮಕ ಮಾಡಿಲ್ಲ. ಆದರೆ, ಕಡೂರು ವಿಧಾನಸಭಾ ಕ್ಷೇತ್ರದ ಎಲ್ಲ 253ಕ್ಕೆ ಕಾಂಗ್ರೆಸ್‌ ಬಿಎಲ್‌ಎ-2 ನೇಮಿಸಿದೆ.

---ಬಾಕ್ಸ್‌---

ಜೆಡಿಎಸ್‌ ನಿಂದ ಒಂದು ಕ್ಷೇತ್ರಕ್ಕೆ ಮಾತ್ರ ನೇಮಕ

ಜಿಲ್ಲೆಯ ಜೆಡಿಎಸ್‌ನಿಂದ ಶೃಂಗೇರಿ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳ ಪೈಕಿ 172 ಮತಗಟ್ಟೆಗೆ ಮಾತ್ರ ಜೆಡಿಎಸ್‌ನಿಂದ ಬಿಎಲ್‌ಎ-2ಗಳನ್ನು ನೇಮಕ ಮಾಡಲಾಗಿದೆ. ಉಳಿದಂತೆ ಯಾವುದೇ ವಿಧಾನ ಸಭಾ ಕ್ಷೇತ್ರಕ್ಕೆ ತನ್ನ ಏಜೆಂಟ್‌ಗಳನ್ನು ನೇಮಿಸಿಲ್ಲ.

---ಬಾಕ್ಸ್‌---

ಬಿಎಲ್‌ಎ-2 ಕಾರ್ಯ ಏನು?

ಚುನಾವಣಾ ಆಯೋಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎಲ್ಲಾ ರಾಷ್ಟ್ರೀಯ ಪಕ್ಷದಿಂದ ತಲಾ ಒಬ್ಬ ಬಿಎಲ್‌ಎ-1 ನೇಮಕಕ್ಕೆ ಅವಕಾಶ ನೀಡಿದೆ. ಅದೇ ರೀತಿ ಪ್ರತಿ ಮತಗಟ್ಟೆಗೆ ಬಿಎಲ್‌ಎ-2 ನೇಮಕಕ್ಕೆ ಅವಕಾಶ ನೀಡಿದೆ.

ಬಿಎಲ್‌ಎ-1 ತರಬೇತಿ ಕಾರ್ಯದಲ್ಲಿ ಭಾಗವಹಿಸುವುದು, ಆ ವಿಚಾರಗಳನ್ನು ಪಕ್ಷದ ಮುಖಂಡರಿಗೆ, ಕಾರ್ಯ ಕರ್ತರಿಗೆ ತಿಳಿಸುವುದಾಗಿದೆ. ಆದರೆ, ಬೂತ್‌ಮಟ್ಟದಲ್ಲಿ ಬಿಎಲ್‌ಎ-2 ಪಾತ್ರ ಹೆಚ್ಚಾಗಿದೆ.

ಬಿಎಲ್‌ಎ-2 ಬೂತ್‌ಮಟ್ಟ ಅಧಿಕಾರಿಗಳೊಂದಿಗೆ (ಬಿಎಲ್‌ಒ) ಸಮನ್ವಯ ಸಾಧಿಸುವುದು. ಮ್ಯಾಪಿಂಗ್‌ ಆಗದಿರುವ ಮತದಾರರ ಮ್ಯಾಪಿಂಗ್‌ ಕಾರ್ಯಕ್ಕೆ ಸಹಾಯ ಮಾಡುವುದು. ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಅರ್ಹ ಮತದಾರರು ಮ್ಯಾಪಿಂಗ್‌ನಿಂದ ಹೊರಗೆ ಉಳಿಯದಂತೆ ನಿಗಾ ವಹಿಸುವುದಾಗಿದೆ.---ಬಾಕ್ಸ್‌----

ಬೂತ್‌ ಮಟ್ಟದ ಏಜೆಂಟ್‌-2 ನೇಮಕದ ವಿವರವಿಧಾನಸಭಾ ಕ್ಷೇತ್ರಮತಗಟ್ಟೆ ಸಂಖ್ಯೆಬಿಜೆಪಿಕಾಂಗ್ರೆಸ್‌ಜೆಡಿಎಸ್‌

ಶೃಂಗೇರಿ256234223172

ಮೂಡಿಗೆರೆ23123100

ಚಿಕ್ಕಮಗಳೂರು26126100

ತರೀಕೆರೆ2292292140

ಕಡೂರು2532532530

ಒಟ್ಟು12301208690172

(ಕಾಂಗ್ರೆಸ್‌ ಲೋಗೋ ಬಳಸಿ ಜತೆಗೆ ಸೂಕ್ತ ಫೋಟೋ ಬಳಸಿ)