ತಾಯಿ ಹಾಲಿನ ಬ್ಯಾಂಕ್‌ಗೆ ಉದ್ಘಾಟನೆ ಭಾಗ್ಯ ಎಂದು?

| Published : Jul 01 2024, 01:52 AM IST

ಸಾರಾಂಶ

ಆಸ್ಪತ್ರೆ ಕಟ್ಟಡ ದುರಸ್ತಿಗೆಂದು ಮಂಜೂರಾಗಿದ್ದ ೭೦ ಲಕ್ಷ ರು.ಗಳನ್ನು ಎದೆ ಹಾಲಿನ ಬ್ಯಾಂಕ್‌ಗೆ ಬಳಸಿಕೊಳ್ಳುವ ಸಲುವಾಗಿ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಾಯಿತು. ಅದರ ಪರಿಣಾಮವಾಗಿ ಎಸ್ಸೆನ್ನಾರ್‌ ಆಸ್ಪತ್ರೆಯಲ್ಲಿ ಒಂದು ತಿಂಗಳ ಹಿಂದೆ ಎದೆ ಹಾಲಿನ ಬ್ಯಾಂಕ್ ಸಜ್ಜಾಗಿ ನಿಂತಿದೆ.

ಕನ್ನಡಪ್ರಭ ವಾರ್ತೆ ಕೋಲಾರರಕ್ತ ನಿಧಿಯ ರೀತಿಯಲ್ಲೇ ಕೋಲಾರ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಶೀಘ್ರದಲ್ಲೇ ತಾಯಿ ಹಾಲಿನ ಬ್ಯಾಂಕ್ ಆರಂಭಗೊಳ್ಳಲಿದೆ. ತಾಯಿಯ ಎದೆ ಹಾಲು ಸಿಗದೆ ನರಳುವ ಹಸುಗೂಸುಗಳಿಗೆ ಬೇರೆ ಮಹಿಳೆಯರ ಎದೆ ಹಾಲು ದೊರಕಿಸಿ ಅಮ್ಮನ ಎದೆ ಹಾಲಿನ ಸವಿಯನ್ನು ಮಕ್ಕಳಿಗೆ ದೊರಕಿಸುವುದೇ ಇದರ ಉದ್ದೇಶವಾಗಿದೆ.

ಹಿಂದೆ ತಾಯಿಯ ಎದೆ ಹಾಲಿನ ಕೊರತೆ ಮಗುವಿಗೆ ಉಂಟಾದ ವೇಳೆ ಗ್ರಾಮೀಣ ಜನತೆ ಸಮೀಪದಲ್ಲೇ ಇದ್ದ ಬಾಣಂತಿಯರ ಎದೆಹಾಲನ್ನು ಮಗುವಿಗೆ ಕುಡಿಸಿ ‘ಶಕ್ತಿ’ ತುಂಬುವ ಕೆಲಸ ಮಾಡುತ್ತಿದ್ದರು. ಹೀಗೆ ಬೇರೆ ಮಹಿಳೆಯ ಎದೆ ಹಾಲು ಕುಡಿದು ಬದುಕಿ ಬಾಳಿದ ಎಷ್ಟೋ ಮಂದಿ ಇಂದಿಗೂ ಇದ್ದಾರೆ.ತಾಯಿ ಎದೆಹಾಲಿನ ಬ್ಯಾಂಕ್‌

ಇದೇ ಪರಿಕಲ್ಪನೆಯಲ್ಲಿ ಆಸ್ಪತ್ರೆಗಳಲ್ಲೂ ತಾಯಿ ಎದೆ ಹಾಲಿನ ಬ್ಯಾಂಕ್‌ನ್ನು ಆರಂಭಿಸುವ ಸಂಸ್ಕೃತಿ ಕಳೆದ ಕೆಲ ದಶಕಗಳಲ್ಲಿ ಆರಂಭವಾಯಿತು. ಬೆಂಗಳೂರಿನ ತಾಯಿ ಮಗುವಿನ ಆಶ್ರಯಧಾಮ ಎಂದೇ ಖ್ಯಾತವಾದ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಕಳೆದೊಂದು ದಶಕದ ಹಿಂದೆಯೇ ಈ ರೀತಿಯ ಎದೆ ಹಾಲಿನ ಬ್ಯಾಂಕ್ ಆರಂಭಗೊಂಡಿದೆ.ಅದೇ ರೀತಿಯ ತಾಯಿ ಎದೆ ಹಾಲಿನ ಬ್ಯಾಂಕನ್ನು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯ ತಾಯಿ-ಮಗುವಿನ ಆಸ್ಪತ್ರೆಯಲ್ಲಿ ಇದೀಗ ಸಜ್ಜುಗೊಳಿಸಲಾಗಿದೆ. ಹಿಂದಿನ ಆರೋಗ್ಯ ಸಚಿವ ರಮೇಶ್‌ಕುಮಾರ್ ಮತ್ತು ಆಗಿನ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಸರ್ಜನ್ ದಿವಂಗತ ಶಿವಕುಮಾರ್ ಅವರ ಪರಿಶ್ರಮದ ಫಲವಾಗಿ ರಾಜ್ಯದಲ್ಲೇ ಅತ್ಯಂತ ಸುಸಜ್ಜಿತ ತಾಯಿ ಮಗುವಿನ ಅಸ್ಪತ್ರೆ ಕೋಲಾರದ ಎಸ್‌ಎನ್‌ಆರ್ ಆವರಣದಲ್ಲಿ ರೂಪುಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ಕೋಲಾರ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಪ್ರತಿ ತಿಂಗಳೂ ಸರಾಸರಿ ೪೦೦- ೪೫೦ ಪ್ರಸವಗಳು ನಡೆಯುತ್ತಿವೆ. ಹೀಗೆ ಹುಟ್ಟುವ ಮಕ್ಕಳಲ್ಲಿ ಹಲವು ಬಾಣಂತಿಯರಿಗೆ ವಿವಿಧ ಕಾರಣಗಳಿಗಾಗಿ ಎದೆ ಹಾಲಿನ ಕೊರತೆ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಿಂದ ನವಜಾತ ಶಿಶುಗಳಿಗೆ ತಾಯಿಯ ಹಾಲು ಸಿಗುವಂತೆ ಮಾಡಲು ಜಿಲ್ಲಾ ಸರ್ಜನ್ ಡಾ.ವಿಜಯಕುಮಾರ್ ಎದೆ ಹಾಲಿನ ನಿಧಿಯನ್ನು ಆರಂಭಿಸುವ ಆಲೋಚನೆ ಮಾಡಿದರು.

ಆಸ್ಪತ್ರೆ ಕಟ್ಟಡ ದುರಸ್ತಿ ಮತ್ತು ಸುಣ್ಣಬಣ್ಣ ಬಳಿಯಲು ಬಂದಿದ್ದ ಸುಮಾರು ೭೦ ಲಕ್ಷ ರು.ಗಳನ್ನು ಜಿಲ್ಲಾಧಿಕಾರಿಗಳ ನಿಧಿಯ ಹಣವನ್ನು ಎದೆ ಹಾಲಿನ ಬ್ಯಾಂಕ್‌ಗೆ ಬಳಸಿಕೊಳ್ಳುವ ಸಲುವಾಗಿ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಾಯಿತು. ಅದರ ಪರಿಣಾಮವಾಗಿ ಒಂದು ತಿಂಗಳ ಹಿಂದೆಯೇ ಎದೆ ಹಾಲಿನ ಬ್ಯಾಂಕ್ ಸಜ್ಜಾಗಿದ್ದು, ಉದ್ಘಾಟನೆಗೆ ಕಾಯುತ್ತಿದೆ.

ಜನಪ್ರತಿನಿಧಿಗಳಿಗೆ ಸಮಯ ಸಿಕ್ಕಿಲ್ಲ

ಪ್ರಚಾರಪ್ರಿಯ ಜನಪ್ರತಿನಿಧಿಗಳು ಇನ್ನೂ ಇದರ ಉದ್ಘಾಟನೆಗೆ ದಿನಾಂಕ ನೀಡಿಲ್ಲ. ಅವರಿಂದ ಉದ್ಘಾಟನೆ ವಿಳಂಬವಾಗುತ್ತಿದ್ದು, ಅದೆಷ್ಟೋ ಶಿಶುಗಳು ಅಮ್ಮನ ಹಾಲಿನಿಂದ ವಂಚಿತವಾಗುತ್ತಿವೆ. ಈಗಲಾದರೂ ಜನಪ್ರತಿನಿಧಿಗಳು ಶಿಶುಗಳಿಗೆ ಜೀವನಾಮೃತವಾತ ತಾಯಿ ಹಾಲು ದೊರಕುವಂತೆ ಮಾಡಲು ತಾಯಿ ಹಾಲಿನ ಬ್ಯಾಂಕ್‌ ಉದ್ಘಾಟನೆಗೆ ಮನಸ್ಸು ಮಾಡಬೇಕಿದೆ.

--------------ಬಾಕ್ಸ್‌.....

ಹಾಲು ಸಂರಕ್ಷಿಸುವ ವ್ಯವಸ್ಥೆ

ಕೋಲಾರ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಸಜ್ಜಾಗಿರುವ ಎದೆ ಹಾಲಿನ ಬ್ಯಾಂಕ್‌ನ ಉಸ್ತುವಾರಿಯನ್ನು ಮಕ್ಕಳ ತಜ್ಞ ಡಾ.ಕರುಣಾಕರ್‌ಗೆ ವಹಿಸಲಾಗಿದೆ. ಇದರ ಕಾರ್ಯನಿರ್ವಹಣೆಗಾಗಿ ಹಲವಾರು ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ. ಮಹಿಳೆಯರ ಎದೆ ಹಾಲನ್ನು ಇಲ್ಲಿ ಸಂಗ್ರಹಿಸಲಾಗುವುದು. ೨೧ ದಿನಗಳ ಕಾಲ ಈ ಹಾಲನ್ನು ಪಾಶ್ಚೀಕರಿಸಿ ನಿಗಾ ವಹಿಸಲಾಗುವುದು. ಆ ಹಾಲು ಮತ್ತೊಂದು ಮಗುವಿಗೆ ಉಣಿಸಲು ಯೋಗ್ಯ ಎಂಬುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಸಾಬೀತಾದ ನಂತರ ಅದನ್ನು ರೆಫ್ರಿಜಿರೇಟರ್‌ನಲ್ಲಿ ಸುರಕ್ಷಿತ ಬಾಟಲಿಗಳಲ್ಲಿ ತುಂಬಿಸಿ ಅಗತ್ಯವಾದ ಸಂದರ್ಭದಲ್ಲಿ ಬಳಸಲಾಗುವುದು.

ಈ ಹಾಲನ್ನು ೨ರಿಂದ ೩ ತಿಂಗಳ ಒಳಗೆ ಬಳಸಲು ಅವಕಾಶ ಇರುತ್ತದೆ. ಕೋಲಾರ ಎಸ್‌ಎನ್‌ಆರ್ ಹಾಲಿನ ಬ್ಯಾಂಕ್‌ನಲ್ಲಿ ಒಮ್ಮೆಲೆ ೧೦೦ ಲೀಟರ್ ಹಾಲು ಸಂಗ್ರಹಿಸಿ ಸಂರಕ್ಷಿಸುವ ವ್ಯವಸ್ಥೆ ಇದೆ.