ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗರಿಷ್ಠ ಸಂಖ್ಯೆಯ ಪರೀಕ್ಷೆಗಳು, ಸ್ಪಷ್ಟ ನೀತಿ ಇಲ್ಲದೆ ಇರುವುದನ್ನು ಚರ್ಚೆ ಮಾಡಲು ಶಿಕ್ಷಣ ತಜ್ಞರ ಸಭೆ ಕರೆಯಬೇಕು ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪರೀಕ್ಷೆಗೆ ಉತ್ತರ ಪತ್ರಿಕೆ ಕೊಡಲಾಗದಷ್ಟು ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
8ರಿಂದ 8.5 ಲಕ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನೀವು ಪ್ರಿಪರೇಟರಿ ಪರೀಕ್ಷೆ ನಡೆಸಲು ₹50 ಸಂಗ್ರಹಿಸಿ ಪ್ರಶ್ನೆಪತ್ರಿಕೆ ನೀಡುವುದಾದರೆ, ಉತ್ತರ ಪತ್ರಿಕೆ ನೀವೇ ತರಬೇಕು ಎನ್ನುವುದಾದರೆ ಸರ್ಕಾರ ಯಾವ ಮಟ್ಟದ ಅಧೋಗತಿಗೆ ತಲುಪಿದೆ? ಬಹಳಷ್ಟು ನೋವು, ಶಿಕ್ಷಣದ ಕುರಿತ ಕಳಕಳಿಯಿಂದ ಇದನ್ನು ಬಿಜೆಪಿ ಪ್ರಶ್ನಿಸುತ್ತಿದೆ ಎಂದರು.11 ಮತ್ತು 12ನೇ ತರಗತಿಗೆ ಎರಡೆರಡು ಸಪ್ಲಿಮೆಂಟರಿ ಪರೀಕ್ಷೆ ನಡೆಸಲು ಸರ್ಕಾರ ಅಸ್ತು ಎಂದಿದೆ. ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿ ಪರೀಕ್ಷೆ ನಡೆಸಲು ಸರ್ಕಾರ ಹಣ ಕೊಡುತ್ತಿಲ್ಲ. ವಿದ್ಯಾರ್ಥಿಗಳ ಬಳಿ ಹಣ ಸಂಗ್ರಹಿಸಿ, ಕೇವಲ ಪ್ರಶ್ನೆಪತ್ರಿಕೆ ಕೊಡುವುದಾಗಿ ಹೇಳುತ್ತಾರೆ. ಉತ್ತರ ಪತ್ರಿಕೆ ನೀಡುವುದಿಲ್ಲ ಎಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಿಕ್ಷಕರು ತಡವಾಗಿ ಶಾಲೆಗೆ ಬರುವಂತಾಗಿದೆ. ಹಳ್ಳಿಯಿಂದ ಸಣ್ಣಪುಟ್ಟ ಪಟ್ಟಣಕ್ಕೆ ಬರಲು ಶೇ.90ರಷ್ಟು ಶಿಕ್ಷಕ ವರ್ಗ ಬಸ್ಸನ್ನೇ ಆಶ್ರಯಿಸಿದೆ. ಉಚಿತ ಬಸ್‍ಗಳಿಂದಾಗಿ ಬಸ್‍ಗಳು ಲಭ್ಯ ಇಲ್ಲ. ಬಸ್ಸುಗಳು ಕಡಿಮೆಯಾಗಿವೆ; ವಿದ್ಯಾರ್ಥಿಗಳೂ ತಡವಾಗಿ ಬರುವಂತಾಗಿದೆ. ಉಚಿತ ಪ್ರಯಾಣದ ನಂತರ ಅರ್ಧಕ್ಕರ್ಧ ಬಸ್ ಕಡಮೆಯಾಗಿದೆ. ಬೆಳಿಗ್ಗೆ 10ಕ್ಕೆ ಶಾಲೆ ತೆರೆದರೆ 11, 12 ಗಂಟೆಗೆ ವಿದ್ಯಾರ್ಥಿಗಳು ಬರುವಂತಾಗಿದೆ. ಶಿಕ್ಷಕರೂ ಶಾಲೆಗೆ ಸಕಾಲದಲ್ಲಿ ಬರಲಾಗುತ್ತಿಲ್ಲ ಎಂದರು.ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣದ ಬಗ್ಗೆ ಕಾಳಜಿ ವಹಿಸದೆ ರಾಜಕಾರಣದಲ್ಲಿ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಸಚಿವರು, ಬೋರ್ಡ್ ಪರೀಕ್ಷೆ, ಗರಿಷ್ಠ ಸಂಖ್ಯೆ ಪರೀಕ್ಷೆ ಬೇಡವೆನ್ನುವ ಸರ್ಕಾರವೇ ಅತಿ ಹೆಚ್ಚು ಪರೀಕ್ಷೆ ನಡೆಸುತ್ತಿರುವುದು, ರಾಜ್ಯ ಪಠ್ಯಕ್ರಮ, ಕೇಂದ್ರೀಯ ಪಠ್ಯಕ್ರಮದ ಸಂಬಂಧ ಅನೇಕ ಶಿಕ್ಷಣ ಸಂಸ್ಥೆಗಳಿಂದ ಗೊಂದಲಮಯ ನಿರ್ಧಾರ ಕುರಿತಂತೆ ಪೋಷಕರು, ಶಿಕ್ಷಣ ತಜ್ಞರ ಸಭೆ ನಡೆಸಬೇಕು. ಸಂಘಟನೆಗಳು, ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಶಾಸಕರನ್ನೂ ಈ ಸಭೆಗೆ ಆಹ್ವಾನಿಸಬೇಕು ಎಂದು ರವಿಕುಮಾರ್ ಆಗ್ರಹಿಸಿದರು.