ಖಾಕಿ ಘನತೆ ಹೆಚ್ಚಿಸಿ: ಗೃಹ ರಕ್ಷಕರಿಗೆ ಎಸ್ಪಿ ಕರೆ

| Published : Mar 11 2024, 01:19 AM IST

ಸಾರಾಂಶ

10 ದಿನಗಳ ತರಬೇತಿ ಶಿಬಿರ ನಡೆಸಿಕೊಟ್ಟ ಬೋಧಕರಾದ ಚಂದನ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕ್ಯಾಂಪ್ ಕಮಾಂಡರ್ ಮಾರ್ಕ್‌ ಶೇರಾ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುಗೃಹ ರಕ್ಷಕರಿಗೆ 10 ದಿನಗಳ ಕಾಲ ನಡೆದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಭಾನುವಾರ ನಗರದ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ನಡೆಯಿತು.ಮುಖ್ಯ ಅತಿಥಿ, ದ.ಕ. ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಗೃಹ ರಕ್ಷಕದಳದಲ್ಲಿ ಕರ್ತವ್ಯ ನಿರ್ವಹಣೆ ಅತ್ಯಂತ ಗೌರವಯುತವಾದದ್ದು. ಖಾಕಿ ಸಮವಸ್ತ್ರಧಾರಿಗಳಾದ ಗೃಹರಕ್ಷಕರು ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.ಕೊರೋನಾ ಸಂದರ್ಭದಲ್ಲಿ ಅನನ್ಯ ಸೇವೆ ಸಲ್ಲಿಸಿದ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಸದಾಕಾಲ ಖಾಕಿಯ ಗೌರವಕ್ಕೆ ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ, ಮಾದರಿ ಗೃಹರಕ್ಷಕರಾಗಲು ಬೇಕಾದ ಎಲ್ಲ ರೀತಿಯ ತರಬೇತಿ ನೀಡಲಾಗಿದೆ. ಗೃಹರಕ್ಷಕರಿಗೆ ಪ್ರಥಮ ಚಿಕಿತ್ಸೆ ಹಾಗೂ ಹೃದಯ ಪುನಶ್ಚೇತನ ತರಬೇತಿಯನ್ನೂ ನೀಡಿ ಗೃಹರಕ್ಷಕರು ಈಗ ಜೀವರಕ್ಷಕರೂ ಆಗಿದ್ದಾರೆ. ಗೃಹರಕ್ಷಕರು ದೇಶದ ಒಳಗಿನ ಸೈನಿಕರು ಎಂದು ಹೇಳಿದರು.10 ದಿನಗಳ ತರಬೇತಿ ಶಿಬಿರ ನಡೆಸಿಕೊಟ್ಟ ಬೋಧಕರಾದ ಚಂದನ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕ್ಯಾಂಪ್ ಕಮಾಂಡರ್ ಮಾರ್ಕ್‌ ಶೇರಾ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಗೃಹ ರಕ್ಷಕರಾಗಿ ಹೊಸದಾಗಿ ನೋಂದಾಯಿತರಾದ ಗೃಹರಕ್ಷಕ ಮಾಲನ್ ಡಿ’ಸೋಜ, ಜಯಲಕ್ಷ್ಮಿ ಮತ್ತು ವಿಠಲ್ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ಅಧೀಕ್ಷಕ ಬಿ.ಎನ್. ಗೋಪಿನಾಥ್ ಸ್ವಾಗತಿಸಿ ನಿರೂಪಿಸಿದರು. ಪ್ರತಿಜ್ಞಾ ವಿಧಿಯನ್ನು ಬೋಧಕ ಚಂದನ್ ಬೋಧಿಸಿದರು. ಸೌಜನ್ಯಾ ಪ್ರಾರ್ಥಿಸಿದರು.