ಸಾರಾಂಶ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಗದಗ ನಗರದ ಹೊರವಲಯದಲ್ಲಿರುವ ಅಸುಂಡಿ ಕ್ರಾಸ್ ಬಳಿ ಅ 30ರಂದು ಬೆಳಗ್ಗೆ 9ಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಎಚ್ಚರಿಸಿದರು.
ನೂತನ ಸರ್ಕಾರ ಹಿಂದಿನ ಬೇಡಿಕೆಯಂತೆಯೇ 2ಎ ಮೀಸಲಾತಿ ನೀಡಲಿ-ಪಂಚಮಸಾಲಿ ಶ್ರೀ
ಗದಗ: ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಸಾತ್ವಿಕ ಪ್ರತಿಭಟನೆ ನಡೆಸಲಾಗಿದ್ದು, ಅದರ ಭಾಗವಾಗಿಯೇ ಗದಗ ನಗರದ ಹೊರವಲಯದಲ್ಲಿರುವ ಅಸುಂಡಿ ಕ್ರಾಸ್ ಬಳಿ ಅ 30 ರಂದು ಬೆಳಗ್ಗೆ 9ಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು. ಅವರು ಶನಿವಾರ ಗದಗ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ಸರ್ಕಾರದ ಕೊನೆ ಕೊನೆಗೆ ನಮ್ಮ ಹೋರಾಟಕ್ಕೆ ಮಣಿದು 2ಡಿ ಮೀಸಲಾತಿಯನ್ನು ನೀಡಿತ್ತು. ಆದರೆ ಅದು ಅನುಷ್ಠಾನವಾಗುವ ಪೂರ್ವದಲ್ಲಿಯೇ ಚುನಾವಣಾ ನೀತಿ ಸಂಹಿತೆ ಬಂದ ಹಿನ್ನೆಲೆಯಲ್ಲಿ ಅದು ಜಾರಿಯಾಗಿಲ್ಲ. ಅದಕ್ಕಾಗಿ ನೂತನ ಸರ್ಕಾರ ನಮ್ಮ ಹಿಂದಿನ ಬೇಡಿಕೆಯಂತೆಯೇ 2ಎ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಲು ಈ ಇಷ್ಟಲಿಂಗ ಪೂಜೆಯ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಭೇಟಿ ಮಾಡಿ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ನಿಟ್ಟಿನಲ್ಲಿ ಮನವಿ ಮಾಡಲಾಗಿತ್ತು. ಅವರು ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಹಲವಾರು ತಿಂಗಳುಗಳು ಕಳೆದರೂ ಅವರು ಸಭೆ ಕರೆಯಲಿಲ್ಲ, ಪದೇ ಪದೇ ಮುಖ್ಯಮಂತ್ರಿಗಳ ಮನೆಗೆ ಹೋಗಿ ಕೇಳುವುದು ಸರಿಯಲ್ಲ, ನಮ್ಮ ಸಂವಿಧಾನಬದ್ಧ ಹಕ್ಕನ್ನು ಹೋರಾಟದ ಮೂಲಕವೇ ಪಡೆಯಲು ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಲಾಗುತ್ತಿದೆ ಎಂದರು. ಲಿಂಗಾಯತರಿಗೆ ಮೀಸಲಾತಿ ಸಾಧ್ಯವೇ ಇಲ್ಲ ಎನ್ನುವ ಡಾ. ಜಾಮದಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈಗಾಗಲೇ ಲಿಂಗಾಯತ ಸಮುದಾಯದ ಹಲವಾರು ಸಮುದಾಯಗಳು 2ಎ, 3ಬಿಯಲ್ಲಿ ಇಲ್ಲವೇ ? ಇದು ಮೀಸಲಾತಿ ಅಲ್ಲವೇ ? ಅವರು ಬಹಳಷ್ಟು ಓದಿಕೊಂಡವರು, ಅಧ್ಯಯನಶೀಲರು. ಅವರು ಪುಸ್ತಕಗಳ ಆಧಾರದಲ್ಲಿ ಮಾತನಾಡುತ್ತಾರೆ. ನಾವು ಹೋರಾಟದ ಹಾದಿಯಲ್ಲಿ ಮಾತನಾಡುತ್ತೇವೆ, ನಾವು ಸ್ವಾತಂತ್ರ್ಯವನ್ನು ಪಡೆದಿದ್ದು ಹೋರಾಟದ ಮೂಲಕವೇ ಎಂದರು. ಸ್ವಾಮೀಜಿಗಳು ರಾಜಕಾರಣಿಗಳಂತೆ ಬೀದಿಗಿಳಿದು ಹೋರಾಟ ಮಾಡಬಾರದು ಎಂದಿರುವ ಬಸವರಾಜ ಹೊರಟ್ಟಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಅವರ ಸಮುದಾಯಕ್ಕೆ ಈಗಾಗಲೇ ಸಂವಿಧಾನ ಬದ್ಧವಾದ ಮೀಸಲಾತಿ ದೊರೆತಿದೆ. ಇನ್ನೊಂದು ಸಮುದಾಯದವರು ಕೇಳಿದರೆ ಅದರಿಂದ ಇವರಿಗೇನು ತೊಂದರೆ, ದಯವಿಟ್ಟು ನೀವು ಹಿರಿಯರಿದ್ದೀರಿ, ನಮ್ಮ ನ್ಯಾಯಯುತ ಹೋರಾಟವನ್ನು ಬೆಂಬಲಿಸಿ ಇಲ್ಲವೇ ಸುಮ್ಮನ್ನಿರಿ, ಸಮಾಜದಲ್ಲಿ ಇಲ್ಲ ಸಲ್ಲದ ಗೊಂದಲ ಸೃಷ್ಟಿಸಬೇಡಿ ಎಂದರು. ರಾಜ್ಯ ಸರ್ಕಾರ ಕೂಡಲೇ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಹಾಗೂ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಎಲ್ಲಾ ಲಿಂಗಾಯತರನ್ನು ಸೇರ್ಪಡೆಗೆ ಶಿಫಾರಸು ಮಾಡಬೇಕು, ಸಿದ್ಧರಾಮಯ್ಯ ಈಗಾಗಲೇ ಎರಡು ಸಮುದಾಯಗಳ ಮೀಸಲಾತಿ ವಿಷಯದಲ್ಲಿ ಕ್ರಮ ತೆಗೆದುಕೊಂಡಿದ್ದನ್ನು ಸ್ಮರಿಸಿಕೊಂಡರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ ಪಾಟೀಲ, ಯುವ ಘಟಕದ ಅಧ್ಯಕ್ಷ ಅಯ್ಯಪ್ಪ, ನಗರಸಭೆಯ ಅಧ್ಯಕ್ಷ ಮಹಾಂತೇಶ ನಲವಡಿ, ಸ್ವಾತಿ ಅಕ್ಕಿ ಮುಂತಾದವರು ಹಾಜರಿದ್ದರು.