ಎಸ್ಟಿ ಮೀಸಲು ಹೆಚ್ಚಳಕ್ಕೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಲಿ

| Published : Oct 29 2023, 01:00 AM IST

ಎಸ್ಟಿ ಮೀಸಲು ಹೆಚ್ಚಳಕ್ಕೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ. 7ರಷ್ಟು ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿದೆ. ಸಂವಿಧಾನದ 9 ಶೆಡ್ಯೂಲ್‌ನಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಬಳ್ಳಾರಿಯ ಸಹಕಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಾಗಲೇ ಶಿಕ್ಷಣದಲ್ಲಿ ಶೇ. ೭, ಉದ್ಯೋಗದಲ್ಲಿ ಹಾಗೂ ಮುಂಬಡ್ತಿಯಲ್ಲಿ ಶೇ. 7ರಷ್ಟು ಮೀಸಲಾತಿ ದೊರೆತಿದೆ. ವಾಲ್ಮೀಕಿ ಸಮಾಜದ ಅಧಿಕಾರಿಗಳು ಶೇ. ೭ರಷ್ಟು ಮೀಸಲಾತಿ ಪಡೆದಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಸಮಾಜದ ಏಳ್ಗೆಗೆ ಹಾಗೂ ಮೀಸಲಾತಿ ವಿಚಾರವಾಗಿ ಧ್ವನಿ ಎತ್ತಿದ್ದು, ಮೀಸಲಾತಿ ಜಾರಿಯೂ ಆಗಿದೆ ಎಂದರು.

ಹೊಸಪೇಟೆ: ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ. 7ರಷ್ಟು ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿದೆ. ಸಂವಿಧಾನದ 9 ಶೆಡ್ಯೂಲ್‌ನಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಪರಿಶಿಷ್ಟ ಕಲ್ಯಾಣ ಇಲಾಖೆ ಹಾಗೂ ತಾಲೂಕು ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಶಿಕ್ಷಣದಲ್ಲಿ ಶೇ. ೭, ಉದ್ಯೋಗದಲ್ಲಿ ಹಾಗೂ ಮುಂಬಡ್ತಿಯಲ್ಲಿ ಶೇ. 7ರಷ್ಟು ಮೀಸಲಾತಿ ದೊರೆತಿದೆ. ವಾಲ್ಮೀಕಿ ಸಮಾಜದ ಅಧಿಕಾರಿಗಳು ಶೇ. ೭ರಷ್ಟು ಮೀಸಲಾತಿ ಪಡೆದಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಸಮಾಜದ ಏಳ್ಗೆಗೆ ಹಾಗೂ ಮೀಸಲಾತಿ ವಿಚಾರವಾಗಿ ಧ್ವನಿ ಎತ್ತಿದ್ದು, ಮೀಸಲಾತಿ ಜಾರಿಯೂ ಆಗಿದೆ. ಈ ಮೂಲಕ ಸಮಾಜದ ಋಣ ತೀರಿಸಿರುವೆ. ವಾಲ್ಮೀಕಿ ಸಮುದಾಯ ಮಕ್ಕಳು ಎಸ್‌ಎಸ್ಎಲ್‌ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಮೇಲುಗೈ ಸಾಧಿಸುತ್ತಿರುವುದು ಸಂತಸದ ವಿಷಯವಾಗಿದೆ. ಸಮಾಜ ಬಾಂಧವರು ತಮ್ಮ ಮಕ್ಕಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಶಿಕ್ಷಣವಂತರನ್ನಾಗಿ ಮಾಡಲು ಮುಂದಾಗಬೇಕಿದೆ. ಶ್ರೀರಾಮುಲು ಅವರಿಗೆ ಕಷ್ಟ ಬಂದಾಗ ಹೊಸಪೇಟೆಯ ನಾಯಕ ಸಮಾಜದವರು ಯಾವಾಗಲೂ ಬೆನ್ನಿಗೆ ನಿಂತಿದ್ದಾರೆ ಎಂದರು.

ಮಾಜಿ ಸಚಿವ ಆನಂದ ಸಿಂಗ್ ಮಾತನಾಡಿ, ವಾಲ್ಮೀಕಿ ಸಮಾಜ ಬಾಂಧವರು ಪ್ರೀತಿ, ಆಶೀರ್ವಾದದಿಂದ ನಾನು ರಾಜಕೀಯದಲ್ಲಿ ಬೆಳೆದಿರುವೆ. ನನಗೆ ರಾಜಕೀಯ ಭವಿಷ್ಯ ನೀಡಿರುವ ಏಳುಕೇರಿಯ ವಾಲ್ಮೀಕಿ ಸಮಾಜ ಬಾಂಧವರನ್ನು ನನ್ನ ಕೊನೆ ಉಸಿರು ಇರುವವರೆಗೂ ಮರೆಯುವುದಿಲ್ಲ ಎಂದರು.

ವಾಲ್ಮೀಕಿ ಸಮಾಜದವರು ಮುಂದೆ ಸಿಎಂ ಆಗ್ತಾರೆ: ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದವರು ಮುಂದೆ ಸಿಎಂ ಆಗ್ತಾರೆ. ನಾನು ಯಾರು ಆಗ್ತಾರೆ ಎಂದು ಹೆಸರು ಹೇಳುವುದಿಲ್ಲ. ಸಮಾಜದ ಏಳ್ಗೆಗೆ ನಾವು ಈ ಪಕ್ಷ, ಆ ಪಕ್ಷ ಎಂದು ನೋಡುವುದಿಲ್ಲ. ಬಿಜೆಪಿ, ಕಾಂಗ್ರೆಸ್‌ ಯಾವುದೇ ಪಕ್ಷದಲ್ಲಿರಲಿ, ಸಮಾಜದವರು ಬೆಳೆಯುತ್ತಾರೆ ಎಂದರೆ ನಾವು ಸಾಥ್‌ ನೀಡುತ್ತೇವೆ ಎಂದರು.

ಎಸ್ಟಿ ಮೀಸಲಾತಿಗೆ ನಾವು ಪಕ್ಷಾತೀತವಾಗಿ ಸದನದ ಬಾವಿಗಿಳಿದು ಹೋರಾಟ ಮಾಡಿದ್ದೇವೆ. ಮುಂದೆಯೂ ಮೀಸಲಾತಿ ವಿಷಯದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ. ಈ ಭಾಗದ ಶಾಸಕರ ಜತೆಗೂಡಿ ನಾನು ಮುಖ್ಯಮಂತ್ರಿ ಬಳಿ ತೆರಳಿ 9 ಶೆಡ್ಯೂಲ್‌ನಲ್ಲಿ ಮೀಸಲಾತಿ ಹೆಚ್ಚಳ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯ ಮಾಡುವೆ ಎಂದರು.

ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ವಿಶ್ವಕ್ಕೆ ಮಹಾಕಾವ್ಯ ನೀಡಿದ ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಮರ್ಯಾದೆ ಪುರುಷ ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ಆದರ್ಶಗಳನ್ನು ಮಹರ್ಷಿ ವಾಲ್ಮೀಕಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಕನ್ನಡ ವಿವಿಯ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಮರೇಶ ಯತಗಲ್ ವಿಶೇಷ ಉಪನ್ಯಾಸ ನೀಡಿ, ಕೆಳವರ್ಗದ ಏಳ್ಗೆ ಸಹಿಸದ ಕೆಲವರು ಇತಿಹಾಸವನ್ನು ತಿರುಚಿದ್ದಾರೆ. ರಾಮಾಯಣ ರಚಿಸಿದ ವಾಲ್ಮೀಕಿಯನ್ನು ದರೋಡೆಕೋರ, ಕಳ್ಳ ಎಂದು ಬಿಂಬಿಸಿದ್ದಾರೆ. ನಿಜಕ್ಕೂ ಅವರೊಬ್ಬ ಅರಣ್ಯ ರಕ್ಷಕರಾಗಿದ್ದರು. ಕಳ್ಳಕಾಕರಿಗೆ ಬುದ್ಧಿ ಕಲಿಸಿದ್ದರು ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿದರು. ಸಮಾಜದ ಮುಖಂಡ ಎಸ್.ಎಸ್. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ದುರ್ಗಪ್ಪ ಪೂಜಾರಿ ಹಕ್ಕೊತ್ತಾಯ ಮಂಡಿಸಿದರು.

ಗೌರವ ಸನ್ಮಾನ: ಸಮಾಜದ ಹಿರಿಯರಾದ ಜಿ.ಕೆ. ಹನುಮಂತಪ್ಪ, ಕಿಚಿಡಿ ಲಕ್ಷ್ಮಣ, ಉಪ್ಪಿನ ಹನುಮಂತಪ್ಪ, ಕಂಪ್ಲಿ ಕಣಿಮೆಪ್ಪ, ಮಗಿಮಾವಿನ ಹಳ್ಳಿ ಹನುಮಂತಪ್ಪ ಅವರನ್ನು ಗಣ್ಯರು ಸನ್ಮಾನಿಸಿದರು.

ಪ್ರತಿಭಾ ಪುರಸ್ಕಾರ: ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗಣ್ಯರು, ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿದರು. ಈ ವೇಳೆ ಅಂತರ್ ಜಾತಿ ವಿವಾಹ ದಂಪತಿಗೆ ಪ್ರಮಾಣಪತ್ರ ವಿತರಿಸಲಾಯಿತು.ಮುಖಂಡರಾದ ನಾಣಕೇರಿ ಕನಕಪ್ಪ, ಬಿ.ಎಚ್. ಕಣಿಮೆಪ್ಪ, ಬಿಸಾಟಿ ದೊಡ್ಡ ತಾಯಪ್ಪ, ನಿಶಾನಿ ಕಣಿಮೆಪ್ಪ ಹಾಗೂ ಗಿಂಜಿ ಮಂಜುನಾಥ, ಅಪರ ಜಿಲ್ಲಾಧಿಕಾರಿ ಜಿ. ಅನುರಾಧಾ, ಎಸ್ಪಿ ಶ್ರೀಹರಿಬಾಬು, ಪರಿಶಿಷ್ಟ ಕಲ್ಯಾಣಾಧಿಕಾರಿ ಶಾಷು, ತಹಸೀಲ್ದಾರ್ ವಿಶ್ವಜಿತ್ ಮೆಹತಾ, ನಗರಸಭೆ ಅಧ್ಯಕ್ಷೆ ಎ. ಲತಾ, ಉಪಾಧ್ಯಕ್ಷ ಎನ್. ರೂಪೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್, ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಅಬ್ದುಲ್ ಖದೀರ್ ಮತ್ತಿತರರಿದ್ದರು. ಕಲಾಧ್ವನಿ ಸೇವಾ ಟ್ರಸ್ಟ್‌ನ ರೀನಾ ನಂದನ್‌ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹಂಪಿಯಿಂದ ಬೆಳಗ್ಗೆ ಜ್ಯೋತಿ ತರಲಾಯಿತು.

ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ನಂದಿಕೋಲು, ವೀರಗಾಸೆ, ಡೊಳ್ಳು ಕುಣಿತ, ಬೊಂಬೆ ಕುಣಿತ, ಹಗಲು ವೇಷಗಾರರು, ತಂಜಾವೂರು ಮೇಳ, ತಾಷಾರಂಡೋಲ್‌, ಕೋಲಾಟ, ಭಜನೆ ಮತ್ತು ಡಿಜೆ ಸಂಗೀತದೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ, ಕಲಶದೊಂದಿಗೆ ಸಾಗಿದರು.