ಉಡುಪಿ ಜಿಲ್ಲೆ: ಮಹಿಳಾ ಮತದಾರರ ಸಂಖ್ಯೆ ಜಾಸ್ತಿ
KannadaprabhaNewsNetwork | Published : Oct 29 2023, 01:00 AM IST
ಉಡುಪಿ ಜಿಲ್ಲೆ: ಮಹಿಳಾ ಮತದಾರರ ಸಂಖ್ಯೆ ಜಾಸ್ತಿ
ಕನ್ನಡಪ್ರಭ ವಾರ್ತೆ ಉಡುಪಿ ರಾಜ್ಯದ ಮತದಾರರ ಅಂತಿಮ ಪಟ್ಟಿಯು ಜ. 5ರಂದು ಪ್ರಕಟವಾಗಲಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಮತದಾರರ ಕರಡು ಪಟ್ಟಿ ಸಿದ್ದಪಡಿಸಲಾಗಿದೆ. ಜಿಲ್ಲೆಯಲ್ಲಿ 5,00,924 ಪುರುಷರು, 5,36,737 ಮಹಿಳೆಯರು, 16 ತೃತೀಯ ಲಿಂಗಿಗಳ ಸಹಿತ ಒಟ್ಟು 10,37,677 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಕರಡು ಪಟ್ಟಿಗೆ ಹೊಸ ಮತದಾರರ ಹೆಸರು ಸೇರ್ಪಡೆ, ರದ್ದತಿ, ವಿಧಾನಸಭಾ ಕ್ಷೇತ್ರದೊಳಗೆ ಹಾಗೂ ಹೊರಗೆ ವಿಳಾಸ ಬದಲಾವಣೆಗೆ ಡಿ. 26ರ ತನಕ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅ.27ರಂದು ರಾಜಕೀಯ ಪಕ್ಷಗಳಿಗೆ ಕರಡು ಮತದಾರರ ಪಟ್ಟಿಯನ್ನು ವಿತರಿಸಲಾಗುವುದು. ಪಟ್ಟಿಯಲ್ಲಿ ಯಾವುದೇ ಮತದಾರರ ಹೆಸರಿಲ್ಲದಿದ್ದರೆ ವೆಬ್‍ಸೈಟ್‍ನಲ್ಲಿ ನೋಡಿ ಸೇರ್ಪಡೆಗೆ (ಫಾರ್ಮ್6) ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಸಹಾಯಕ್ಕಾಗಿ ಸಹಾಯವಾಣಿ 1950ನ್ನು ಸಂಪರ್ಕಿಸಬಹುದು ಎಂದರು. ಜಿಲ್ಲೆಯಲ್ಲಿ ಮೃತರಾಗಿರುವ ಮತದಾರರ ಹೆಸರನ್ನು ಕೈಬಿಟ್ಟು ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಮತದಾರ ಪಟ್ಟಿ ಪರಿಷ್ಕರಣೆಗೆ ವಿಶೇಷ ಅಭಿಯಾನವು ನ. 18, 19, ಡಿ. 2, 3ರಂದು ನಡೆಯಲಿದೆ. ಮತದಾರರ ಅಂತಿಮ ಪಟ್ಟಿ 2024, ಜ. 5ರಂದು ಪ್ರಕಟವಾಗಲಿದೆ ಎಂದರು. ಉಡುಪಿಯದ್ದು ಆರೋಗ್ಯಕರ ಮತದಾರರ ಪಟ್ಟಿ ಒಟ್ಟು ಜನಸಂಖ್ಯೆಯಲ್ಲಿ ಶೇ. 65ರಿಂದ 70 ಮಂದಿಯ ಹೆಸರು ಮತದಾರ ಪಟ್ಟಿಯಲ್ಲಿದ್ದರೇ ಅದು ಆರೋಗ್ಯಕರ ಮತದಾರರ ಪಟ್ಟಿಯಾಗುತ್ತದೆ. ಇದನ್ನೂಮೀರಿ ಉಡುಪಿ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯ ಶೇ 81ರಷ್ಟು ಮಂದಿ ಮತದಾರರಾಗಿದ್ದಾರೆ ಎಂದು ಡಿಸಿ ತಿಳಿಸಿದರು.