ಡಿಸಿಸಿ ಬ್ಯಾಂಕ್‌ ಮೇಲೆ ಐಟಿ ದಾಳಿ: ಠೇವಣಿದಾರರ ಎದೆಬಡಿತ ಹೆಚ್ಚಳ

| Published : Apr 13 2024, 01:07 AM IST

ಡಿಸಿಸಿ ಬ್ಯಾಂಕ್‌ ಮೇಲೆ ಐಟಿ ದಾಳಿ: ಠೇವಣಿದಾರರ ಎದೆಬಡಿತ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಐಟಿ ಅಧಿಕಾರಿಗಳು ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಪೊಲೀಸರ ಬಂದೋಬಸ್ತ್‌ನಲ್ಲಿ ತೆರಳಿ, ಅಲ್ಲಿನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊಬೈಲ್‌ಗಳನ್ನ ಸ್ವಿಚ್‌ ಆಫ್‌ ಮಾಡಿಸಿ ಬ್ಯಾಂಕ್‌ ವ್ಯವಹಾರಗಳ ತನಿಖೆಗೆ ಇಳಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯ ರೈತರ, ಉದ್ಯಮಿಗಳ ಹಾಗೂ ಸ್ವಸಹಾಯ ಗುಂಪುಗಳ ಲಕ್ಷಾಂತರ ಮಹಿಳೆಯರ ಜೀವನಾಡಿಯಾಗಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಮೇಲೆ ಶುಕ್ರವಾರ ಬೆಳಗ್ಗೆ ಬ್ಯಾಂಕ್‌ ವ್ಯವಹಾರ ಸ್ಥಗಿತಗೊಳಿಸಿಸಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.

ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ವಿಜಯಪುರ, ಕಲಬುರಗಿ ಹಾಗೂ ರಾಯಚೂರು ಐಟಿ ಅಧಿಕಾರಿಗಳು ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಪೊಲೀಸರ ಬಂದೋಬಸ್ತ್‌ನಲ್ಲಿ ತೆರಳಿ, ಅಲ್ಲಿನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊಬೈಲ್‌ಗಳನ್ನ ಸ್ವಿಚ್‌ ಆಫ್‌ ಮಾಡಿಸಿ ಬ್ಯಾಂಕ್‌ ವ್ಯವಹಾರಗಳ ತನಿಖೆಗೆ ಇಳಿದಿದ್ದಾರೆ.

ಬ್ಯಾಂಕ್‌ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿರುವ ಸುದ್ದಿ ಜಿಲ್ಲೆಯಾದ್ಯಂತ ಕಾಳ್ಗಿಚ್ಚಿನಂತೆ ಹರಡಿದ್ದು, ಕಳೆದ ಎರಡ್ಮೂರು ವರ್ಷಗಳ ಹಿಂದೆಯೇ ಬ್ಯಾಂಕ್‌ ಅನುತ್ಪಾದಕ ಆಸ್ತಿ ಹಾಗೂ ಅತಿಯಾದ ಸಾಲ ನೀಡುವಿಕೆ ಜೊತೆಗೆ ಸಾಲ ವಸೂಲಾತಿಯಲ್ಲಿ ಭಾರಿ ಹಿನ್ನಡೆ ಹಿನ್ನೆಲೆ ನಬಾರ್ಡ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ವಿರುದ್ಧ ಆರ್‌ಬಿಐಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಲಾಗಿತ್ತು. ಅದರ ಪರಿಣಾಮವೇ ಇಂದಿನ ಈ ಐಟಿ ದಾಳಿ ಎಂಬ ಮಾತುಗಳೂ ಕೇಳಿಬಂದಿವೆ.

ಅಷ್ಟಕ್ಕೂ ಇದೊಂದು ಸಾಮಾನ್ಯ ಪ್ರಕ್ರಿಯೆ. ಚುನಾವಣೆ ಸಂದರ್ಭದಲ್ಲಿ ಐಟಿ ಅಧಿಕಾರಿಗಳ ದಾಳಿ ಸಹಜ ಎಂದು ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಅವರು ಹೇಳಿದ್ದರೂ ಬ್ಯಾಂಕ್‌ ಅವಧಿಯಲ್ಲಿ ಗ್ರಾಹಕರ ವ್ಯವಹಾರಗಳಿಗೆ ತಡೆಯೊಡ್ಡಿ ತನಿಖೆಗೆ ಇಳಿದಿರುವ ಐಟಿ ಅಧಿಕಾರಿಗಳ ಈ ದಾಳಿ ಲೋಕಸಭಾ ಚುನಾವಣೆ ಈ ಸಂದರ್ಭದಲ್ಲಿ ರಾಜಕೀಯ ತಿರುವು ಪಡೆಯುವದರಲ್ಲಿ ಸಂದೇಹವಿಲ್ಲ.

ಈ ಮೊದಲೇ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ಐಟಿ, ಇಡಿ ಹಾಗೂ ಸಿಬಿಐ ದುರ್ಬಳಕೆ ಆರೋಪಗಳ ಮಧ್ಯೆಯೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಹೋದರ ಅಮರ ಖಂಡ್ರೆ ಅಧ್ಯಕ್ಷರಾಗಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಮೇಲೆ ಐಟಿ ದಾಳಿ ಖಂಡ್ರೆ ಪುತ್ರ ಸಾಗರ ಖಂಡ್ರೆಯನ್ನು ಚುನಾವಣಾ ಕಣದಲ್ಲಿ ಕಟ್ಟಿ ಹಾಕುವ ಪ್ರಯತ್ನ ಎಂಬ ಆರೋಪಗಳು ಕೇಳಿಬರಲು ಸಮಯ ದೂರವೇನಿಲ್ಲ.

ಬ್ಯಾಂಕ್‌ ಮೇಲೆ ಐಟಿ ದಾಳಿ ಪರಿಣಾಮ, ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರ ಎದೆಬಡಿತ ಹೆಚ್ಚಿಸಿದೆ. ಠೇವಣಿ ವಾಪಸ್ಸಾತಿಗೆ ಸಾಲು ಸಾಲು ಜನ ಬ್ಯಾಂಕ್‌ ಎದುರು ನಿಲ್ಲುವ ಸಾಧ್ಯತೆ ಇನ್ನೆರಡು ದಿನಗಳಲ್ಲಿ ಕಾಣಬಹುದು. ಇದು ನಡೆದಿದ್ದೆಯಾದಲ್ಲಿ ಬ್ಯಾಂಕ್‌ ಬಾಗಿಲು ಮುಚ್ಚಿಕೊಂಡು ಸೇವೆ ಸ್ಥಗಿತಗೊಳಿಸಿದ್ದೆಯಾದಲ್ಲಿ ಲಕ್ಷಾಂತರ ಜನರ ಜೀವನಾಡಿಯಾಗಿರುವ ಜಿಲ್ಲೆ ಸಹಕಾರ ಸಕ್ಕರೆ ಕಾರ್ಖಾನೆಗಳ ಸೇವೆಯ ಮೇಲೆಯೂ ದುಷ್ಪರಿಣಾಮ ಬೀರಿ ರೈತರ ಕಬ್ಬಿನ ಬಾಕಿ ಮೊತ್ತ ಪಾವತಿ ವಿಳಂಬದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಒಟ್ಟಾರೆ ಸುಮಾರು 4 ದಶಕಗಳ ಇತಿಹಾಸ ಹೊಂದಿರುವ ಡಿಸಿಸಿ ಬ್ಯಾಂಕ್‌ ಮೇಲಿನ ಈ ಐಟಿ ದಾಳಿ, ಜಿಲ್ಲೆಯ ಜನರ ಆರ್ಥಿಕ ಪರಿಸ್ಥಿತಿ ಮೇಲೆಯೂ ಪರಿಣಾಮ ಬೀರಬಲ್ಲದ್ದು. ಹೀಗಾಗಿ ಸರ್ಕಾರಗಳು ಯಾವುದೇ ನಿರ್ಣಯ ಕೈಗೊಂಡರೂ ಎಚ್ಚರಿಕೆ ಹೆಜ್ಜೆಯನ್ನಿಟ್ಟು ಜಿಲ್ಲೆಯ ಜನರ, ರೈತರ ಹಾಗೂ ಮಹಿಳಾ ಸ್ವಸಹಾಯ ಸಂಘಗಳನ್ನು ಜೊತೆಗೆ ಬ್ಯಾಂಕ್‌ ಠೇವಣಿದಾರರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕಿದೆ.