ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಗುಂಡಿನಂಜನಗೂಡು ತಾಲೂಕಿನ ಯಾಲಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಶಿಥಿಲಗೊಂಡ ಪರಿಣಾಮ ಗ್ರಾಮದ ಹಾಲಿನ ಡೇರಿಯಲ್ಲಿ ಪಾಠ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮದ ಅಂಗನವಾಡಿ ಕೇಂದ್ರ ಶಿಥಿಲಗೊಂಡು ವರ್ಷಗಳೇ ಕಳೆದಿದ್ದರೂ ಕೂಡ ಇದೇ ಅಂಗನವಾಡಿಯಲ್ಲಿ ಮಕ್ಕಳನ್ನು ಕೂರಿಸಲಾಗುತ್ತಿತ್ತು. ಆದರೆ ಪೋಷಕರು ಭಯಗೊಂಡ ಪರಿಣಾಮ ಪಕ್ಕದಲ್ಲಿದ್ದ ಹಾಲಿನ ಡೇರಿಯಲ್ಲಿ ಪ್ರಸ್ತುತ ಅಂಗನವಾಡಿ ಕೇಂದ್ರವನ್ನು ನಡೆಸಲಾಗುತ್ತಿದೆ.ಪ್ರಸ್ತುತ ಇರುವ ಅಂಗನವಾಡಿ ಕಟ್ಟಡ ತುಂಬಾ ಹಳೆಯದಾಗಿದ್ದು, ಗೋಡೆಗಳು ಬಿರುಕು ಬಿಟ್ಟಿದೆ. ಮೇಲ್ಚಾವಣಿ ಉದುರುತ್ತಿದ್ದು, ಸಣ್ಣ ಮಳೆ ಬಂದರೂ ಸಹ ಕಟ್ಟಡ ಸೋರುತ್ತಿದೆ. ಯಾವುದೇ ಕ್ಷಣದಲ್ಲೂ ಕುಸಿದ ಬೀಳುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಪೋಷಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದ ಪರಿಣಾಮ 12 ರಿಂದ 6 ಮಕ್ಕಳಿಗೆ ಹಾಜರಿ ಕುಸಿದಿದೆ.ನಂದಿನಿ ಹಾಲಿನ ಡೇರಿಯಲ್ಲಿ ತಾತ್ಕಾಲಿಕವಾಗಿ ಮಕ್ಕಳನ್ನು ಕೂರಿಸಲಾಗುತ್ತಿದ್ದು, ಈ ಎಲ್ಲ ಕಾರಣಗಳಿಂದ ದಾಖಲಾತಿ ಪ್ರಮಾಣ ಕೂಡ ಕಡಿಮೆಯಾಗಿದೆ. ಶಿಥಿಲಿಕೊಂಡಿರುವ ಕಟ್ಟಡದಲ್ಲಿ ಅಡುಗೆ ತಯಾರು ಮಾಡುವುದರ ಜೊತೆಗೆ, ಪುಟ್ಟ ಮಕ್ಕಳು ತಿನ್ನುವ ಪೌಷ್ಟಿಕ ಆಹಾರ ಹಳೆಯ ಅಂಗನವಾಡಿ ಕೇಂದ್ರದಲ್ಲಿ ಶೇಖರಣೆ ಮಾಡಲಾಗುತ್ತಿದ್ದು, ಆಹಾರ ಪದಾರ್ಥಗಳು ಎಷ್ಟರಮಟ್ಟಿಗೆ ಸುರಕ್ಷಿತವಾಗಿದೆಯೋ ತಿಳಿದು ಬಂದಿಲ್ಲ.ಅಂಗನವಾಡಿ ಮೇಲ್ವಿಚಾರಣೆ ಹೊಂದಿರುವ ಮಹಿಳಾ ಮತ್ತು ಮಕ್ಕಳ ಇಲಾಖೆ ಅಭಿವೃದ್ಧಿ ಅಧಿಕಾರಿಗಳು ಶಿಥಿಲಗೊಂಡಿರುವ ಅಂಗನವಾಡಿಯ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಸಂಬಂಧಪಟ್ಟ ಶಾಸಕರ ಗಮನಕ್ಕೆ ತಂದು ನೂತನ ಅಂಗನವಾಡಿ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ ಸಮಸ್ಯೆ ತಲೆ ದೋರಿದ್ದು, ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.-----------ಕಟ್ಟಡ ಶಿಥಿಲಗೊಂಡಿದೆ, ಗ್ರಾಮದಲ್ಲಿ ಬಾಡಿಗೆ ಕಟ್ಟಡಗಳು ದೊರಕದ ಕಾರಣ ಹಾಲಿನ ಡೇರಿಯಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸುತ್ತಿದ್ದು, ಶೀಘ್ರದಲ್ಲಿ ಶಾಸಕರ ಗಮನಕ್ಕೆ ತಂದು ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ಮನವಿ ಮಾಡುತ್ತೇನೆ.- ಭವ್ಯಶ್ರೀ, ಸಿಡಿಪಿಒ, ನಂಜನಗೂಡು.----------ಅಂಗನವಾಡಿ ಕಟ್ಟಡ ಶಿಥಿಲಗೊಂಡು ಅನೇಕ ವರ್ಷಗಳೆ ಕಳೆದಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಶಿಫಾರಸು ಮಾಡಲು ನಿರ್ಲಕ್ಷ್ಯ ತೋರುತ್ತಿದ್ದಾರೆ. - ನಾಗೇಂದ್ರ, ಗ್ರಾಮಸ್ಥರು