ಗುರುಸ್ಮರಣೆಗೆ ಗವಿಮಠ ಶ್ರೀಗಳ ಪಾದಯಾತ್ರೆಗೆ 21 ವರ್ಷ

| Published : Apr 03 2024, 01:33 AM IST

ಸಾರಾಂಶ

ತಮ್ಮ ಗುರುಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ಕಳೆದ 20 ವರ್ಷಗಳಿಂದ ಪ್ರತಿ ವರ್ಷವೂ ಪಾದಯಾತ್ರೆ ಮಾಡುತ್ತಿರುವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಈಗ 21ನೇ ವರ್ಷವೂ ಪಾದಯಾತ್ರೆ ಮಾಡಲಿದ್ದಾರೆ.

- ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಗುರುಸ್ಮರಣೆ । ಕೊಪ್ಪಳ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಸುಮಾರು 5-6 ಕಿಮೀ ನಡಿಗೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ತಮ್ಮ ಗುರುಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ಕಳೆದ 20 ವರ್ಷಗಳಿಂದ ಪ್ರತಿ ವರ್ಷವೂ ಪಾದಯಾತ್ರೆ ಮಾಡುತ್ತಿರುವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಈಗ 21ನೇ ವರ್ಷವೂ ಪಾದಯಾತ್ರೆ ಮಾಡಲಿದ್ದಾರೆ.

ಏ. 3ರಂದು ಕೊಪ್ಪಳ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಸುಮಾರು 5-6 ಕಿಮೀ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪಾದಯಾತ್ರೆ ಮಾಡುತ್ತಾರೆ. ಅವರೊಂದಿಗೆ ಸಹಸ್ರಾರು ಭಕ್ತರು ಹೆಜ್ಜೆ ಹಾಕುತ್ತಾರೆ.

ದಾರಿಯುದ್ದಕ್ಕೂ ಹೂ ಹಾಕುವ ಮೂಲಕ ಭಕ್ತರು ತಮ್ಮ ಭಕ್ತಿ ಮೆರೆಯುತ್ತಾರೆ. ದಾರಿಯುದ್ದಕ್ಕೂ ತಂಪು ಪಾನಿಯ ವಿತರಣೆ, ಮಜ್ಜಿಗೆ ವಿತರಣೆಯನ್ನು ಸ್ವಯಂ ಪ್ರೇರಣೆಯಿಂದ ಭಕ್ತರೇ ವಿತರಣೆ ಮಾಡುತ್ತಾರೆ.

ಇವರೊಂದಿಗೆ ಚಿಕ್ಕೇಕೊಪ್ಪದ ಶ್ರೀಗಳು ಭಜನೆಯೊಂದಿಗೆ ಸಾಗುತ್ತಾರೆ.

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಬೆಳಗ್ಗೆ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳಿಗೆ ಪೂಜೆ ಸಲ್ಲಿಸಿ, ಮಳೆಮಲ್ಲೇಶ್ವರಕ್ಕೆ 6 ಗಂಟೆ ವೇಳೆಗೆ ಆಗಮಿಸುತ್ತಾರೆ. ಅಲ್ಲಿಂದ ಅವರು ಪಾದಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ ಸೇರಿದ್ದ ಭಕ್ತ ಸಮೂಹವೂ ಪಾದಯಾತ್ರೆ ಕೈಗೊಳ್ಳುತ್ತದೆ.

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ತಮ್ಮ ಗುರುಗಳ ಸ್ಮರಣೆಗೆ ಪ್ರತಿ ವರ್ಷವೂ ಪಾದಯಾತ್ರೆ ಮಾಡುವುದರ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ದಿನವೀಡಿ ಏರ್ಪಡಿಸಲಾಗುತ್ತದೆ. ಇದಾದ ಮೇಲೆ ಕೆರೆಯ ದಡದಲ್ಲಿ ಗುರುಸ್ಮರಣೆ ಕಾರ್ಯಕ್ರಮ ನಡೆಯುತ್ತದೆ.

ಗುರುಸ್ಮರಣೆಗೆ ಗುರುಕಾಣಿಕೆ:

ಪ್ರತಿ ವರ್ಷವೂ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಗುರುಸ್ಮರಣೆಗಾಗಿ ಗುರುಕಾಣಿಕೆಯನ್ನು ಸಮಾಜಮುಖಿ ಕಾರ್ಯದೊಂದಿಗೆ ಸಲ್ಲಿಕೆ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷವೂ ಒಂದಿಲ್ಲೊಂದು ಸಂಕಲ್ಪ ಮಾಡಿ, ಬರುವ ವರ್ಷದೊಳಗಾಗಿ ಅದನ್ನು ಪೂರ್ಣಗೊಳಿಸಿ, ಸಮಾಜ ಸೇವೆಗೆ ಅರ್ಪಿಸಲಾಗುತ್ತದೆ.

2002ರಲ್ಲಿ ಅವರು ಲಿಂಗೈಕ್ಯರಾದ ನಂತರ 2003ರಲ್ಲಿ ಮೊದಲ ಪುಣ್ಯಸ್ಮರಣೆಗೆ 2000 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ನಿಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತದೆ. ಅದು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ. ಒಂದೇ ವರ್ಷದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ, ರಾಜ್ಯದಲ್ಲಿಯೇ ಮಾದರಿ ಉಚಿತ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಲಾಗುತ್ತದೆ.

ನಾಲ್ಕಾರು ನೂರು ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ ಮೂರುವರೆ ಸಾವಿರಕ್ಕೂ ಅಧಿಕ ಆಗಿದೆ.

ಹೀಗೆ ಒಂದಿಲ್ಲೊಂದು ಗುರುಕಾಣಿಕೆಯನ್ನು ಶ್ರೀಗಳ ಸ್ಮರಣೆಯ ನಿಮಿತ್ತ ಅರ್ಪಿಸುತ್ತಾ ಬಂದಿದ್ದಾರೆ. ಆರ್ಯುವೇದ ಮಹಾವಿದ್ಯಾಲಯದ ಆಧುನೀಕರಣ, ದಾಸೋಹ ಭವನ ನಿರ್ಮಾಣ, ವೃದ್ಧಾಶ್ರಮ ನಿರ್ಮಾಣ, ಉದ್ಯಾನವನ ನಿರ್ಮಾಣ ಸೇರಿದಂತೆ ಕಳೆದ 21 ವರ್ಷಗಳಲ್ಲಿಯೂ ಒಂದಿಲ್ಲೊಂದು ಮಹಾನ್ ಕಾರ್ಯ ಮಾಡುತ್ತಲೇ ಬಂದಿದ್ದಾರೆ. ಕಳೆದ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿರುವುದರಿಂದ ಅವರಿಗೆಲ್ಲಾ ವಸತಿ ವ್ಯವಸ್ಥೆ ಕಲ್ಪಿಸುವ ಸವಾಲಾಗಿ ಪರಿಣಮಿಸಿತು. ಯಾವೊಬ್ಬ ವಿದ್ಯಾರ್ಥಿಯೂ ಸೌಲಭ್ಯ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ವಿದ್ಯೆಯಿಂದ ವಂಚಿತ ವಾಗಬಾರದು ಎಂದು ಪುಣ್ಯಸ್ಮರಣೆಯ ವೇಳೆಯಲ್ಲಿ ಕಣ್ಣೀರು ಹಾಕಿದರು. ಇದರಿಂದ ರಾಜ್ಯದ ಮೂಲೆ ಮೂಲೆಯಿಂದ ದೇಣಿಗೆ ಹರಿದು ಬಂದಿತು. ರಾಜ್ಯ ಸರ್ಕಾರವೂ ಹತ್ತು ಕೋಟಿ ರುಪಾಯಿ ಘೋಷಣೆ ಮಾಡಿ, ಅದರ ಪೈಕಿ 2.5 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಈಗ ಕೋಳೂರು ಗ್ರಾಮದ ಬಳಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ವಾಸಿಸುವಷ್ಟು ಬೃಹತ್ ಉಚಿತ ಪ್ರಸಾದ ಮತ್ತು ವಸತಿ ನಿಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಅದಕ್ಕೂ ಪೂರ್ವದಲ್ಲಿ ಕ್ಯಾನ್ಸರ್ ರೋಗಿಗಳ ತಪಾಸಣಾ ಶಿಬಿರ ಹಮ್ಮಿಕೊಂಡು, ಅವರಿವರ ಸಹಾಯದಿಂದ ಅವರಿಗೆ ಉಚಿತ ಚಿಕಿತ್ಸೆ ದೊರೆಯುವಂತೆ ಮಾಡಿದ್ದು ಗುರುಸ್ಮರಣೆಯ ನೆಪದಲ್ಲಿ ಎನ್ನುವುದು ಗಮನಾರ್ಹ ಸಂಗತಿ. ಹೀಗೆ ಪ್ರತಿ ವರ್ಷವೂ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ತಮ್ಮ ಗುರುಸ್ಮರಣೆಯಲ್ಲಿ ಸಮಾಜಮುಖಿ ಕಾರ್ಯದ ಮೂಲಕ ಗುರುಕಾಣಿಕೆ ಸಲ್ಲಿಸುತ್ತಲೇ ತಮ್ಮ ಗುರುಗಳನ್ನು ಸ್ಮರಿಸುವ ಪರಿಪಾಠ ಹಮ್ಮಿಕೊಂಡಿದ್ದು, ಅದು ಈಗಲೂ ಮುಂದುವರೆದಿದೆ.