ಜನರನ್ನು ದೋಚಿ ಗ್ಯಾರಂಟಿ ನೀಡಿರುವುದೇ ಮಹಾ ಸಾಧನೆ

| Published : May 28 2024, 01:10 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಅರ್ದಂಬರ್ಧ ಗ್ಯಾರಂಟಿ ನೀಡಿ ಜನರನ್ನು ದೋಚಿ ಗ್ಯಾರಂಟಿ ನೀಡಿರುವುದೇ ಒಂದು ವರ್ಷದ ಕಾಂಗ್ರೆಸ್ ಸರ್ಕಾರದ ಮಹಾ ಸಾಧನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರದ ಜನರಿಗೆ ನೀಡಿದ ಕೊಡುಗೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅರ್ದಂಬರ್ಧ ಗ್ಯಾರಂಟಿ ನೀಡಿ ಜನರನ್ನು ದೋಚಿ ಗ್ಯಾರಂಟಿ ನೀಡಿರುವುದೇ ಒಂದು ವರ್ಷದ ಕಾಂಗ್ರೆಸ್ ಸರ್ಕಾರದ ಮಹಾ ಸಾಧನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರದ ಜನರಿಗೆ ನೀಡಿದ ಕೊಡುಗೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ವಿದ್ಯುತ್ ದರ ಸಿಕ್ಕಾಪಟ್ಟೆ ಏರಿಕೆ ಮಾಡಿ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಹೊರೆ ಮಾಡಿ ವಾಣಿಜ್ಯೋದ್ಯಮಿಗಳು ನಷ್ಟ ಅನುಭವಿಸಿ, ದಿವಾಳಿಯಾಗಿದ್ದಾರೆ. ಆಸ್ತಿ ನೋಂದಣಿ ದರ, ವಾಹನ ನೋಂದಣಿ ದರ, ಮದ್ಯ ದರ , ಒಡಂಬಡಿಕೆ ಪತ್ರಗಳ ಶುಲ್ಕಗಳು ದುಪ್ಪಟ್ಟಾಗಿವೆ. ಅಬಕಾರಿ ಸುಂಕ ಏರಿಕೆ ಮಾಡಿ ಜನರಿಂದ ಹಣ ದೋಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಒಂದು ಕಡೆ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರಿಗೆ ಹಣ ಕೊಡುತ್ತಿದ್ದೇವೆಂದು ಹೇಳಿ, ಎಲ್ಲ ತೆರಿಗೆ ಹೆಚ್ಚಳ ಮಾಡುವ ಮೂಲಕ ಎಲ್ಲ ಜನರಿಂದಲೂ ಹಣ ದೋಚುವ ಕಾರ್ಯ ನಡೆಯುತ್ತಿದೆ ಎಂದು ಆಪಾದಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು, ಹಿಂದು ಕಾರ್ಯಕರ್ತರ ಕೊಲೆ ಪ್ರಕರಣಗಳು ನಡೆಯುತ್ತಿರುವುದನ್ನು ನೋಡಿದರೆ ಕಾನೂನು ಸುವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದು ತಿಳಿಯುತ್ತದೆ. ಪ್ರೀತಿ, ಪ್ರೇಮದ ಹೆಸರಿನಲ್ಲಿ ಯುವತಿಯರನ್ನು ಕೊಲೆ ಮಾಡುವುದು, ಹಲ್ಲೆ ಮಾಡುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಸಮಾಜಘಾತುಕರಿಗೆ ಕಾನೂನಿನ ಹೆದರಿಕೆಯೇ ಇಲ್ಲದಂತಾಗಿದೆ. ಇದಕ್ಕೆ ಕಡಿವಾಣ ಹಾಕುವುದು ಯಾವಾಗ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಮಾಡಿದ ಹಲವಾರು ರೈತಪರ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ಕೈಬಿಟ್ಟಿದೆ. ಬಿಜೆಪಿ ಸರ್ಕಾರದ ಜಲಜೀವನ್ ಮಿಷನ್‌ ಯೋಜನೆ ಅಡಿ ಮನೆ ಮನೆಗೆ ನೀರು, ಬಡವರಿಗೆ ಮನೆ ನಿರ್ಮಾಣ ಮುಂತಾದ ಯೋಜನೆಗಳನ್ನು ತಮ್ಮದೆಂದು ಕೊಚ್ಚಿಕೊಳ್ಳುವ ಸರ್ಕಾರ ಯಾವುದೇ ನೀರಾವರಿ ಯೋಜನೆಗೆ ಅನುದಾನ ನೀಡುತ್ತಿಲ್ಲ. ಯುಕೆಪಿ, ಮಹಾದಾಯಿ, ಮೇಕೆದಾಟು ಯೋಜನೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸದೇ ರೈತರ ಬದುಕು ಹಾಳು ಮಾಡಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಿಂದುಳಿದ ವರ್ಗ(ಒಬಿಸಿ)ಗೆ ಮೀಸಲಾತಿಯನ್ನು ತೆಗೆದು ಮತಬ್ಯಾಂಕ್‌ಗಾಗಿ ಮುಸ್ಲಿಂ ಸಮುದಾಯಕ್ಕೆ ನೀಡುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಧರ್ಮಾಧಾರಿತ ಮೀಸಲಾತಿ ಕೊಡುವುದನ್ನು ನಿಲ್ಲಿಸಬೇಕು. ಕೂಡಲೇ ಒಬಿಸಿ ಮೀಸಲಾತಿ ಮರಳಿ ನೀಡಬೇಕು. ಇಲ್ಲದಿದ್ದರೆ ಸರ್ಕಾರ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚುನಾವಣೆಗೋಸ್ಕರ ಜನರನ್ನು ತಮ್ಮತ್ತ ಸೆಳೆಯಲು ಮತಕ್ಕಾಗಿ ಬೇಕಾಬಿಟ್ಟಿ ಘೋಷಣೆ ಮಾಡಿ ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ಮಹಿಳೆಯರಿಗೆ ವರ್ಷಕ್ಕೆ ₹ 1 ಲಕ್ಷ ಕೊಡುವುದು, ₹ 25 ಲಕ್ಷ ಜೀವವಿಮೆ ಹೀಗೆ ಗ್ಯಾರಂಟಿ ಘೋಷಣೆ ಮಾಡುವಲ್ಲಿ ಇತಿ ಮಿತಿಯಲ್ಲಿ ಇರಬೇಕು. ಪ್ರಧಾನಿ ಮೋದಿಯವರು ಈಗಾಗಲೇ ಎಲ್ಲ ಜನರಿಗೆ ₹ 5 ಲಕ್ಷ ವಿಮೆ, ₹ 80 ಕೋಟಿ ಜನರಿಗೆ ಉಚಿತ ಪಡಿತರಧಾನ್ಯ ನೀಡುತ್ತಿದ್ದಾರೆ ಎಂದು ಹೇಳಿದರು.

ನಾವು ಮಾಡಿದ ರಸ್ತೆಗಳೇ ಇನ್ನೂ ಗಟ್ಟಿಯಾಗಿ ಇರುವುದರಿಂದ ಜನರಿಗೆ ಒಳ್ಳೆಯದಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ವರ್ಷ ಆಡಳಿತ ನಡೆಸಿದರೂ ಜನರಿಗೋಸ್ಕರ ಯಾವುದೇ ಹೊಸ ಕಾರ್ಯಕ್ರಮ ನೀಡಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಹಣ ನೀಡುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಮಾಡುವ ಇಚ್ಛೆಯೇ ಇಲ್ಲ ಎಂದು ದೂರಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ವಕ್ತಾರ ಸತ್ಯನರಾಯಣ ಹೇಮಾದ್ರಿ, ನಗರ ಮಂಡಳ ಅಧ್ಯಕ್ಷ ಬಸವರಾಜ ಹುನಗುಂದ, ಪ್ರಧಾನ ಕಾರ್ಯದರ್ಶಿ ಉಮೇಶ ಹಂಚಿನಾಳ ಪತ್ರಿಕಾಗೋಷ್ಠಿಯಲ್ಲಿದ್ದರು.

--ಬಾಕ್ಸ್------

ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ:

ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊಡಲು ಸರ್ಕಾರದ ಬಳಿ ದುಡ್ಡೇ ಇಲ್ಲ. ಒಬಿಸಿಯವರ ಮೀಸಲಾತಿಯನ್ನು ಕಿತ್ತು ಮತಬ್ಯಾಂಕ್ ಸಲುವಾಗಿ ಮುಸ್ಲಿಮರಿಗೆ ಕೊಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ, ಸಂವಿಧಾನ ತಿರುಚಿ ಧರ್ಮ ಆಧಾರಿತ ಮೀಸಲಾತಿ ಜಾರಿಮಾಡಲು ಹೊರಟಿರುವುದು ಅಪಾಯಕಾರಿ ಎಂದು ಟೀಕಿಸಿದರು.