ಹಾಸನ ಸಂಸದ ಮಹಿಳಾ ಪೀಡಕನಾಗಿರುವುದು ದುರಂತ

| Published : Apr 30 2024, 02:05 AM IST

ಸಾರಾಂಶ

ಜನಸೇವಕ ನಾಗಬೇಕಿದ್ದ ಹಾಸನ ಕ್ಷೇತ್ರದ ಸಂಸದ ಮಹಿಳೆಯರ ಪೀಡಕನಾಗಿರುವುದು ದೇಶದ ದುರಂತ. ಹೆಣ್ಣು, ಸಂಸ್ಕೃತಿ ಎನ್ನುವ ಬಿಜೆಪಿ ಪಕ್ಷದ ನಾಯಕರಿಗೆ ಈ ನೀಚ ಕೃತ್ಯದ ಬಗ್ಗೆ ಮೊದಲೇ ತಿಳಿದಿದ್ದರೂ ಟಿಕೆಟ್ ನೀಡಿರುವುದು ಬಿಜೆಪಿ ಪಕ್ಷದ ನೈತಿಕ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಹೇಳಿದ್ದಾರೆ.

ದೇಶದ ಮಾನ, ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜನಸೇವಕ ನಾಗಬೇಕಿದ್ದ ಹಾಸನ ಕ್ಷೇತ್ರದ ಸಂಸದ ಮಹಿಳೆಯರ ಪೀಡಕನಾಗಿರುವುದು ದೇಶದ ದುರಂತ. ಹೆಣ್ಣು, ಸಂಸ್ಕೃತಿ ಎನ್ನುವ ಬಿಜೆಪಿ ಪಕ್ಷದ ನಾಯಕರಿಗೆ ಈ ನೀಚ ಕೃತ್ಯದ ಬಗ್ಗೆ ಮೊದಲೇ ತಿಳಿದಿದ್ದರೂ ಟಿಕೆಟ್ ನೀಡಿರುವುದು ಬಿಜೆಪಿ ಪಕ್ಷದ ನೈತಿಕ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ನಡೆಸಿರುವ ದೌರ್ಜನ್ಯದಿಂದ ರಾಜಕೀಯ ಕ್ಷೇತ್ರವನ್ನೇ ಜನತೆ ಸಂಶಯದಿಂದ ನೋಡುವಂತಾಗಿದೆ. ಈ ಘಟನೆಯಿಂದಾಗಿ ದೇಶದ ಮಾನ, ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಅಧಿಕಾರ, ಹಣಬಲವೊಂದಿದ್ದರೇ ಏನು ಬೇಕಾದರೂ ಮಾಡಬಹುದು ಎಂಬ ಅಹಂಕಾರಿಗಳಿಗೆ ದೇಶದ ಕಾನೂನು ತಕ್ಕ ಪಾಠ ಕಲಿಸದಿದ್ದಲ್ಲಿ ಇಂತಹ ಮನೋ ವಿಕೃತಿ ಗಳು ಎಲ್ಲೆಡೆ ರಾರಾಜಿಸಲಿದ್ದಾರೆ.

ಸಾವಿರಾರು ಮಹಿಳೆಯರ ಸಂಸಾರವನ್ನು ಬೀದಿಗೆ ತಳ್ಳಿರುವ ಸಂಸದ ಪ್ರಜ್ವಲ್ ರೇವಣ್ಣನಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಮುಂದಿಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಆತ ಎಲ್ಲಿದ್ದರೂ ಕೂಡಲೇ ಕರೆತಂದು ಜೈಲಿಗಟ್ಟಬೇಕು ಎಂದರು.ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪ್ರಕರಣ ಹೊರ ಬರುತ್ತಿದ್ದಂತೆ ಅವರ ತಂದೆ ಕೂಡ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ದೂರು ನೀಡಿರುವ ಸಂತ್ರಸ್ತೆಯರಿಗೆ ಸರ್ಕಾರ ಮತ್ತು ಪೊಲೀಸರು ಸೂಕ್ತ ಭದ್ರತೆ ನೀಡಬೇಕು. ಶಾಸಕ ಎಚ್.ಡಿ.ರೇವಣ್ಣ ಅವರನ್ನು ಕೂಡಲೇ ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದ ಅವರು, ದೇಶ ಹಾಗೂ ನಾಡಿಗೆ ಪ್ರಧಾನಿಯಾಗಿ ಎಚ್.ಡಿ.ದೇವೇಗೌಡರು ನೀಡಿರುವ ಕೊಡುಗೆ ಅಪಾರವಾಗಿದೆ.

ಇಂತಹ ಕುಟುಂಬದ ಅಪ್ಪ, ಮಗ ದೇವೇಗೌಡ ಅವರ ಹೆಸರಿಗೆ ಮಸಿ ಬಳಿದಿರುವುದಲ್ಲದೇ ದೇಶ, ವಿದೇಶಗಳಲ್ಲೂ ನಾಡಿನ ಮಾನ ಹರಾಜು ಹಾಕಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ನೀಚ ಕೃತ್ಯ ಎಸಗಿದವರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದರು.

ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಗೌರವ, ಸ್ಥಾನಮಾನ ಇದೆ. ಹೆಣ್ಣನ್ನು ಪೂಜಿಸುವ ದೇಶ ನಮ್ಮದು, ಇಂತಹ ದೇಶದಲ್ಲಿ ಹೆಣ್ಣನ್ನು ಭೋಗದ ವಸ್ತು ಮಾತ್ರ ಎಂದು ಭಾವಿಸಿದವರಿಂದ ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ. ಹಾಸನ ಹಾಗೂ ಬೇರೆ ಬೇರೆ ಜಿಲ್ಲೆಗಳ ಮಹಿಳೆಯರು, ಸರ್ಕಾರಿ ನೌಕರರ ಮೇಲೂ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾನೆಂದು ಹೇಳ ಲಾಗುತ್ತಿದೆ. ಆತನ ಕೃತ್ಯಕ್ಕೆ ಸಾಕ್ಷಿಯಾಗಿ ಎಲ್ಲೆಡೆ ಪೆನ್‌ಡ್ರೈವ್‌ಗಳು ಹರಿದಾಡುತ್ತಿವೆ. ಇಂತಹ ಮನಸ್ಥಿತಿಯವರನ್ನು ಹಾಗೆಯೇ ಬಿಟ್ಟಲ್ಲಿ ಮತ್ತಷ್ಟು ಅಮಾಯಕ ಮಹಿಳೆಯರು ಆತನ ವಿಕೃತಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಎಸ್‌ಐಟಿ ಅಧಿಕಾರಿಗಳ ತಂಡ ತನಿಖೆ ಚುರುಕುಗೊಳಿಸಬೇಕು ಎಂದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಪಕ್ಷದ ಚಿಹ್ನೆಯನ್ನಾಗಿ ಮಹಿಳೆ ಚಿತ್ರ ಹೊಂದಲು ನೈತಿಕತೆ ಇಲ್ಲ, ಕೂಡಲೇ ಅವರು ತಮ್ಮ ಪಕ್ಷದ ಚಿಹ್ನೆಯನ್ನು ಬದಲಾಯಿಸಬೇಕು, ಘಟನೆಯ ನೈತಿಕ ಹೊಣೆ ಹೊತ್ತು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ಡಿಕೆ ರಾಜ್ಯದ ಮಹಿಳೆಯರ ಕ್ಷಮೆಯಾಚನೆ ಮಾಡಬೇಕು. ಪ್ರಜ್ವಲ್ ಬಂಧನಕ್ಕೆ ಎಸ್‌ಐಟಿ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ರೇಖಾ ಹುಲಿಯಪ್ಪಗೌಡ ಆಗ್ರಹಿಸಿದರು.

ಸುದ್ಧಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಕಾಂಗ್ರೆಸ್ ಮಹಿಳಾ ಘಟಕದ ಮುಖಂಡರಾದ ಪದ್ಮಾವತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಬಾನಾ ಸುಲ್ತಾನ್ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 29 ಕೆಸಿಕೆಎಂ 3