ಸಾರಾಂಶ
ನರೇಗಲ್ಲ: ಮಾನವ ಜೀವನ ಅಮೂಲ್ಯ. ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ. ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ.ತಿಳಿದು ಬದುಕುವವರು ಅಳಿದ ಮೇಲೂ ಉಳಿಯುತ್ತಾರೆ. ಆ ಪರಮ ಜ್ಞಾನ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಕಾಣಬಹುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಮೂರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮನುಷ್ಯನಲ್ಲಿರುವ ಅಸುರಿ ಗುಣಗಳು ನಾಶವಾಗಿ ದೈವಿ ಗುಣಗಳು ಬಲಗೊಳ್ಳಬೇಕಾಗಿದೆ. ಯಾವಾಗಲೂ ನಾಶವಾಗದೇ ಇರುವುದು ಧರ್ಮ. ಇದನ್ನು ನಾಶಪಡಿಸುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇಲ್ಲ. ಉದಾತ್ತ ಜೀವನ ಮೌಲ್ಯ ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೆ ನಮ್ಮೆಲ್ಲರ ಗುರಿಯಾಗಬೇಕು.
ಹೆತ್ತ ತಾಯಿ ಹೊತ್ತ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಧರ್ಮ ಮುಖ್ಯವೆಂಬುದನ್ನು ಮರೆಯಬಾರದು. ಸಂವೇದನಾಶೀಲ ಜೀವನಕ್ಕೆ ಆದರ್ಶ ಚಿಂತನಗಳ ಅವಶ್ಯಕತೆಯಿದೆ. ವೀರಶೈವ ಧರ್ಮದ ಸಂಸ್ಕಾರಗಳು ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಕಾರಣವಾಗಿವೆ. ಶ್ರೀಜಗದ್ಗುರು ರೇಣುಕಾಚಾರ್ಯರು ಕರ್ಮ ಕಳೆದು ಧರ್ಮ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆ ಬಹುಮುಖ್ಯವೆಂದು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದೆ. ನವರಾತ್ರಿಯ 3ನೇ ದಿನ ಚಂದ್ರಘಂಟಾ ಹೆಸರಿನಲ್ಲಿ ದೇವಿಯ ಪೂಜಾರಾಧನೆ ನಡೆಯುತ್ತದೆ. ಆಹ್ಲಾದಕತೆ ಮಮತೆ ಕ್ಷಮಾಶೀಲತೆ ವಾತ್ಸಲ್ಯ ಈ ದೇವಿಯ ಆರಾಧನೆಯಿಂದ ಪ್ರಾಪ್ತವಾಗಿ ಸತ್ಕಾರ್ಯ ಮಾಡಲು ಧೈರ್ಯ ಮತ್ತು ನಿರ್ಭಯತೆ ಉಂಟಾಗುವುದೆಂದರು.ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು “ಗುರು” ಹೆಸರಿನ ಇಂಗ್ಲಿಷ್ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಮನುಷ್ಯನ ಆದರ್ಶ ಜೀವನ ಉಜ್ವಲಗೊಳ್ಳಲು ಅರಿವು ಆಚಾರ ಬೇಕು. ಧರ್ಮದಲ್ಲಿರುವ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆ ಜೀವನದ ವಿಕಾಸಕ್ಕೆ ಮುಖ್ಯವಾಗಿವೆ. ಅರಿವು ಪಡೆಯಲು ಗುರುವಿನ ಅಮೂಲ್ಯ ಮಾರ್ಗದರ್ಶನ ಬೇಕಾಗಿದೆ. ಗುರು ಇಂಗ್ಲಿಷ್ ಕೃತಿಯಲ್ಲಿ ಸಮಾಜದಲ್ಲಿ ಗುರುವಿನ ಪಾತ್ರ ಎಷ್ಟು ಮಹತ್ವ ಇದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಅತ್ಯಂತ ಸಂತೋಷದಿಂದ ಶ್ರೀರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೇನೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮಾಚರಣೆ ಬಹು ಮುಖ್ಯವೆಂದರು.
ಎಮ್ಮಿಗನೂರು ಹಂಪಿ ಸಾವಿರದೇವರಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಜ್ಞಾನ ಸಾಧನೆಯಲ್ಲಿ ಸಿದ್ಧಾಂತ ಶಿಖಾಮಣಿಯ ಹಿರಿಮೆ ಬಗ್ಗೆ ಮಾತನಾಡಿ ಶಿವಾಗಮಗಳಲ್ಲಿರುವ ಆದರ್ಶ ಮೌಲ್ಯ ಈ ಅಮೂಲ್ಯ ಕೃತಿಯಲ್ಲಿ ಅರಿಯಬಹುದು. ಬದುಕಿನ ಉಜ್ವಲತೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನಗಳು ದಿಕ್ಸೂಚಿಯಾಗಿವೆ ಎಂದರು.ತೆಲಂಗಾಣ ರಾಜ್ಯ ಮೆಹಬೂಬ ನಗರದ ಹಿರಿಯ ಸಾಹಿತಿ ಪಂ.ಆರ್.ಎಂ. ಪ್ರಭುಲಿಂಗ ಶಾಸ್ತ್ರಿಯವರಿಗೆ 2024ನೇ ಸಾಲಿನ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಬಾಳೆಹೊನ್ನೂರಿನ ರುದ್ರಮುನಿ ಶಿವಾಚಾರ್ಯರು, ನಾಗಠಾಣದ ಸೋಮೇಶ್ವರ ಶಿವಾಚಾರ್ಯರು, ಅರಳೆಲೆ ಮಠದ ವಿಜಯಮಹಾಂತ ಶಿವಾಚಾರ್ಯರು, ದರಮುರಡಿಮಠದ ಬಸವಲಿಂಗೇಶ್ವರ ಶಿವಾಚಾರ್ಯರು.
ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಐ.ಜಿ. ಸನದಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಅನೀಲಕುಮಾರ ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹಾಗೂ ವಿವಿಧ ಮಠಾದೀಶ್ವರರು, ಗಣ್ಯಮಾನ್ಯರು ಭಾಗವಹಿಸಿದ್ದರು.