ಸಾರಾಂಶ
ಗೋಹತ್ಯೆ ಬಗ್ಗೆ ಭಾಷಣ ಮಾಡುವ ಬಿಜೆಪಿ ವಿದೇಶಗಳಿಗೆ ಮಾಂಸ ರಫ್ತು ಮಾಡುವ ಕಂಪನಿಗಳಿಂದ ಎಲೆಕ್ಟ್ರೋಲ್ ಬಾಂಡ್ ಮೂಲಕ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಲಿ ನೋಡೋಣ ಎಂದು ಶಾಸಕ ಶ್ರೀನಿವಾಸ ಮಾನೆ ಸವಾಲು ಹಾಕಿದರು.
ಹಾನಗಲ್ಲ: ಗೋಹತ್ಯೆ ಬಗ್ಗೆ ಭಾಷಣ ಮಾಡುವ ಬಿಜೆಪಿ ವಿದೇಶಗಳಿಗೆ ಮಾಂಸ ರಫ್ತು ಮಾಡುವ ಕಂಪನಿಗಳಿಂದ ಎಲೆಕ್ಟ್ರೋಲ್ ಬಾಂಡ್ ಮೂಲಕ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಲಿ ನೋಡೋಣ ಎಂದು ಶಾಸಕ ಶ್ರೀನಿವಾಸ ಮಾನೆ ಸವಾಲು ಹಾಕಿದರು.ಹಾನಗಲ್ಲ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿಯವರನ್ನು ನೋಡಿದರೆ ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಎನ್ನುವಂತಿದೆ. ವಿದೇಶಗಳಿಗೆ ಮಾಂಸ ರಫ್ತು ಮಾಡುವ ಅಲನಾಸನ್ಸ್ ಪ್ರೈವೇಟ್ ಲಿ. ಮತ್ತು ಫ್ರಿಗೊರಿಫಿಕೊ ಅಲಾನಾ ಪ್ರೈವೇಟ್ ಲಿ. ಕಂಪನಿಯಿಂದ ಹಣ ಪಡೆದಿದೆ. ಬಿಜೆಪಿ ಏನು ಮಾತನಾಡುತ್ತದೆ? ಆದರೆ ವಾಸ್ತವ ಏನಿದೆ? ಎನ್ನುವುದೆಲ್ಲ ಇದೀಗ ಜನರ ಅರಿವಿಗೆ ಬಂದಿದೆ. ಶ್ರೀಮಂತ ಉದ್ಯಮಿಗಳಿಗೆ ಸಾವಿರಾರು ಕೋಟಿ ರು. ಸಾಲ ನೀಡಿ, ಬ್ಯಾಂಕುಗಳನ್ನು ದಿವಾಳಿ ಎಬ್ಬಿಸಿ, ಸಾಲ ಮರುಪಾವತಿ ಮಾಡದಿದ್ದಾಗ ಉದ್ಯಮಿಗಳನ್ನು ವಿಮಾನ ಹತ್ತಿಸಿ ವಿದೇಶಗಳಿಗೆ ಮೋಜು-ಮಸ್ತಿ ಮಾಡಲು ಕಳುಹಿಸಿದ್ದನ್ನು ದೇಶದ ಜನತೆ ಕಂಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದ ಬರಗಾಲಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೇ ಇಲ್ಲ. ರೈತ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೂ ಅವರ ಮನಸ್ಸು ಕರಗಲೇ ಇಲ್ಲ. ರಾಜ್ಯಕ್ಕೆ ಬಿಜೆಪಿ ಮಾಡಿದ ಅನ್ಯಾಯಕ್ಕೆ ಈ ಚುನಾವಣೆಯಲ್ಲಿ ಜನ ಪಾಠ ಕಲಿಸುವುದು ನಿಶ್ಚಿತ ಎಂದರು.ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಬಿಜೆಪಿ ಅಚ್ಛೇದಿನ್ ಕನಸು ಬಿತ್ತಿತ್ತು. ಪೆಟ್ರೋಲ್ ಬೆಲೆ ನೂರು ರು. ಗಡಿ ದಾಟಿದೆ. ಡೀಸೆಲ್ ಬೆಲೆ ₹೮೫ ತಲುಪಿದೆ. ಸಿಲಿಂಡರ್ ಬೆಲೆ ಗಗನಮುಖಿಯಾಗಿದೆ. ತೊಗರಿ ಬೇಳೆ, ಅಡುಗೆ ಎಣ್ಣೆ, ಚಹಾ ಪುಡಿ ಇತರ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನಸಾಮಾನ್ಯರು ನಿತ್ಯದ ಜೀವನ ನಿರ್ವಹಣೆಗೂ ಹೆಣಗಾಡುವಂತಾಗಿದೆ. ಇವು ಅಚ್ಛೇದಿನಗಳಾ ಎಂದು ಪ್ರಶ್ನಿಸಿದ ಅವರು, ದೌರ್ಭಾಗ್ಯದ ದಿನಗಳನ್ನು ಕರುಣಿಸಿ ಜನರನ್ನು ಸಂಕಷ್ಟಕ್ಕೆ ನೂಕಿದ ಬಿಜೆಪಿಯನ್ನು ಲೋಕಸಭೆ ಚುನಾವಣೆಯಲ್ಲಿ ತಿರಸ್ಕರಿಸಿ, ನೆಮ್ಮದಿಯ ನಾಳೆಗಳಿಗಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.ಶಿರಹಟ್ಟಿಯ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮುಖಂಡರಾದ ಯಾಸೀರಖಾನ್ ಪಠಾಣ, ಎಂ.ಎಸ್. ಪಾಟೀಲ, ಚನ್ನವೀರಗೌಡ ಪಾಟೀಲ, ಲಕ್ಷ್ಮಣ ವರ್ದಿ, ಅನಿತಾ ಶಿವೂರ, ಗೀತಾ ಪೂಜಾರ, ಚನ್ನಬಸನಗೌಡ ಬಿದರಗಡ್ಡಿ, ವಸಂತಣ್ಣ ಕಿರವಾಡಿ, ಶಿವಣ್ಣ ಗೊಲ್ಲರ, ಬಸಣ್ಣ ವಾಲಿಕಾರ, ಜೆ.ಸಿ. ಕುಲಕರ್ಣಿ, ಸಿದ್ದಲಿಂಗಯ್ಯ ಕಂಬಾಳಿಮಠ, ನಾಗರಾಜ ಮಲ್ಲಮ್ಮನವರ, ರಾಜೂ ಬೇಂದ್ರೆ, ಮಹ್ಮದ್‌ಹನೀಫ್ ಬಂಕಾಪುರ, ಪತಂಗಸಾಬ್ ಬಮ್ಮನಹಳ್ಳಿ, ಲಕ್ಷ್ಮೀ ಕಲಾಲ ಈ ಸಂದರ್ಭದಲ್ಲಿದ್ದರು.