ಸಾರಾಂಶ
ಗವಿಸಿದ್ದೇಶ್ವರ ಪ್ರೌಢಶಾಲೆಯ 1993-94ನೇ ವರ್ಷದ ವಿದ್ಯಾರ್ಥಿಗಳಿಂದ ಗುರು ಗೌರವ, ಸ್ನೇಹ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಪ್ಪಳಕಲಿತ ಶಾಲೆಯ ಅಭಿಮಾನ ಹಾಗೂ ಕೂಡಿ ಕಲಿತವರ ಸ್ನೇಹಕ್ಕಾಗಿ ಮಿಡಿದು ಒಗ್ಗೂಡಿರುವುದು ಶ್ಲಾಘನೀಯ ಎಂದು ಶಿಕ್ಷಣ ತಜ್ಞ ಟಿ.ವಿ. ಮಾಗಳದ ಹೇಳಿದರು.ನಗರದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ 1993-94ನೇ ವರ್ಷದ ಎಸ್ ಎಸ್ ಎಲ್ ಸಿ ಬ್ಯಾಚಿನ ವಿದ್ಯಾರ್ಥಿಗಳಿಂದ ನಡೆದ ಗುರು ಗೌರವ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಗಳು ತಂಗುದಾಣಗಳಾಗಿ ಮೊಬೈಲ್ ಗಳಿಂದ ಮನೆಯ ಕೋಣೆಗಳು ದ್ವೀಪವಾಗಿರುವ ಈ ದಿನಗಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಅವಶ್ಯವಾಗಿದೆ.
ಪರಸ್ಪರ ನಿಂತು ಮಾತನಾಡದ ಪರಸ್ಪರರ ನೋವಿಗೆ ಸ್ಪಂದಿಸದ ಈ ದಿನಗಳಲ್ಲಿ 30 ವರ್ಷಗಳ ನಂತರ ಎಲ್ಲಾ ಒತ್ತಡ ಬದಿಗಿರಿಸಿ ಕಲಿತ ಶಾಲೆಯ ಅಭಿಮಾನ ಹಾಗೂ ಕೂಡಿ ಕಲಿತವರ ಸ್ನೇಹಕ್ಕಾಗಿ ಮಿಡಿದು ಇವತ್ತು ಒಗ್ಗೂಡಿರುವುದು ಶ್ಲಾಘನೀಯ ಎಂದರು.ವಿದ್ಯಾರ್ಥಿಯ ಜಯ ಅದು ವಿದ್ಯಾರ್ಥಿಯ ಗೆಲುವು. ಆದರೆ ವಿದ್ಯಾರ್ಥಿಯ ವೈಫಲ್ಯ ಅದು ಶಿಕ್ಷಕನ ವೈಫಲ್ಯ. ಏಕೆಂದರೆ ವಿದ್ಯಾರ್ಥಿಯ ದೌರ್ಬಲ್ಯಗಳನ್ನು ಶಿಕ್ಷಕ ಅಳಿಸದಿರುವ ಕಾರಣಕ್ಕೆ ಎಂದರು.
ನಿವೃತ್ತ ಶಿಕ್ಷಕ ಗವಿಸಿದ್ದಪ್ಪ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಸಂಸ್ಥೆ ನಡೆದು ಬಂದ ಹಾದಿ ಮತ್ತು ಶಿಕ್ಷಣ ಪರಂಪರೆ ಕುರಿತು ಮಾತನಾಡಿದರು.ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಪಿ.ಡಿ. ಬಡಿಗೇರ್, ಬಿ.ವಿ. ರಾಮರೆಡ್ಡಿ , ವಿ.ಕೆ. ಜಾಗಟಗೇರಿ, ಗವಿಸಿದ್ದಪ್ಪ ಚಲವಾದಿ, ಎಸ್.ಎಂ. ಕಂಬಾಳಿಮಠ ಸೇರಿದಂತೆ ಅನೇಕ ನಿವೃತ್ತ ಶಿಕ್ಷಕರು ಇದ್ದರು.
ಗುರುಗಳ ಮೆರವಣಿಗೆ:ಕಲಿಸಿದ ಗುರುಗಳನ್ನು ನಗರದ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಗಡಿಯಾರ ಕಂಬ, ಗವಿಮಠ ರಸ್ತೆ ಮೂಲಕ ಶಾಲಾ ಆವರಣಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು.ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಗುರುರಾಜ ಕುಲಕರ್ಣಿ ಸ್ವಾಗತಿಸಿದರು. ರಮೇಶ ಬನ್ನಿಕೊಪ್ಪ ಪ್ರಾಸ್ತಾವಿಕ ಮಾತನಾಡಿದರು, ಅಪ್ಪಣ್ಣ ಬೊಂದಾಡೆ, ನಾಗರಾಜ ಪರಡೇಕರ್ ನಿರೂಪಿಸಿ, ವೆಂಕಟೇಶ ಪಂಡ್ರಿ ವಂದಿಸಿದರು.