ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶಬಾಬು ಬಂಡಿಸಿದ್ದೇಗೌಡ ಹೇಳಿದರು.ತಾಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆ ಮುಂಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 143ನೇ ಜಯಂತಿ ಅಂಗವಾಗಿ ಕಾವೇರಿ ನೀರಾವರಿ ನಿಗಮ ಹಾಗೂ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಸಲ್ಲಿಸಿ ನಂತರ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸೆ, ಕಲ್ಪನೆಯಂತೆ ಇಂದಿಗೂ ಸಹ ಕಾವೇರಿ ಮಾತೆ ದಯೆಯಿಂದ ರೈತರ ವ್ಯವಸಾಯಕ್ಕೆ ಹಾಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ಒಡೆಯರ್‌ರವರ ದೂರದೃಷ್ಟಿ ಫಲದಿಂದಾಗಿ ಜಿಲ್ಲೆಯ ರೈತರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದರು.ಕುಡಿಯುವ ನೀರಿನ ಸಮಸ್ಯೆ ಇಲ್ಲ: ಮುಂಗಾರು ವಿಳಂಬವಾಗಿದ್ದರೂ ಸಹ ಬೆಂಗಳೂರು ಸೇರಿದಂತೆ ಅಣೆಕಟ್ಟೆ ಕೆಳ ಭಾಗದಲ್ಲಿನ ಯಾವುದೇ ಗ್ರಾಮಗಳ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಸದ್ಯ ಅಣೆಕಟ್ಟೆಯಲ್ಲಿ 82 ಅಡಿ ನೀರು ಶೇಖರಣೆಗೊಂಡಿದೆ. ಈವರೆಗೂ ಅಣೆಕಟ್ಟೆ ಮೂಲಕ ಬೆಂಗಳೂರಿನ ಜನರಿಗೆ ಕುಡಿಯಲು ನೀಡಬೇಕಿದ್ದ ನೀರನ್ನು ಕೊಡಲಾಗುತ್ತಿದೆ. ಅಣೆಕಟ್ಟೆಗೂ ಸಹ ನೀರು ಹರಿದು ಬರುತ್ತಿದ್ದು ಅಗತ್ಯವಿದ್ದಲ್ಲಿ ಮತ್ತಷ್ಟು ನೀರನ್ನು ಹರಿಸಲಾಗುವುದು. ರಾಜ್ಯದ ದಕ್ಷಿಣ ಭಾಗದ ಜನರಿಗೆ ಕಾವೇರಿ ಮಾತೆ ಯಾವುದೇ ಕಾರಣಕ್ಕೂ ತೊಂದರೆ ನೀಡಿಲ್ಲ, ತೊಂದರೆಯಾವುದಿಲ್ಲ ಎಂದು ಹೇಳಿದರು.
ಕೆರೆ ಕಟ್ಟೆ ನಿರ್ಮಿಸಿ:
ಕಳೆದ ಮೂರು ವರ್ಷಗಳಿಂದ ಮಳೆಯಿಂದ ಬಿದ್ದ ನೀರನ್ನು ಶೇಖರಣೆ ಮಾಡಿಕೊಳ್ಳಲು ಸಾಧ್ಯವಾಗದೆ ಅಣೆಕಟ್ಟೆಯಿಂದ ನದಿಗೆ ನೀರನ್ನು ಹರಿಯಬಿಡಲಾಗುತ್ತಿದೆ. ಹಾಗಾಗಿ ಸರ್ಕಾರ ದೂರದೃಷ್ಟಿ ಇಟ್ಟುಕೊಂಡು ಕೆಆರ್‌ಎಸ್ ಅಣೆಕಟ್ಟೆಗೆ ಪರ್ಯಾಯವಾಗಿ ಕೆರೆ, ಕಟ್ಟೆಗಳನ್ನು ನಿರ್ಮಿಸಿ ನೀರು ಶೇಖರಣೆಗೆ ವ್ಯವಸ್ಥೆ ಮಾಡಬೇಕು. ಸಂಕಷ್ಟ ಕಾಲದಲ್ಲಿ ನೀರಿನ ಕೊರತೆಯನ್ನು ನೀಗಿಸುವಂತೆ ಮನವಿ ಮಾಡಿದರು.
ಸಚಿವ ಸ್ಥಾನಕ್ಕೆ ಪ್ರಾಮಾಣಿಕ ಪ್ರಯತ್ನ:ನೂತನ ಸಿಎಂ ಡಿ.ಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವಾಕಾಂಕ್ಷಿಯಾಗಿದ್ದೇನೆ. ಪಕ್ಷದ ನಾಯಕರು, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ 4 ಚುನಾವಣೆಗಳಲ್ಲಿ 3 ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ. ಅಲ್ಲದೆ ನಮ್ಮ ಕುಟುಂಬ 7- 8 ಬಾರಿ ಚುನಾವಣೆಯಲ್ಲಿ ಗೆದ್ದು, ನಮ್ಮ ತಂದೆಯವರು ಕೇವಲ 6 ತಿಂಗಳುಗಳ ಕಾಲ ಸಚಿವರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ನನಗೆ ಸಚಿವ ಸ್ಥಾನ ನೀಡಿದರೆ ಪ್ರಾಮಾಣಿಕವಾಗಿ ಜಿಲ್ಲೆ ಮಾತ್ರವಲ್ಲದೆ ರಾಜ್ಯವನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ. ಮಂಡ್ಯ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಕನಸು ಕಂಡಿದ್ದೇನೆ, ಇದನ್ನು ನನ್ನ ಕಾಲ ಮಿತಿಯಲ್ಲಿ ಮಾಡಿ ತೋರಿಸುತ್ತೇನೆ ಎಂದು ತಮ್ಮ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದರು.
ಕಾ.ನೀ.ನಿಗಮ ಕಾರ್ಯಪಾಲಕ ಅಭಿಯಂತರ ವೆಂಕಟರಮಣಪ್ಪ, ತಹಸೀಲ್ದಾರ್ ಚೇತನಾ ಯಾದವ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಸಹಾಯಕ ಕಾರ್ಯಪಾಲಕ ಅಭಿಯಂತರ ಫಾರೂಕ್ ಅಭು, ಲೋಹಿತ್, ರಶ್ಮಿ, ಲೋಹಿತ್, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಗೋವರ್ಧನ್, ಕಾ.ನೀ.ನಿಗಮ ಲೆಕ್ಕ ಅಧೀಕ್ಷಕ ಕೆ.ಆರ್.ಶ್ರೀನಿವಾಸ್, ಕೆ.ಆರ್.ಸಾಗರ ಗ್ರಾ.ಪಂ ಮಾಜಿ ಸದಸ್ಯರಾದ ಜಗದೀಪ್ ಸಿಂಗ್, ದೇವರಾಜು, ಕಾ.ನೀ.ನಿಗಮದ ಅಭಿಯಂತರರಾದ ಅಭಿಲಾಷ್, ಶಿವಕುಮಾರ್, ಅಕಿಬ್ ಜಾವಿದ್, ಸಹನಾ, ರಾಜಸ್ವ ನಿರೀಕ್ಷಕ ಪ್ರಸನ್ನ, ಪುರಸಭಾ ಮಾಜಿ ಅಧ್ಯಕ್ಷ ದಿನೇಶ್, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.