ಸಾರಾಂಶ
ಹಾವೇರಿ: ಜಾನಪದ ಸಂಸ್ಕೃತಿ ಜೀವನದ ಸಂಪೂರ್ಣತೆ ಪ್ರತಿಬಿಂಬಿಸುತ್ತದೆ. ಹಳೆಯ ಶತಮಾನಗಳಿಂದ ಉಳಿದುಕೊಂಡು ಬಂದಿರುವ ರೂಢಿಗಳು, ಪದ್ಧತಿಗಳು, ನಂಬಿಕೆ ವ್ಯವಸ್ಥೆಗಳು ಸಮುದಾಯದ ಒಟ್ಟಾರೆ ಕಲ್ಯಾಣಕ್ಕಾಗಿ ಮತ್ತು ಮುಂದಿನ ಪೀಳಿಗೆಯ ತಿಳುವಳಿಕೆಗಾಗಿ ಸಂರಕ್ಷಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಆಂಧ್ರಪ್ರದೇಶದ ವಿಜಯನಗರಂನ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ವಿ. ಕಟ್ಟೀಮನಿ ಹೇಳಿದರು.ಗೋಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆವರಣದ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ೮ ಮತ್ತು ೯ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಜಾನಪದವು ಒಂದು ರೀತಿಯಲ್ಲಿ ಹಳೆ ಪೀಳಿಗೆಯ ಕೃತಜ್ಞತೆಯನ್ನು ಮುಂದಿನ ಪೀಳಿಗೆಗೆ ಮೌಖಿಕ ಪರಂಪರೆಯ ಮೂಲಕ ನೀಡಲ್ಪಟ್ಟಿದೆ. ಇದರಲ್ಲೂ ಜನಪದ ಗೀತೆಗಳು, ಒಗಟುಗಳು, ಕಥೆಗಳು, ಶ್ರವಣ ಗಾಥೆಗಳು, ಗಾದೆಗಳು ಸೇರಿವೆ. ನಮ್ಮ ಪೂರ್ವಿಕರು ಇವುಗಳನ್ನೇ ತಮ್ಮ ಆಸ್ತಿ ಎಂದು ನಂಬಿದ್ದರು. ನಮ್ಮ ಸುಖ-ದುಃಖದಲ್ಲಿ ಕಥೆಗಳನ್ನು ಬಳಸಿಕೊಳ್ಳುವ ಕಲೆ ಅವರಿಗೆ ಕರತಲಾಮಲಕವಾಗಿತ್ತು ಎಂದರು. ಇಲ್ಲಿ ಪ್ರತಿ ಸಮುದಾಯವನ್ನು ಅಧ್ಯಯನ ಮಾಡಲಾಗುತ್ತದೆ. ಆ ಸಮುದಾಯಗಳ ಸಾಂಸ್ಕೃತಿಕ ಬೇರುಗಳನ್ನು ಹುಡುಕಾಡುವ, ಗುರುತಿಸುವ ಕೆಲಸವನ್ನು ಜಾನಪದ ವಿದ್ವಾಂಸರು ಮಾಡುತ್ತಾರೆ. ಜಾನಪದ ವಿಶ್ವವಿದ್ಯಾಲಯದಲ್ಲಿ ಹದಿನಾಲ್ಕು ಸ್ನಾತಕೋತ್ತರ ಕೋರ್ಸ್‌ಗಳು, ನಾಲ್ಕು ಡಿಪ್ಲೋಮಾ ಕೋರ್ಸ್‌ಗಳು, ಕಸೂತಿ ಕಲೆ, ಜನಪದ ಕ್ರೀಡೆ ಮುಂತಾದ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸಗಳಲ್ಲಿ ಅಧ್ಯಯನ, ತರಬೇತಿಯ ವ್ಯವಸ್ಥೆ ಇರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ತಮ್ಮ ಸಮುದಾಯದ ಸಾಂಸ್ಕೃತಿಕ ಡಿ.ಎನ್.ಎ. ಹೊಂದಿದವರಾಗಿದ್ದು, ಬಾಲ್ಯದಿಂದಲೇ ಎತ್ತು, ಎಮ್ಮೆ, ಆಕಳು, ಆಡು, ಕುರಿ ಹಾಲು ಹೈನದ ಪೌಷ್ಟಿಕಾಂಶಗಳನ್ನು ಬಲ್ಲವರಾಗಿದ್ದಾರೆ. ಈ ಆರ್ಥಿಕತೆಯ ಬಲದಿಂದಲೇ ಇವರಲ್ಲಿ ಕೆಲವರಾದರೂ ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಿದೆ. ಬೀಸುವ, ಕುಟ್ಟುವ ಹಾಡುಗಳ ಸೊಲ್ಲುಗಳನ್ನು ಕೇಳುತ್ತ ಬೆಳೆದವರಿದ್ದಾರೆ. ಬಯಲಾಟ, ಯಕ್ಷಗಾನಗಳಲ್ಲಿ ಪಾತ್ರವಹಿಸಿದವರೂ ಇದ್ದಾರೆ ಎಂದರು. ದೇಸಿ ಆಹಾರ ಪದ್ಧತಿ ಜಾನಪದ ವಿಶ್ವವಿದ್ಯಾಲಯದ ಮುಖ್ಯ ಶಕ್ತಿಗಳಲ್ಲಿ ಒಂದು. ಪ್ರವಾಸೋದ್ಯಮ ವಿಭಾಗದ ಅವಿಭಾಜ್ಯ ಅಂಗವಾದ ಆಹಾರ ಪದ್ಧತಿ ಮತ್ತು ಪ್ರಯಾಣ ನಿರ್ವಹಣೆ ವಿಷಯಗಳು ಬಹುಶಾಖೀಯ ಅನುಭವವನ್ನು ಬಯಸುತ್ತವೆ. ಮೈಸೂರಿನ ಸಿ.ಎಫ್.ಟಿ.ಆರ್.ಐ ನಮ್ಮ ದೇಶಿ ಆಹಾರ ಪದ್ಧತಿ ಮೇಲೆ ಸಂಶೋಧನೆ ಮಾಡುತ್ತಿರುವ ಸಂಸ್ಥೆ. ಮಿಲ್ಲೆಟ್ಸ್ (ಸಿರಿಧಾನ್ಯ) ಕರ್ನಾಟಕದ ಪುರಾತನ ಕಾಲದ ಒಕ್ಕಲುತನ ಹುಟ್ಟುವಳಿ ಆಗಿದೆ. ನವಣೆ, ರಾಗಿ, ಜೋಳ, ಸಜ್ಜೆ, ದ್ವಿದಳ ಧಾನ್ಯ, ಬರಲು, ಊದಲು, ಎಳ್ಳು ಒಂದು ಕಾಲಕ್ಕೆ ಬರಗಾಲದ ಧಾನ್ಯಗಳಾಗಿದ್ದವು ಎಂದರು. ನಮ್ಮ ಜಾನಪದಕ್ಕೆ ಸಮಯಕ್ಕೆ ತಕ್ಕ ಹಾಗೆ ಬದಲಾಯಿಸುವ ಕ್ರಿಯಾಶೀಲತೆ ಇರುವುದನ್ನು ನಾವು ಅರಿಯಬೇಕು. ಆಧುನಿಕ ಸಂಸ್ಕೃತಿಗೆ ನಮ್ಮ ಜಾನಪದ ವಿಶ್ವವಿದ್ಯಾಲಯ ಹೊಂದಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳಬೇಕು. ನಮ್ಮ ಪದವೀಧರರ ಅನ್ನಗಳಿಸುವ ಶಕ್ತಿಯ ಮೇಲೆ ಜಾನಪದ ವಿಶ್ವವಿದ್ಯಾಲಯದ ಭವಿಷ್ಯ ಅಡಗಿದೆ. ನಮ್ಮ ಜಾನಪದಕ್ಕೆ ಡೊಳ್ಳು ಕುಣಿತ, ಹಲಗೆ, ಮಜಲು, ಕರಡಿಮಜಲು, ದೇಶಿಯ ಆಟಗಳು, ದೇಶೀಯ ಊಟ, ಉಡುಗೆಗೆ, ವೈಫೈ ಆರ್ಥಿಕತೆಯನ್ನು ಒಪ್ಪಿಕೊಳ್ಳುವ ಸ್ಥಿತಿ ಸ್ಥಾಪಕ ಗುಣವಿದೆ. ಜಾನಪದ ಈ ಸ್ಥಿತಿಸ್ಥಾಪಕ ಗುಣವನ್ನು ಗುರುತಿಸಿ ನಮ್ಮ ಪಠ್ಯಕ್ರಮವನ್ನು ನಿರ್ಮಿಸುವ ಚಾಕಚಕ್ಯತೆಯನ್ನು ಶಿಕ್ಷಕರಾದ ನಾವಿಂದು ಬೆಳೆಸಿಕೊಳ್ಳಬೇಕಾಗಿದೆ ಎಂದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ, ಕುಲಪತಿ ಪ್ರೊ. ಟಿ.ಎಂ.ಭಾಸ್ಕರ್, ಕುಲಸಚಿವರಾದ ಪ್ರೊ.ಎನ್.ಎಂ.ಸಾಲಿ, ಪ್ರೊ.ಸಿ.ಟಿ.ಗುರುಪ್ರಸಾದ್, ಸಿಂಡಿಕೇಟ್ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.