ಸಾರಾಂಶ
ಕಾರ್ಗಿಲ್ ಯುದ್ಧ ಕೇವಲ ಯುದ್ಧವಲ್ಲ ಪ್ರಪಂಚಕ್ಕೆ ಭಾರತೀಯರು ತಲೆಯೆತ್ತಿ ನಿಲ್ಲುವ ಹಾಗೆ ಗೌರವ ಕೊಡಿಸಿದ ದಿನವಾಗಿದೆ
ನರಗುಂದ: ಶಿಕ್ಷಣ ಕಲಿಕೆಯಲ್ಲಿ ಮೊದಲು ದೇಶ ಭಕ್ತಿಯ ಅಭಿಮಾನವನ್ನು ಶಿಕ್ಷಕರು ಶಾಲೆಯಲ್ಲಿ ತಿಳಿಸಿಕೊಡುವುದು ಮುಖ್ಯವಿದೆ ಎಂದು ಶಿಕ್ಷಕ ಸುರೇಶ ಬನ್ನಿಗಿಡದ ಹೇಳಿದರು.
ಅವರು ತಾಲೂಕಿನ ರಡ್ಡೇರ ನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26ನೇ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸೈನಿಕರು ಸದಾ ನೋವು ಹಾಗೂ ಕಷ್ಟಗಳನ್ನು ಸಹಿಸುತ್ತಾ ನಮಗಾಗಿ ಕೆಚ್ಚೆದೆಯಿಂದ ಹೋರಾಡಿ ದೇಶ ರಕ್ಷಣೆ ಮಾಡುತ್ತಿದ್ದಾರೆ. ಶಿಕ್ಷಣ ಪಡೆಯುವ ಇಂದಿನ ಮಕ್ಕಳು ದೇಶಾಭಿಮಾನ ಬೆಳೆಸಿಕೊಂಡು ಸೈನಿಕರಂತೆ ದೇಶದ ಋಣ ತೀರಿಸಬೇಕೆಂದು ಕರೆ ನೀಡಿದರು.ಪ್ರಭಾರಿ ಪ್ರಧಾನಗುರುಗಳಾದ ಜಿ.ವಿ. ಪೂಜಾರ ಮಾತನಾಡಿ, ಕಾರ್ಗಿಲ್ ಯುದ್ಧ ಕೇವಲ ಯುದ್ಧವಲ್ಲ ಪ್ರಪಂಚಕ್ಕೆ ಭಾರತೀಯರು ತಲೆಯೆತ್ತಿ ನಿಲ್ಲುವ ಹಾಗೆ ಗೌರವ ಕೊಡಿಸಿದ ದಿನವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಯೋಧರಾದ ಯಲ್ಲಪ್ಪ ಬೀರಗೌಡ್ರ ಹಾಗೂ ಬಸಯ್ಯ ಮಠಪತಿಯವರನ್ನು ಸನ್ಮಾನಿಸಲಾಯಿತು.ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಹಾಗೂ ಸದ್ಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯಲ್ಲಪ್ಪ ಬೀರಗೌಡ್ರ ಹಾಗೂ ಬಸಯ್ಯ ಮಠಪತಿ ಮಕ್ಕಳೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿ ಮಕ್ಕಳು ಕೇಳಿದ ಸೈನಿಕರು ಹಾಗೂ ಯುದ್ಧದ ಸಂದರ್ಭಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರವನ್ನು ಹೇಳಿ ಅವರಲ್ಲಿ ದೇಶಾಭಿಮಾನ ಹಾಗೂ ಜ್ಞಾನವನ್ನು ತಿಳಿಸಿಕೊಟ್ಟರು.
ಶಿಕ್ಷಕ ಶಿಲ್ಪಾ ಹೊಸಮಠ, ಕಾಳಮ್ಮ ಕಮ್ಮಾರ, ಭಾವನಾ ಚಲವಾದಿ, ಡಿ.ವೈ. ತಿಮ್ಮಾಪೂರ, ದೀಪಾ ನವಲಗುಂದ, ಶಶಿಕಲಾ ದಾಸರ ಸೇರಿದಂತೆ ಮುಂತಾದವರು ಇದ್ದರು.