ಪ್ರತಿಭಾವಂತರ ಗುರುತಿಸಿ ಪ್ರೋತ್ಸಾಹಿಸೋದು ಮುಖ್ಯ

| Published : Jul 21 2025, 12:00 AM IST

ಸಾರಾಂಶ

ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕಡೆ ಸೂಕ್ತ ಗಮನಹರಿಸಬೇಕು ಎಂದು ವಾಲ್ಮೀಕಿ ನಾಯಕ ಸಮಾಜ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಹೇಳಿದ್ದಾರೆ.

- ವಿದ್ಯಾರ್ಥಿನಿ ಶ್ಯಾಗಲೆ ಆರ್.ಕವಿತಾ ಸನ್ಮಾನ ಕಾರ್ಯಕ್ರಮದಲ್ಲಿ ಬಿ.ವೀರಣ್ಣ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕಡೆ ಸೂಕ್ತ ಗಮನಹರಿಸಬೇಕು ಎಂದು ವಾಲ್ಮೀಕಿ ನಾಯಕ ಸಮಾಜ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಹೇಳಿದರು.

ಶನಿವಾರ ಐಐಟಿ ಎಂಎಸ್‌ಸಿ, ಎಂಟೆಕ್ ರಸಾಯನ ಶಾಸ್ತ್ರ ಡ್ಯುಯಲ್ ಪದವಿಗೆ ಆಯ್ಕೆಯಾದ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಹಾಗೂ ಜೆ.ಎಚ್. ಪಟೇಲ್ ಬಡಾವಣೆಯ ಎಸ್‌ಟಿ ಬಾಲಕಿಯರ ಹಾಸ್ಟೆಲ್‌ನ ವಿದ್ಯಾರ್ಥಿನಿ ಶ್ಯಾಗಲೆ ಆರ್.ಕವಿತಾ ಅವರಿಗೆ ನಾಯಕ ಸಮಾಜದಿಂದ ಸನ್ಮಾನಿಸಿ ಅವರು ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಬೇಕು. ಈಗಾಗಲೇ ನಾಯಕ ಸಮಾಜ ವತಿಯಿಂದ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಮಹಿಳಾ ಹಾಸ್ಟಲ್ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.

ಸುಸಂಸ್ಕೃತ ಸಮಾಜ ನಿರ್ಮಾಣ ಆಗಬೇಕಾದರೆ ಇಂದಿನ ಮಕ್ಕಳಿಗೆ ಉತ್ತಮ ಪ್ರೋತ್ಸಾಹ, ಮಾರ್ಗದರ್ಶನ ಅವಶ್ಯಕತೆ ಬಹಳಷ್ಟಿದೆ. ಉಳ್ಳವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

ವಿದ್ಯಾರ್ಥಿನಿ ಕವಿತಾ ಸನ್ಮಾನ ಸ್ವೀಕರಿಸಿ ಮಾತನಾಡಿ, 5ನೇ ಸೆಮಿಸ್ಟರ್‌ನಲ್ಲಿ ಸ್ನಾತಕೋತ್ತರ (ಜೆಎಎಂ) ಪರೀಕ್ಷೆಗೆ ಜಂಟಿ ಪ್ರವೇಶ ಬರೆದು, ಐಐಟಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಐಐಟಿ ಜೋಧಪುರವನ್ನು ಆಯ್ಕೆ ಮಾಡಿಕೊಂಡೆ. ಎಂಎಸ್‌ಸಿ/ಎಂಟೆಕ್ ರಸಾಯನಶಾಸ್ತ್ರ ಡ್ಯುಯಲ್ ಪದವಿಗೆ ಅರ್ಹಳಾಗಿದ್ದೇನೆ. ನನ್ನ ವಿದ್ಯಾಭ್ಯಾಸಕ್ಕಾಗಿ ಪೋಷಕರಾದ ರಮೇಶ್, ರೇಖಾ, ಸುರೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಮಠದ್, ವಿನೋದಮ್ಮ ಸಹಕಾರ ನೀಡಿದ್ದಾರೆ ಹಾಗೂ ಐಐಟಿ ಪ್ರವೇಶಕ್ಕೆ ಉತ್ತೇಜನ ನೀಡಿದ್ದಾರೆ ಎಂದು ನೆನೆದರು.

ನಮ್ಮ ಸಮಾಜದ ಅಧ್ಯಕ್ಷ ಬಿ.ವೀರಣ್ಣ ಅವರು ನನ್ನ ಸಾಧನೆ ಗುರುತಿಸಿ ಸನ್ಮಾನಿಸಿರುವುದು ಇನ್ನಷ್ಟು ಜವಾಬ್ದಾರಿ ಹೆಚ್ಚಾಗುವಂತೆ ಮಾಡಿದೆ. ಅವರ ಆಶಯದಂತೆ ಉತ್ತಮ ಅಭ್ಯಾಸ ಮಾಡಿ ಸಮಾಜಕ್ಕೆ ಹಾಗೂ ಪೋಷಕರಿಗೆ, ಅಧಿಕಾರಿ ವೃಂದದವರಿಗೆ ಕೀರ್ತಿ ತರಲು ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ ಶ್ಯಾಗಲೆ ಕೆ.ಆರ್.ಮಂಜುನಾಥ್, ಎನ್.ಎಂ. ಆಂಜನೇಯ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು.

- - -

-19ಕೆಡಿವಿಜಿ41.ಜೆಪಿಜಿ:

ದಾವಣಗೆರೆಯಲ್ಲಿ ವಿದ್ಯಾರ್ಥಿನಿ ಶ್ಯಾಗಲೆ ಆರ್.ಕವಿತಾ ಅವರನ್ನು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಸನ್ಮಾನಿಸಿದರು.