ಸಾರಾಂಶ
ಲಕ್ಷ್ಮೇಶ್ವರ: ವಿಜ್ಞಾನ ಇಂದು ಎಲ್ಲೇಡೆ ಹಾಸು ಹೊಕ್ಕಾಗಿದ್ದು, ವಿಜ್ಞಾನವಿಲ್ಲದೆ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ, ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ಬೆಳವಣಿಗೆಗೆ ಹೆಚ್ಚು ಆದ್ಯತೆಯನ್ನು ಭಾರತರತ್ನ ಪ್ರೊ. ಸಿ.ಎನ್.ಆರ್.ರಾವ್ ಮಾಡುತ್ತಿದ್ದಾರೆ ಎಂದು ಜವಾಹರಲಾಲ್ ಉನ್ನತ ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ಹಿರಿಯ ವಿಜ್ಞಾನಿ ಪ್ರೊ. ಜಿ.ಯು. ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಸ್ಕೂಲ್ ಚಂದನದಲ್ಲಿ ೨ ದಿನಗಳ ಕಾಲ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಎಜ್ಯುಕೇಶನ ಫೌಂಡೇಶನ, ಜವಾಹರಲಾಲ್ ನೆಹರು ಉನ್ನತ ಸಂಶೋಧನೆ ಕೇಂದ್ರ ಹಾಗೂ ಸ್ಕೂಲ್ ಚಂದನ ಶಾಲೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ವಿಸೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿಜ್ಞಾನ ವಿಷಯ ಮಕ್ಕಳಿಗೆ ಆಸಕ್ತಿ ಹುಟ್ಟಿಸುವಂತೆ ಇರಬೇಕು, ವಿಜ್ಞಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವಾಗಬೇಕಾಗಿದೆ,ವಿಜ್ಞಾನ ಎಂದೆಂದಿಗೂ ಈ ಜಗತ್ತಿನಲ್ಲಿ ಶಾಶ್ವತವಾಗಿರುತ್ತದೆ ಎಂದರು.
ಡಾ. ಇಂದುಮತಿ ವರ್ಚುವಲ್ ಮೂಲಕ ಮಾತನಾಡಿ, ಲಕ್ಷ್ಮೇಶ್ವರ ನನಗೆ ತವರು ಮನೆ ಇದ್ದಂತೆ, ಚಂದನ ಶಾಲೆ ನನ್ನ ಶಾಲೆಯಾಗಿ ಸ್ವೀಕರಿಸಿದ್ದೇನೆ, ಇಲ್ಲಿರುವ ಮಕ್ಕಳು ನಮ್ಮ ಮಕ್ಕಳಿಂದಂತೆ ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಚಂದನ ಶಾಲೆಯು ಈ ಭಾಗದಲ್ಲಿಯೇ ಮಾದರಿ ಶಾಲೆಯಾಗಿ ಬೆಳೆಯುತ್ತಿರುವದು ಉತ್ತಮ ವಿಚಾರವಾಗಿದ್ದು, ಈ ಭಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿ ಯಶಸ್ಸು ಕಾಣುವಂತೆ ಸಲಹೆ ನೀಡಿದರು.
ಚಂದನ ಶಾಲೆ ಸಂಸ್ಥಾಪಕ ಅಧ್ಯಕ್ಷ ಟಿ. ಈಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತರತ್ನ ಪ್ರೊ. ಸಿಎನ್‌ಆರ್‌ರಾವ್ ಗ್ರಾಮೀಣ ಭಾಗದಲ್ಲಿ ವಿಜ್ಞಾನದ ಬಗ್ಗೆ ವಿಶೇಷ ಒಲವು ಮೂಡಬೇಕು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಸಹ ವಿಜ್ಞಾನದಲ್ಲಿ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಕಳೆದ ಏಳು ವರ್ಷಗಳಿಂದ ಸ್ಕೂಲ್ ಚಂದನದಲ್ಲಿ ವಿಜ್ಞಾನ ವಿಸ್ತೃತ ಕಾರ್ಯಕ್ರಮ ರೂಪಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಸ್ಕೂಲ್ ಚಂದನದಲ್ಲಿ ಪಾಠ ಮಾಡುತ್ತಿದ್ದಾರೆ. ಇದು ಸಿಎನ್‌ಆರ್ ಅವರಿಗೆ ಚಂದನ ಶಾಲೆಯ ಬಗ್ಗೆ ಇರುವ ಕಾಳಜಿ ಮತ್ತು ಪ್ರೀತಿ ಕಾರಣವಾಗಿದ್ದು, ನಮ್ಮ ಭಾಗದ ಮಕ್ಕಳಿಗೆ ಆದ್ಯತೆ ದೊರೆಯಬೇಕು ಎನ್ನುವ ಉದ್ದೇಶ ಸಂಸ್ಥೆಯದ್ದಾಗಿದ್ದು ರಾವ್ ಅವರು ನೀಡುತ್ತಿರುವ ಈ ಸಹಾಯ ಮತ್ತು ಪ್ರೋತ್ಸಾಹ ಸ್ಮರಣೀಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಿರ್ದೇಶಕ ಎಚ್.ಸಿ. ರಟಗೇರಿ, ಖ್ಯಾತ ವಿಜ್ಞಾನಿ ಎಸ್.ಎಂ. ಶಿವಪ್ರಸಾದ, ಎನ್.ಎಸ್. ವಿದ್ಯಾಧಿರಾಜ್, ಡಾ. ಜಗದೀಶ ಅಂಗಡಿ, ಡಾ. ಜಯಶ್ರೀ, ಡಾ.ಕುಶಾಗ್ರ ಬನ್ಸಾಲ್, ಡಾ. ಪ್ರತಾಪ ವೈಷ್ಣೋಯಿ, ಡಾ. ವಿನಾಯಕ ಪತ್ತಾರ, ರೇವಣಸಿದ್ದಪ್ಪ, ಪ್ರಾಚಾರ್ಯ ಆರ್.ಜಿ. ಭಾವಾನವರ, ವಿದ್ಯಾರ್ಥಿ ಸಂಸತ್ ಕ್ಯಾಪ್ಷನ್ ತನು ಹಾಜರಿದ್ದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ವಿಜ್ಞಾನಿಗಳು ಪಾಠ ಮಾಡಿದರು.ವಿದ್ಯಾರ್ಥಿ ವಚನಾ ಸ್ವಾಗತಿಸಿದರು, ಶಿಲ್ಪಾ ವಂದಿಸಿದಳು, ಪ್ರಿಯಾಂಕಾ ಮತ್ತು ಸುರೇಶ ನಿರೂಪಿಸಿದರು. ವಿವಿಧ ಶಾಲಾ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.