ಅಸ್ತಿತ್ವಕ್ಕಾಗಿ ವೀರಶೈವ-ಲಿಂಗಾಯತರು ಹೋರಾಡುವುದು ಅವಶ್ಯ

| Published : Aug 29 2025, 01:00 AM IST

ಅಸ್ತಿತ್ವಕ್ಕಾಗಿ ವೀರಶೈವ-ಲಿಂಗಾಯತರು ಹೋರಾಡುವುದು ಅವಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಕೋಟಿಗೂ ಹೆಚ್ಚು ಇದ್ದ ವೀರಶೈವ-ಲಿಂಗಾಯತ ಸಮಾಜ ಇದಿಗ 70ರಿಂದ 80 ಲಕ್ಷ ಆಗಿರುವುದು ವಿಷಾದಕರ ಸಂಗತಿ. ನೈಜ ಜನಸಂಖ್ಯೆ ದಾಖಲಾಗದ ಹೊರತು ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ. ಅದಕ್ಕಾಗಿ ನ್ಯಾಯ ಸಿಗುವವರೆಗೆ ಹೋರಾಡುವುದು ಅವಶ್ಯವಾಗಿದೆ ಎಂದು ಮುಂಡರಗಿ ಅನ್ನದಾನೀಶ್ವರ ಮಠದ ಪೀಠಾಧಿಪತಿ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ವೀರಶೈವ-ಲಿಂಗಾಯತರಿಗೆ ಕರೆ ನೀಡಿದ್ದಾರೆ.

ಮುಂಡರಗಿ:ಒಂದು ಕೋಟಿಗೂ ಹೆಚ್ಚು ಇದ್ದ ವೀರಶೈವ-ಲಿಂಗಾಯತ ಸಮಾಜ ಇದಿಗ 70ರಿಂದ 80 ಲಕ್ಷ ಆಗಿರುವುದು ವಿಷಾದಕರ ಸಂಗತಿ. ನೈಜ ಜನಸಂಖ್ಯೆ ದಾಖಲಾಗದ ಹೊರತು ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ. ಅದಕ್ಕಾಗಿ ನ್ಯಾಯ ಸಿಗುವವರೆಗೆ ಹೋರಾಡುವುದು ಅವಶ್ಯವಾಗಿದೆ ಎಂದು ಮುಂಡರಗಿ ಅನ್ನದಾನೀಶ್ವರ ಮಠದ ಪೀಠಾಧಿಪತಿ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ವೀರಶೈವ-ಲಿಂಗಾಯತರಿಗೆ ಕರೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ್ದು, ನಮ್ಮ ಸಮಾಜವು ತಾನು ಬೆಳೆಯುವುದರೊಂದಿಗೆ ಎಲ್ಲರಿಗೂ ಮಠ-ಮಾನ್ಯಗಳು ಅವಕಾಶ ನೀಡಿದ ಫಲವಾಗಿ ಹಲವರು ವಿದ್ಯಾವಂತರು, ಬುದ್ಧಿವಂತರು, ಉದ್ಯೋಗಶೀಲರೂ ಆಗಿದ್ದಾರೆ. ಆದರೆ, ಕೃಷಿ ಪ್ರಧಾನವಾಗಿದ್ದ ನಾವು ಅಲ್ಪಹಿಡುವಳಿದಾರರಾಗಿದ್ದೇವೆ. ಸ್ವಯಂ ಉದ್ಯೋಗಿಯು ಮಾತ್ರ ತಕ್ಕಮಟ್ಟಿಗೆ ಸ್ಥಿತವಂತನಾಗಿರಬಹುದು. ಬಹುಜನ ವೀರಶೈವರ ಸ್ಥಿತಿ ಚೆನ್ನಾಗಿಲ್ಲ. ಬುದ್ಧಿವಂತರೆನ್ನುವವರಲ್ಲೂ ಐಕ್ಯತೆಯಿಲ್ಲ. ವಿತಂಡವಾದಿಗಳಾಗುತ್ತಿದ್ದಾರೆ. ನೈಜವಾದ ಸಾಧನೆ ಸಿದ್ಧಾಂತಗಳನ್ನು ತಿಳಿದವರು ಮೌನವಾಗಿದ್ದಾರೆ. ಇದು ಈ ಸಮಾಜದ ಸ್ಥಿತಿ-ಗತಿ ಎಂದು ವಿಷಾಧಿಸಿದ್ದಾರೆ.

ಲಿಂಗಾಯತ ಪದಕ್ಕೆ ಅದೇ ಧರ್ಮವಾಚಕವೆಂದೂ ಅದೇ ಸ್ವತಂತ್ರ ಧರ್ಮವೆಂದು ಪ್ರತಿಪಾದಿಸುವವರೂ ಅಧಿಕವಾಗಿದ್ದಾರೆ. ಈ ಸಂದರ್ಭದಲ್ಲಿ ಇವೆಲ್ಲ ಅನವಶ್ಯಕವಾಗಿವೆ. ಬಹುಸಂಖ್ಯೆಯ ಸಮಾಜವನ್ನು ತುಳಿದು ಹಾಕುವ ಕೆಲವರು ಈಗಾಗಲೇ ವೀರಶೈವ-ಲಿಂಗಾಯತರು ಅಲ್ಪಸಂಖ್ಯಾತರೆಂಬುದನ್ನು ತೋರಿಸಿ, ರಾಷ್ಟ್ರಮಟ್ಟದಲ್ಲಿ ಜನರಲ್ ವರ್ಗಕ್ಕೆ ಸೇರ್ಪಡೆಯಾದ ಕಾರಣ ಸಮಾಜಕ್ಕೆ ಯಾವ ಪ್ರಯೋಜನವೂ ಆಗುತ್ತಿಲ್ಲ. ಯಾವ ಸವಲತ್ತುಗಳು ದೊರೆಯುತ್ತಿಲ್ಲ ಎಂದು ಶ್ರೀಗಳು ಮನವರಿಕೆ ಮಾಡಿದ್ದಾರೆ.

ದಲಿತರ ಮೀಸಲಾತಿಗೆ 10 ವರ್ಷ ಅವಕಾಶ ಕಲ್ಪಿಸಲಾಗಿತ್ತು, ಈಗ ಒಂಭತ್ತು ದಶಕಗಳು ದಾಟುತ್ತಿದ್ದರೂ ಜಾತಿ-ಒಳಜಾತಿ ಮೀಸಲಿಗಾಗಿ ಪ್ರಯತ್ನ ಮಾಡುತ್ತಿರುವುದು ರಾಜಕೀಯ ದುರುದ್ದೇಶವಾಗಿದೆ. ವೀರಶೈವ-ಲಿಂಗಾಯತ ಸಮಾಜದವರು ತ್ಯಾಗ-ಪರಿಶ್ರಮದಿಂದ ಕಟ್ಟಿದ ಶಿಕ್ಷಣ ಸಂಸ್ಥೆಗಳಲ್ಲಿನ ಉನ್ನತ ಹುದ್ದೆಯಲ್ಲಿ ನಮ್ಮವರಿಗೇ ಕೂಡಲು ಸಾಧ್ಯವಾಗುತ್ತಿಲ್ಲ. ಮೀಸಲಾತಿಯಿಂದ ಪಟ್ಟವೇರಿದವರೆ ಮತ್ತೆ-ಮತ್ತೆ ಮುಂದಾಗುತ್ತಿರುವುದು ಸಂವಿಧಾನಕ್ಕೆ ಅಪಚಾರವೇ ಹೊರತು ಅದು ಭೂಷಣವಲ್ಲ ಎಂದು ಶ್ರೀಗಳು ಖೇದ ವ್ಯಕ್ತಪಡಿಸಿದ್ದಾರೆ.

ಜಾತಿಗಳನ್ನು ಬದಿಗಿರಿಸಿ, ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮಾಜದ ವ್ಯಕ್ತಿಗಳನ್ನು ಗಣನೆ ಮಾಡಿದರೆ ಎಲ್ಲರಿಗೂ ಸಮಾನ ಅವಕಾಶ ಸಾಧ್ಯವಾಗುವುದು. ಹಾಗಾಗಿ ಜನಗಣತಿಯಲ್ಲಿ ಮುಖ್ಯ ಕಾಲಂನಲ್ಲಿ ವೀರಶೈವ -ಲಿಂಗಾಯತ ಎಂದು ನಮೂದಿಸಿ, ಉಪಕಾಲಂನಲ್ಲಿ ನಿಮ್ಮ ಉಪಜಾತಿಯನ್ನು ನಮೂದಿಸಬೇಕೆಂದು ಅನ್ನದಾನೀಶ್ವರ ಸ್ವಾಮೀಜಿ ಕರೆ ನೀಡಿದ್ದಾರೆ.