ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತೀಯ ಅಂಚೆ ಚೀಟಿಗಳು ಸೇರಿದಂತೆ ವಿಶ್ವದ ಎಲ್ಲ ದೇಶಗಳ ಅಂಚೆ ಚೀಟಿಗಳ ಮಹತ್ವ ಹಾಗೂ ಅದರ ಇತಿಹಾಸ ಇಂದಿನ ಯುವಪೀಳಿಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಹೇಳಿದರು.ನಗರದ ಮಹಾವೀರ ಭವನದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಅಂಚೆ ಇಲಾಖೆ ವತಿಯಿಂದ ದೇಶದ ಅನೇಕ ಮಹನೀಯರ, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಗಣ್ಯರ ಅಂಚೆ ಚೀಟಿ ಬಿಡುಗಡೆಗೊಳಿಸಲಾಗಿದೆ. ಇವುಗಳ ಇತಿಹಾಸ ಅರಿಯುವುದರಿಂದ ದೇಶಕ್ಕೆ ಗಣ್ಯರು, ಮಹನೀಯರು ನೀಡಿದ ಕೊಡುಗೆ ಸ್ಮರಿಸಬಹುದಾಗಿದೆ ಎಂದು ಹೇಳಿದರು.ಅಂಚೆ ಇಲಾಖೆಯಿಂದ ನಡೆಸಲಾಗುವ ರಸಪ್ರಶ್ನೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಧ್ಯಾರ್ಥಿಗಳು ಭಾಗವಹಿಸುವುದರ ಮೂಲಕ ತಮ್ಮ ಜ್ಞಾನ ಅವೃದ್ಧಿಪಡಿಸಿಕೊಳ್ಳಬಹುದಾಗಿದೆ. ಅಂಚೆ ಚೀಟಿಗಳ ಸಂಗ್ರಹ ಒಂದು ಉತ್ತಮ ಹವ್ಯಾಸವಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ದೇಶ, ವಿದೇಶಗಳ ಅಂಚೆ ಚೀಟಿಗಳ ಸಂಗ್ರಹ ಮಾಡುವುದರ ಕುರಿತು ಆಸಕ್ತಿ ವಹಿಸಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಅವರು ಮಾತನಾಡಿ, ಬೆಳಗಾವಿಯಲ್ಲಿ ೧೯೨೪ರಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ನೆನಪುಗಳನ್ನು ಮೆಲಕು ಹಾಕುತ್ತ, ಇಂದಿನ ಆಧುನಿಕ ಯುಗದಲ್ಲಿ ಓದುವ, ಅಂಚೆ ಚೀಟಿ ಸಂಗ್ರಹ ಸೇರಿದಂತೆ ವಿವಿಧ ಹವ್ಯಾಸಗಳಿಂದ ಯುವಪೀಳಿಗೆ ದೂರಾಗುತ್ತಿರುವುದು ಕಳವಳಕಾರಿ ಸಂಗತಿ. ಇಂದಿನ ಯುವಜನರು ವೈವಿದ್ಯಮಯ ಅಂಚೆ ಚೀಟಿ ಸಂಗ್ರಹದಂತಹ ಹವ್ಯಾಸ ಬೆಳೆಸಿಕೊಂಡು ಉತ್ತಮ ಪುಸ್ತಕ ಓದುವುದರ ಮೂಲಕ ಜ್ಞಾನವೃದ್ಧಿಸಿಕೊಳ್ಳಬೇಕು. ಹವ್ಯಾಸಗಳ ರಾಜನೆಂದೇ ಪ್ರಖ್ಯಾತಿ ಪಡೆದ ಅಂಚೆ ಚೀಟಿಗಳ ಪ್ರದರ್ಶನ ನಡೆಯುತ್ತಿರುವುದು, ಅದರಲ್ಲೂ ಇಲ್ಲಿನ ಪ್ರಮುಖ ಬೆಳೆಯಾದ ಕಬ್ಬು ಬೆಳೆ ಹೆಸರಿನಲ್ಲಿ ನಡೆಯುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್, ಉತ್ತರ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕಿ ತಾರಾ ಪಾಲ್ಗೊಂಡಿದ್ದರು. ಅಂಚೆ ಅಧಿಕ್ಷಕವಿಜಯ ವಾದೋನಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಚಿಕ್ಕೋಡಿಯ ಅಂಚೆ ಅಧೀಕ್ಷಕ ವಿಜಯ ಬಾದಾಮಿ ಸ್ವಾಗತಿಸಿದರು. ಗೋಕಾಕ್‌ನ ಅಂಚೆ ಅಧೀಕ್ಷಕ ರಮೇಶ ಕಾಮತೆ ವಂದಿಸಿದರು. ಶ್ರುತಿ ನಿರೂಪಿಸಿದರು. ಇದೇ ವೇಳೆ ರೈತ ಮುಖಂಡರಾದ ಸಿದಗೌಡ ಮೋದಗಿ, ಶಿವಾನಂದ ಸುಳದಾಳ, ಪ್ರಕಾಶ ಕುಲಕರ್ಣಿ, ಮಾರುತಿ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು.ವಿಶೇಷ ಅಂಚೆ ಕಾರ್ಡ್ ಬಿಡುಗಡೆ: ವೇದಿಕೆಯಲ್ಲಿ ಇಕ್ಷುಪೆಕ್ಸ್ ನ ಮ್ಯಾಸ್ಕಾಟ್ ಸಂಪರ್ಕ್ ಕುರಿತಾಗಿ ವಾಹಿತ ವಿಶೇಷ ಲಕೋಟೆ, ಬೆಳ್ಳಿಹಬ್ಬ ಆಚರಿಸುತ್ತಿರುವ ಸತೀಶ್ ಸುಗರ್ಸ್ ನ ಕುರಿತಾದ ವಿಶೇಷ ಅಂಚೆ ಲಕೋಟೆ, ಗೋಕಾಕ್ ಜಲಪಾತದ ಶಾಶ್ವತ ಚಿತ್ರಾತ್ಮಕ ಅಂಚೆ ಮುದ್ರೆ, ಆದಿನಾಥ್ ತೀರ್ಥಂಕರ ಇಕ್ಷುರಸ ಸೇವನೆ ಮತ್ತು ಭಾರತದ ಅದಿವಾಸಿಗಳ ಕುರಿತಾದ ಮುದ್ರಿತ ಅಂಚೆ ಕಾರ್ಡ್ ಗಳನ್ನು ಬಿಡುಗಡೆಗೊಳಿಸಲಾಯಿತು. ಖ್ಯಾತ ಅಂಚೆ ಚೀಟಿ ಸಂಗ್ರಹಕಾರ ಎನ್. ಶ್ರೀದೇವಿ ಅವರ ರಚಿಸಿದ ಬುದ್ಧನ ಕುರಿತಾದ ಅಂಚೆ ಜಗತ್ತನ್ನು ಪರಿಚಯಿಸುವ ''''ಸಾಗ ಆಫ್ ಬುದ್ದಿಸಂ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.