ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಸರ್ವರನ್ನು ಸಮಾನತೆಯಿಂದ ಗೌರವಿಸುವ ಜಾನಪದ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸಬೇಕು ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಹೇಳಿದರು.ನಗರದ ಕಲಾಜ್ಯೋತಿ ಕಲಾ ಕೇಂದ್ರ ಸಭಾಂಗಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಜಾನಪದ ಗಾಯನ ಮತ್ತು ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಶ್ರೀಮಂತ ಜಾನಪದ ಕಲೆಗಳು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕಲು, ಸಾಮರಸ್ಯದಿಂದ ಹಬ್ಬ ಆಚರಿಸಲು ನಮ್ಮ ನಾಡಿನ ಜಾನಪದ, ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳು ಸರ್ವ ಜನರನ್ನು ತನ್ನ ಕಡೆ ಸೆಳೆದು ಸ್ನೇಹ- ಸಹೋದರತ್ವ, ನೆಮ್ಮದಿಯ ಜೀವನ ನಡೆಸಲು ಜಾನಪದ ಪ್ರೇರಕ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಸತೀಶ್ ಮಾತನಾಡಿ, ಜಾನಪದ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಜಾನಪದ ಒಂದು ಅಲಿಖಿತ ಸಂವಿಧಾನ, ಜಾನಪದ ಮತ್ತು ಕಲಾವಿದರ ಕಲ್ಯಾಣಕ್ಕಾಗಿ ಇಲಾಖೆ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮಾತೃಶ್ರೀ ಸಂಸ್ಥೆ ಸರ್ಕಾರದಿಂದ ಯಾವುದೇ ಧನ ಸಹಾಯ ಪಡೆಯದೆ ನಿರಂತರವಾಗಿ ಹಲವಾರು ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಿ ನಿಸ್ವಾರ್ಥವಾಗಿ ಕಲಾಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಚಂದ್ರ(ನಮನ ಚಂದ್ರು) ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಮೂಲ ಜಾನಪದ ಕಲಾವಿದರನ್ನು ಗುರುತಿಸಿ ಅವರಲ್ಲಿರುವ ಕಲಾಸಂಪತ್ತನ್ನು ಮತ್ತು ಅನುಭವಗಳನ್ನು ದಾಖಲಿಕರಿಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಮುದಾಯಕ್ಕೆ ತರಬೇತಿ ನೀಡಿ ಜಾನಪದವನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ. ಬಿ.ಆರ್.ಶಿವಕುಮಾರ್‌ಗೆ ಜಾನಪದ ಕಲಾ ಗೌರವ ನೀಡಿ ಸನ್ಮಾನಿಸಲಾಯಿತು.
ಪದ್ಮಶ್ರೀ ಪುರಸ್ಕೃತ ಡಾ. ಹಾಸನ್ ರಘು, ಅಂತಾರಾಷ್ಟ್ರೀಯ ಯಕ್ಷಗಾನ ಕಲಾವಿದ ಎಸ್.ರೇಣುಕಾ ಪ್ರಸಾದ್, ಪತ್ರಕರ್ತೆ ಸುಧಾರಾಣಿ, ಸಮಾಜ ಸೇವಕಿ ಲಾವಣ್ಯ, ಲಯನ್ ಸಂಸ್ಥೆ ಅಧ್ಯಕ್ಷೆ ಲಯನ್ ಶಾರದಾ, ನಗರಸಭೆ ಸದಸ್ಯ ಸೋಮಶೇಖರ್ (ಮಣಿ), ಮಿಲಿಯನ್ ಸ್ಟಾರ್ ನಗೆಮಳೆರಾಜ ಸಿ. ಚಂದ್ರಾಜ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಹರೀಶ್ ಬಾಲು, ಪೂಜಾ ಕುಣಿತ ಕಲಾವಿದ ಪಾರ್ಥ ಸಾರಥಿ, ಜಲ ಸಂಪನ್ಮೂಲ ಇಲಾಖೆ ದ್ವಿತೀಯ ದರ್ಜೆ ಸಹಾಯಕಿ ಎಚ್.ಎಸ್. ರಾಧಾ ಲೋಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅಂತಾರಾಷ್ಟ್ರೀಯ ಮಟ್ಟದ ಕಲಾವಿದ ಎಚ್.ಎಸ್. ಸರ್ವೋತ್ತಮ್, ವಿಶ್ವ ಬೆಳಕು ಮಹೇಶ್, ಚಂದ್ರಶೇಖರ್, ಎಚ್. ಎಸ್ ಲೋಕೇಶ, ಎಂ. ನಾಗೇಶ, ಸಿ. ಚಂದ್ರಾಜು, ಅಂಕಿತ, ನಾಗಶ್ರೀ ತಂಡದಿಂದ ಜಾನಪದ ಗಾಯನ ಹಾಗೂ ನಂದಿನಿ, ದೀಪು, ಬಿಂದುಶ್ರೀ, ಮಹಾಲಕ್ಷ್ಮೀ, ಚಂದನ್, ದಯಾನಂದ್, ಮೇಘನಾ, ವರ್ಷಿಣಿ, ದಿವ್ಯ, ಸಂಗಡಿಗರಿಂದ ಜಾನಪದ ನೃತ್ಯ ನಡೆಸಿಕೊಟ್ಟರು.