ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವುದು ಅಗತ್ಯ

| Published : Feb 05 2024, 01:47 AM IST

ಸಾರಾಂಶ

ಚನ್ನಪಟ್ಟಣ: ನಿರ್ದಿಷ್ಟ ಗುರಿ ಹಾಗೂ ಉತ್ತಮ ಗುರು ಇದ್ದರೆ ಎಷ್ಟು ಕಠಿಣ ಸವಾಲು ಎದುರಾದರೂ ಸಾಧನೆ ಮಾಡಬಹುದು ಎಂದು ಡಾ. ಬಸವರಾಜು ಅಭಿಪ್ರಾಯಪಟ್ಟರು.

ಚನ್ನಪಟ್ಟಣ: ನಿರ್ದಿಷ್ಟ ಗುರಿ ಹಾಗೂ ಉತ್ತಮ ಗುರು ಇದ್ದರೆ ಎಷ್ಟು ಕಠಿಣ ಸವಾಲು ಎದುರಾದರೂ ಸಾಧನೆ ಮಾಡಬಹುದು ಎಂದು ಡಾ. ಬಸವರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಕೋಡಂಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾಲೇಜಿನ ೨೫ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ವರ್ಷಗಳ ಹಿಂದೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ನನಗೆ ಭವಿಷ್ಯವನ್ನು ನೀಡಿದ ಈ ನೆಲದಲ್ಲಿಯೇ ನಾನು ಮುಖ್ಯ ಅತಿಥಿಯಾಗಿ ಬಂದಿರುವುದು ನನ್ನ ಪುಣ್ಯ ಎಂದರು.

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವುದು ಅಗತ್ಯ. ವಿದ್ಯಾರ್ಥಿಗಳು ಪ್ರತಿನಿತ್ಯ ವಿ ವೇಳಾಪಟ್ಟಿಯನ್ನು ಹಾಕಿಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಬರೀ ಪರೀಕ್ಷೆ ದೃಷ್ಟಿಯಿಂದ ಪಾಠ ಕಲಿಯದೇ ಜ್ಞಾನ ವೃದ್ಧಿಗಾಗಿ ವಿದ್ಯಾಭ್ಯಾಸ ಮಾಡಬೇಕು. ಇಂದು ನೀವು ಪಡೆಯುವ ಜ್ಞಾನವೇ ಮುಂದೆ ನಿಮಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುತ್ತದೆ ಎಂದು ಕಿವಿಮಾತು ಹೇಳಿದರು.

ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿ ಮಾತನಾಡಿ, ಗುಣಮಟ್ಟದ ಶಿಕ್ಷಣ ದೊರೆಯುವ ನಿಜವಾದ ಗುರುಕುಲಗಳಿದ್ದರೆ ಅದು ಸರ್ಕಾರಿ ಶಾಲಾ ಕಾಲೇಜುಗಳು, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕವರ್ಗವಿದ್ದು, ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಬಹುತೇಕರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂಬುದನ್ನು ಪೋಷಕರು ಗಮನಿಸಬೇಕು ಎಂದು ತಿಳಿಸಿದರು.

ಸಾಂತ್ವನ ಮ್ಯೂಸಿಕ್ ಅಂಡ್ ಚಾರಿಟಬಲ್ ಫೌಂಡೇಷನ್‌ ಸಂಸ್ಥಾಪಕ ಅಧ್ಯಕ್ಷೆ ಡಾ. ಪವಿತ್ರಾ ಪ್ರಭಾಕರರಡ್ಡಿ ಮಾತನಾಡಿ, ಎಲ್ಲರಿಗೂ ಸರ್ಕಾರಿ ಕೆಲಸ ಬೇಕು, ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಹಿಂಜರಿಕೆ ಎಂಬಂತಾಗಿದೆ. ಈ ಪ್ರವೃತ್ತಿ ದೂರವಾಗಬೇಕು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಇಂದು ಮುಂಚೂಣಿಯಲ್ಲಿವೆ ಎಂದು ತಿಳಿಸಿದರು.

ಸಮಾಜ ಸೇವಕ ಪ್ರಸನ್ನಕೊಂಡಾಪುರ ಮಾತನಾಡಿ, ಹಣ, ಐಶ್ವರ್ಯ, ಸಂಪತ್ತುನ್ನು ಯಾರು ಬೇಕಾದರೂ ಕಳವು ಮಾಡಬಹುದು. ಆದರೆ ವಿದ್ಯಾ ಸಂಪತ್ತನ್ನು ಯಾರಿಂದಲೂ ಕಳವು ಮಾಡಲು ಸಾಧ್ಯವಿಲ್ಲ. ದೊರೆತ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸದಂತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬೈಕ್ ರ್‍ಯಾಲಿ ನಡೆಸಿ ಜಾಗೃತಿ ಮೂಡಿಸಿದ ರಾಮನಗರದ ಚಿತ್ರಾರಾವ್, ಸಾಂತ್ವನ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಗಾಯಕಿ ಡಾ.ಪವಿತ್ರ ಪ್ರಭಾಕರ ರೆಡ್ಡಿ, ಯೋಗದಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿರುವ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಶಿವಮಾದು, ಕಾಲೇಜು ಪ್ರಾಂಶುಪಾಲರಾದ ವೆಂಕಟಲಕ್ಷ್ಮಮ್ಮ, ಮುಖಂಡರಾದ ನಿಂಗರಾಜೇಗೌಡ, ಮಹಮ್ಮದ್ ಯೂನಿಸ್, ಬಾಬುರಾವ್ ಸಾಳಂಕಿ, ಮಂಗಾಡಿಹಳ್ಳಿ ರಾಜಣ್ಣ, ಕೆ.ಪಿ.ರಾಜಣ್ಣ, ಪಟೇಲ್ ಶ್ರೀನಿವಾಸ್, ಸಿದ್ದರಾಜು, ಕಾಲೇಜು ಪ್ರಭಾರ ಪ್ರಾಂಶುಪಾಲ ಸುರೇಶ್, ಇತಿಹಾಸ ಉಪನ್ಯಾಸಕರಾದ ಶಂಭೂಗೌಡ, ಲೋಕೇಶ್, ವೈ.ಟಿ.ಹಳ್ಳಿ ಶಿವು ಇತರರಿದ್ದರು.

ಪೊಟೋ೪ಸಿಪಿಟಿ2:

ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾಲೇಜಿನ ೨೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.