ಸಾರಾಂಶ
ರಬಕವಿ-ಬನಹಟ್ಟಿ : ಹುಟ್ಟಿದ ಪ್ರತಿಯೊಂದು ಮಗುವಿಗೂ 20 ಬೆರಳುಗಳಿರುವುದು ಸಾಮಾನ್ಯ. ಆದರೆ, 25 ಬೆರಳುಗಳಿರುವ ಗಂಡು ಮಗುವೊಂದು ಜನ್ಮತಾಳಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಸನ್‌ಶೈನ್ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ಭಾರತಿ ಎಂಬುವವರು ಜನ್ಮ ನೀಡಿದ ನವಜಾತ ಶಿಶುವಿನ ಬಲಗೈಯಲ್ಲಿ 6, ಎಡಗೈಯಲ್ಲಿ 7 ಮತ್ತು ಎರಡೂ ಕಾಲುಗಳಲ್ಲಿ ತಲಾ 6 ಬೆರಳುಗಳಿವೆ. ಇದರಿಂದ ಕುಟುಂಬಸ್ಥರು ಸಂತೋಷಪಟ್ಟಿದ್ದು, ಮಗುವನ್ನು ಕುಂದರಗಿಯ ಭುವನೇಶ್ವರಿ ದೇವಿ ಕೃಪೆಯೆಂದು ಹೇಳಿಕೊಂಡಿದ್ದಾರೆ. ಆದರೆ, ವೈದ್ಯರು ಅಪರೂಪದ ಕ್ರೋಮೋಸೋಮ್‌ನಿಂದ ೨೫ ಬೆರಳುಗಳು ಇವೆ ಎಂದು ಹೇಳಿದ್ದಾರೆ.
ನನ್ನ ಪತ್ನಿ ಪ್ರತಿ ವಾರ ಕುಂದರಗಿಯ ಭುವನೇಶ್ವರಿ ದೇವಿಗೆ ತೆರಳಿ ಮಕ್ಕಳಾಗುವಂತೆ ಬೇಡಿಕೊಂಡಿದ್ದಳು. ಬೇಡಿಕೆಯ 4ನೇ ವಾರದಲ್ಲಿಯೇ ಗರ್ಭಿಣಿಯಾಗುವ ಅವಕಾಶ ದೊರೆಯಿತು. ಅಂಬಲಿ ಪ್ರಸಾದದ ಮಹಿಮೆಯೆಂದು ಮಗುವಿನ ತಂದೆ ಗುರಪ್ಪ ‘ಕನ್ನಡಪ್ರಭ’ಕ್ಕೆ ಮಾಹಿತಿ ಹಂಚಿಕೊಂಡರು.
ಮಗು ಹೆರಿಗೆ ಮಾಡಿಸಿದ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ವೈದ್ಯರಾದ ಡಾ.ಪಾರ್ವತಿ ಹಿರೇಮಠ ಮಾತನಾಡಿ, ಅಪರೂಪದಲ್ಲಿ ಅಪರೂಪವಾಗಿ ಕ್ರೋಮೋಸೋಮ್‌ಗಳ ಅಸಮತೋಲನತೆಯಿಂದ ಇಂತಹ ಮಗುವಿನ ಜನನವಾಗುತ್ತದೆ. 25 ಬೆರಳುಗಳನ್ನು ಹೊಂದಿದ ಗಂಡು ಮಗುವಿನೊಂದಿಗೆ ತಾಯಿಯೂ ಕ್ಷೇಮವಾಗಿದ್ದಾಳೆಂದು ತಿಳಿಸಿದರು.