ಸಮಾಜಕ್ಕೆ ರಾಜಕೀಯ ತಳಕು ಹಾಕುವುದು ಸರಿಯಲ್ಲ

| Published : Mar 29 2025, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಒಂದು ರಾಷ್ಟ್ರೀಯ ಪಕ್ಷ ತೆಗೆದುಕೊಂಡಿರುವ ಶಾಸಕ ಯತ್ನಾಳ ಉಚ್ಛಾಟನೆ ನಿರ್ಧಾರವನ್ನು ಒಂದು ಸಮಾಜಕ್ಕೆ ಹಚ್ಚುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಒಂದು ರಾಷ್ಟ್ರೀಯ ಪಕ್ಷ ತೆಗೆದುಕೊಂಡಿರುವ ಶಾಸಕ ಯತ್ನಾಳ ಉಚ್ಛಾಟನೆ ನಿರ್ಧಾರವನ್ನು ಒಂದು ಸಮಾಜಕ್ಕೆ ಹಚ್ಚುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ ಹೇಳಿದರು.

ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ಅವರಲ್ಲಿ ಶಕ್ತಿ, ಸಾಮರ್ಥ್ಯವಿದ್ದು ಉಚ್ಛಾಟಿಸಿದ್ದನ್ನು ಅವರು ಸಮರ್ಥವಾಗಿ ಎದುರಿಸುತ್ತಾರೆ. ಅದನ್ನು ಸಮಾಜಕ್ಕೆ ತಳುಕು ಹಾಕಬಾರದು. ಯತ್ನಾಳ ವಿಚಾರದಲ್ಲಿ ಕಾರ್ಯಕರ್ತರು ಸರಿಯಾದ ಹೆಜ್ಜೆಯನ್ನಿಟ್ಟು ನಡೆದರೆ ಪಕ್ಷಕ್ಕೂ ಹಾಗೂ ಕಾರ್ಯಕರ್ತರಿಗೂ ಅನುಕೂಲ. ಕೆಲವರು ಪ್ರತಿಭಟನೆ ನಡೆಸಿ ಯಡಿಯೂರಪ್ಪನವರಿಗೆ ಅವಮಾನ ಮಾಡುವುದು ಸರಿಯಲ್ಲ. ಯತ್ನಾಳ ಅವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಿ ಎಂದು ಪ್ರತಿಭಟಿಸುವವರಿಗೆ ನೈತಿಕ ಹಕ್ಕಿಲ್ಲ. ಪಂಚಮಸಾಲಿ ಗುರುಗಳು ಹಾಗೂ ಅವರ ಜೊತೆಗಿರುವ ಸಮಾಜದ ನಾಯಕರು ಅವರಿಗೆ ತಿಳುವಳಿಕೆ ಹೇಳಬೇಕು. ಅದನ್ನು ಬಿಟ್ಟು ಯತ್ನಾಳ ಹೇಳಿದಂತೆ ಅವರ ಜೊತೆಗೆ ಉಧೋ ಉಧೋ ಎಂದು ಹೊರಟರೆ ಆಗುವುದಿಲ್ಲ. ರಾಜಕಾರಣದಲ್ಲಿ ಒಂದೇ ಸಮಾಜದಿಂದ ಚುನಾಯಿತರಾಗುವುದಿಲ್ಲ. ಯಡಿಯೂರಪ್ಪನವರು ಎಲ್ಲಾ ಸಮಾಜವನ್ನು ಹಿಡಿದುಕೊಂಡು ಹೋಗಿದ್ದಾರೆ. ಹಾಗಾಗಿಯೇ ಅವರು ಜಾತ್ಯಾತೀತ ನಾಯಕರೆನಿಸಿಕೊಂಡಿದ್ದಾರೆ ಎಂದು ಹೇಳಿದರು.

ಶಾಸಕ ಯತ್ನಾಳ ಉಚ್ಛಾಟನೆ ದುರದೃಷ್ಠಕರ, ಆಗಬಾರದಿತ್ತು ಎಂಬ ಭಾವನೆ ಕಾರ್ಯಕರ್ತರಲ್ಲಿದೆ. ಆದರೆ ಎಲ್ಲದಕ್ಕೂ ಮಿತಿ ಇರುತ್ತದೆ. ಮಿತಿ ದಾಟಿದಾಗ ಅನಿವಾರ್ಯವಾಗಿ ಪಕ್ಷದ ನಾಯಕರು ಕ್ರಮಕೈಗೊಂಡಿದ್ದಾರೆ. ಉಚ್ಛಾಟನೆ ಬಳಿಕ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಎಂದು ಮಾಡಿದ ಪ್ರತಿಭಟನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಿದ್ಧರಿಸಿ ಸಂಸ್ಥೆಯ ಹಾಗೂ ಅವರ ವಿವಿಧ ಸಂಸ್ಥೆಗಳ ನೌಕರರು. ಈ ರೀತಿಯ ಪ್ರತಿಭಟನೆ ಬದಲು ಆತ್ಮಾವಲೋಕನ ಮಾಡಿಕೊಂಡು ಹಿರಿಯರೊಂದಿಗೆ ಸಭೆ ಮಾಡಿಕೊಂಡು ಹೋದರೆ ಯತ್ನಾಳ ಅವರಿಗೆ ಭವಿಷ್ಯವಿದೆ. ಅವರು ಲಿಂಗಾಯತರಲ್ಲಾ, ಅವರು ಭ್ರಷ್ಟಾಚಾರಿಗಳು ಎಂದು ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಮಾತನಾಡುತ್ತ, ಟಾರ್ಗೆಟ್ ಮಾಡುತ್ತಿದ್ದರು. ಇಂತಹವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದರಿಂದ ಉಚ್ಛಾಟನೆ ಸ್ಥಿತಿಗೆ ಬಂದಿದೆ. ಅವರ ಜೊತೆ ಇರುವವರು ಅವರಿಗೆ ಪಾಸಿಟಿವ್ ಸಲಹೆ ಕೊಡಬೇಕಿತ್ತು, ಕೊಟ್ಟಿದ್ದರೆ ಇಂದು ಈ ಸ್ಥಿತಿ ಬರುತ್ತಿಲಿಲ್ಲ ಎಂದು ಅಭಿಪ್ರಾಯಪಟ್ಟರು.

ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ನಾಯಕರು ತಡವಾಗಿಯಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅದರಿಂದ ಕಾರ್ಯಕರ್ತರಿಗೆ ಸಂತಸವಾಗಿದೆ, ಉಚ್ಛಾಟಿಸಿದ ನಾಯಕರಿಗೆ ಅಭಿನಂದನೆಗಳು. ಬಿಜೆಪಿ ಶಿಸ್ತಿನ ಪಕ್ಷ. ಕೇಂದ್ರ ನಾಯಕರು ಅವರಿಗೆ ಕಳೆದ ಎರಡು ವರ್ಷಗಳಿಂದ ತಿದ್ದಿಕೊಳ್ಳಲು ಅವಕಾಶ ಕೊಟ್ಟರು, ಅವರು ಸುಧಾರಿಸಿಕೊಳ್ಳಲಿಲ್ಲ. ಅವರ ಜೊತೆಗಾರರಾದರೂ ಬಿಜೆಪಿ ಹಿಂದುತ್ವದ ಪಕ್ಷ. ನೀವು ಬಾಯಿಮುಚ್ಚಿಕೊಂಡಿರಿ ಎಂದು ಯತ್ನಾಳಗೆ ಸಲಹೆ ಕೊಡಬೇಕಿತ್ತು. ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ ಆದರೂ ಪಕ್ಷವನ್ನು ಹಾಳು ಮಾಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.ಸ್ವಂತ ಪಕ್ಷ ಕಟ್ಟಿ ತೋರಿಸಿ

ನೀವು ರಾಜ್ಯಮಟ್ಟದ ನಾಯಕರು, ಹಿಂದೂ ಫೈರ್‌ ಬ್ರ್ಯಾಂಡ್ ಎನ್ನುತ್ತೀರಿ. ಅಲ್ಲದೆ ರಾಜ್ಯದಲ್ಲಿ 140 ಸೀಟು ಗೆಲ್ಲಿಸುವ ತಾಕತ್ತು ಇದೆ ಎನ್ನುವವರು ಮತ್ಯಾಕೆ ಬಿಜೆಪಿಗೆ ಸೇರಿಸಿಕೊಳ್ಳಿ ಎನ್ನುತ್ತಿದ್ದಿರಿ?. ನೀವೇ ಬೇರೆ ಪಕ್ಷ ಕಟ್ಟಿ 140 ಸೀಟು ತಂದು ನಿಮ್ಮ ತಾಕತ್ತನ್ನು ಬಿಜೆಪಿಗೆ ಹಾಗೂ ಬೇರೆ ಪಕ್ಷಗಳಿಗೂ ತೋರಿಸಿ ಗೌಡರೇ ಎಂದು ಗೋಪಾಲ ಘಟಕಾಂಬಳೆ ಸವಾಲು ಹಾಕಿದರು.ಕೋಟ್‌ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಳಗಾವಿಯಲ್ಲಿ ಸಭೆ ಮಾಡಿ ಏಪ್ರಿಲ್ 10ರೊಳಗೆ ಉಚ್ಛಾಟನೆ ಹಿಂಪಡೆಯದಿದ್ದರೆ 13ಕ್ಕೆ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಪಕ್ಷದಲ್ಲಿನ ಪಂಚಮಸಾಲಿ ಪದಾಧಿಕಾರಿಗಳು ಪಕ್ಷ ಬಿಟ್ಟು ಬರಬೇಕು ಎಂದು ಕರೆ ನೀಡಿದ್ದಾರೆ. ಹೀಗೆ ಹೇಳಿದರೆ ಯಾರೂ ಬರುವುದಿಲ್ಲ, ಸ್ವಾಮೀಜಿಗಳು ರಾಜಕೀಯವಾಗಿ ಮಾತನಾಡಬಾರದು, ಶ್ರೀಗಳು ಗೌರವ ಬರುವಂತಹ ಕರೆ ಕೊಡಬೇಕು. ಓರ್ವ ವ್ಯಕ್ತಿ ಪರವಾಗಿ ಶ್ರೀ ಮಾತನಾಡುವುದು ಸೂಕ್ತವಲ್ಲ.ಸುರೇಶ ಬಿರಾದಾರ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ