ಸಾರಾಂಶ
ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ. ಆದರೆ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ಸಮರ್ಥಿಸಿಕೊಂಡಿದ್ದಾರೆ.
ಬಳ್ಳಾರಿ: ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ. ಆದರೆ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ಸಮರ್ಥಿಸಿಕೊಂಡಿದ್ದಾರೆ.
ನಾಸಿರ್ ಹುಸೇನ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದರಿಂದ ಬಿಜೆಪಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದಾರೆ ಎಂಬುದು ನೂರಕ್ಕೆ ನೂರರಷ್ಟು ಸುಳ್ಳು. ವೀಡಿಯೋವನ್ನು ಎಡಿಟ್ ಮಾಡಿ ಬಿಡಲಾಗಿದೆ. ಎಫ್‌ಎಸ್‌ಎಲ್ ವರದಿ ಸಹ ಇನ್ನೂ ಬಂದಿಲ್ಲ ಎಂದರು.ವರದಿ ಬರುವ ಮುನ್ನ ಕೆಲವರನ್ನು ಬಂಧಿಸಿದ್ದು ಏಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಂದ್ರ, ಕೆಲವು ಪ್ರಮುಖ ಘಟನೆಗಳು ನಡೆದಾಗ ಬಂಧನ ಮಾಡುವುದು ಸಹಜ. ಕೆಲವೊಮ್ಮೆ ಮುಗ್ಧರನ್ನು ಬಂಧಿಸಲಾಗುತ್ತದೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ. ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಲಾಗಿದೆ. ಕರ್ನಾಟಕದವರು ಯಾರೂ ಪಾಕಿಸ್ತಾನ ಪರ ಘೋಷಣೆ ಕೂಗುವುದಿಲ್ಲ. ಯಾರಾದರೂ ಆ ರೀತಿಯಾಗಿ ಕೂಗಿದ್ದರೆ ಗಲ್ಲಿಗೇರಿಸಿದರೂ ತಪ್ಪೇನಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಭಾಷಣ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಹೇಳಿರುವ ಬಗ್ಗೆ ನನಗೆ ಗೊತ್ತಿಲ್ಲ. ಬಾಯಿ ತಪ್ಪಿನಿಂದ ಹೇಳಿರಬಹುದು. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬುದು ಬಹಳಷ್ಟು ಜನರ ಬಯಕೆಯಿದೆ. ಅದರಲ್ಲಿ ತಪ್ಪೇನಿಲ್ಲ. ಮಂತ್ರಿಯಾದವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇರುವುದು ಸಾಮಾನ್ಯ. ಡಿ.ಕೆ. ಶಿವಕುಮಾರ್ ಸಹ ಸಮರ್ಥ ನಾಯಕರಾಗಿದ್ದು, ಸಿಎಂ ಆಗುವ ಎಲ್ಲ ಅರ್ಹತೆಯೂ ಇದೆ. ಆದರೆ, ಎಲ್ಲವನ್ನೂ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಸದ್ಯಕ್ಕೆ ಎಲ್ಲೂ ಸಿಎಂ ಬದಲಾವಣೆ ಕುರಿತು ಚರ್ಚೆಯಾಗಿಲ್ಲ ಎಂದು ಸಚಿವ ನಾಗೇಂದ್ರ ಹೇಳಿದರು.