ಸಾರಾಂಶ
ಪ್ಲಾಸ್ಟಿಕ್ ಒಂದು ಪರಿಸರದಲ್ಲಿ ವಿಘಟನೆಯಾಗದ ವಸ್ತುವಾಗಿದ್ದು, ಸಾವಿರಾರು ವರ್ಷಗಳು ಭೂಮಿಯಲ್ಲಿ ಉಳಿದು ಮಾಲಿನ್ಯಕಾರಕವಾಗಿ ಅನೇಕ ಕಾಯಿಲೆಗಳಿಗೆ ಕಾರಣವಾಗಿದೆ. ವಿಶ್ವ ವನ್ಯಜೀವಿ ನಿಧಿಯ ಹೊಸ ವರದಿಯ ಪ್ರಕಾರ ಪಳೆಯುಳಿಕೆ ಇಂಧನದಿಂದ ಪಡೆದ ವಸ್ತು ಸಮುದ್ರದ ಪ್ರತಿಯೊಂದು ಭಾಗವನ್ನೂ ತಲುಪಿದೆ, ಭೂಮಿಯ ಮೇಲ್ಮೈಯನ್ನು ಆವರಿಸಿದೆ, ಇದರಿಂದ ನಮ್ಮ ಜಲ, ನೆಲ, ಮಣ್ಣು ಎಲ್ಲವೂ ಪ್ಲಾಸ್ಟಿಕ್ ಮಯವಾಗಿದೆ.
ಚಿಂತಾಮಣಿ: ಕೇಂದ್ರ ಸರ್ಕಾರದ ಪರಿಸರ ,ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಪ್ಲಾಸ್ಟಿಕ್ ನಿಷೇಧದ ಉಸ್ತುವಾರಿ ವಹಿಸಿದ್ದು, ೨೦೨೧ರ ಪ್ಲಾಸ್ಟಿಕ್ ತ್ಯಾಜ್ಯ ನಿಯಮಗಳ ಪ್ರಕಾರ ೭೫ ಮೈಕ್ರೋನ್ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧಿಸಲಾಗಿದೆ, ೨೦೨೨ರ ಜುಲೈನಿಂದ ೧೯ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧವಿರುವ ಆದೇಶ ಹೊರಡಿಸಲಾಗಿದೆಯೆಂದು ಆರ್.ಕೆ.ವಿಷನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಆರ್.ಪ್ರೇಮಲತಾ ತಿಳಿಸಿದ್ದಾರೆ.
ನಗರದ ಆರ್.ಕೆ. ವಿಷನ್ ಶಾಲೆಯಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಏಕ ಬಳಕೆ ಪ್ಲಾಸ್ಟಿಕ್ ಬ್ಯಾಗ್ ನಿಷೇಧದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಎಳನೀರು ಕುಡಿಯುವ ಪೈಪ್, ಕಿವಿಯಲ್ಲಿ ಗೂಳು ತೆಗೆಯುವ ಕಡ್ಡಿ, ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಉತ್ಪಾದನೆ ಆಮದು, ದಾಸ್ತಾನು, ವಿತರಣೆ , ಮಾರಾಟ ಹಾಗೂ ಎಲ್ಲ ರೀತಿಯ ಬಳಕೆಯನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ೫ ವರ್ಷ ಜೈಲು ಶಿಕ್ಷೆ ಹಾಗೂ ೧ ಲಕ್ಷ ರು. ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.ಪ್ಲಾಸ್ಟಿಕ್ ನಿಷೇದ ಏಕೆ?:
ಪ್ಲಾಸ್ಟಿಕ್ ಒಂದು ಪರಿಸರದಲ್ಲಿ ವಿಘಟನೆಯಾಗದ ವಸ್ತುವಾಗಿದ್ದು, ಸಾವಿರಾರು ವರ್ಷಗಳು ಭೂಮಿಯಲ್ಲಿ ಉಳಿದು ಮಾಲಿನ್ಯಕಾರಕವಾಗಿ ಅನೇಕ ಕಾಯಿಲೆಗಳಿಗೆ ಕಾರಣವಾಗಿದೆ. ವಿಶ್ವ ವನ್ಯಜೀವಿ ನಿಧಿಯ ಹೊಸ ವರದಿಯ ಪ್ರಕಾರ ಪಳೆಯುಳಿಕೆ ಇಂಧನದಿಂದ ಪಡೆದ ವಸ್ತು ಸಮುದ್ರದ ಪ್ರತಿಯೊಂದು ಭಾಗವನ್ನೂ ತಲುಪಿದೆ, ಭೂಮಿಯ ಮೇಲ್ಮೈಯನ್ನು ಆವರಿಸಿದೆ, ಇದರಿಂದ ನಮ್ಮ ಜಲ, ನೆಲ, ಮಣ್ಣು ಎಲ್ಲವೂ ಪ್ಲಾಸ್ಟಿಕ್ ಮಯವಾಗಿದೆ ಎಂದು ತಿಳಿಸಿದರು.ಪರಿಸರ ಸಂರಕ್ಷಣೆ ಮನೆಯಿಂದಲೇ ಶುರುವಾಗಲಿ, ಮುಂದಿನ ಪೀಳಿಗೆಗೆ ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವುದು ಮೂಲ ಕರ್ತವ್ಯವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಜಿ.ವಿ.ಕೆ.ರೆಡ್ಡಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.