ಹಾವೇರಿ: ನಾಡಿನಲ್ಲಿ ಮಠಮಾನ್ಯಗಳು ಅನ್ನ, ಅರಿವು, ಆಶ್ರಯ ನೀಡಿ ಸಮಾಜೋಧಾರ್ಮಿಕ ಕಾರ್ಯದ ಮೂಲಕ ಸಾಮಾಜಿಕ ಅರಿವು ಮೂಡಿಸಿದರೆ, ಅದರ ನೇತೃತ್ವ ವಹಿಸಿದ್ದ ಸಂತ, ಮಹಾತ್ಮರು ಭಕ್ತಿ, ಜ್ಞಾನ, ವೈರಾಗ್ಯದ ಮೂಲಕ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಕಾರಣೀಕರ್ತರಾಗಿದ್ದಾರೆ. ಅಂತಹವರನ್ನು ಗುರುತಿಸಿ ಗೌರವಿಸುವುದು ಸಮುದಾಯದ ಬಹುಮುಖ್ಯ ಕರ್ತವ್ಯವಾಗಿದೆ. ಅಂತಹ ಕಾರ್ಯವನ್ನು ಹಾವೇರಿ ವಿವಿ ಮಾಡಿದೆ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.ನಗರದ ದಿ. ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿ ಕಲಾವಿದರ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಹುಕ್ಕೇರಿಮಠದ ಸದಾಶಿವ ಶ್ರೀಗಳ ಮತ್ತು ಸಾಹಿತಿ ಸತೀಶ ಕುಲಕರ್ಣಿ ಅವರ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಾವೇರಿಯ ಹುಕ್ಕೇರಿಮಠವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಬಸವಾದಿ ಶಿವಶರಣರ ಕಾಯಕ, ದಾಸೋಹ ಪರಂಪರೆಯು ಈ ಮಠದಲ್ಲಿ ನಡೆಯುತ್ತಿದ್ದು, ಇದರ ನೇತೃತ್ವ ವಹಿಸಿದ ಸದಾಶಿವ ಸ್ವಾಮೀಜಿಗೆ ಹಾವೇರಿ ವಿವಿಯು ಗೌರವ ಡಾಕ್ಟರೇಟ್ ನೀಡಿದ್ದು ಅಭಿನಂದನೀಯ ಎಂದರು.ಹಾವೇರಿಯ ನೆಲದ ಸಾಹಿತ್ಯದ ಆಸ್ಮಿತೆಯಾಗಿರುವ ಸತೀಶ ಕುಲಕರ್ಣಿಯು ಬಂಡಾಯದ ಪ್ರತಿಭೆಯಾಗಿದ್ದು, ತಾನು ಬೆಳೆಯುವುದರ ಜೊತೆಗೆ ತನ್ನೊಂದಿಗೆ ಹಲವಾರು ಸಾಹಿತಿ ಕಲಾವಿದರನ್ನು ಬೆಳೆಸಿದ್ದು ಅವರ ಹೆಗ್ಗಳಿಕೆಯಾಗಿದೆ. ಅವರನ್ನು ವಿ.ವಿ. ಗೌರವಿಸಿದ್ದು, ಸಂತಸದ ಸಂಗತಿಯಾಗಿದೆ. ಸತೀಶ ಕುಲಕರ್ಣಿ ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲಿ ಎಂದು ಹಾರೈಸಿದರು.ಹಾವೇರಿ ವಿವಿ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಯಶಸ್ವಿಯಾಗಿದ್ದು, ಸಿಂಡಿಕೇಟ್ ಸಭೆಯಲ್ಲಿ ಯಾವುದೇ ಪ್ರತಿರೋಧ ಇಲ್ಲದೆ ಸರ್ವಾನುಮತದಿಂದ ಗೌರವ ಡಾಕ್ಟರೇಟ್ ಪಡೆಯುವ ಹೆಸರುಗಳು ಅಂಗೀಕಾರವಾದವು. ನಾಗರೀಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿವಿಯ ಘನತೆಯನ್ನು ಹೆಚ್ಚಿಸಿದೆ ಎಂದರು.ಗೌರವ ಸನ್ಮಾನ ಪಡೆದ ಸದಾಶಿವ ಶ್ರೀಗಳು ಮತ್ತು ಸತೀಶ ಕುಲಕರ್ಣಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ. ಲಿಂಗಯ್ಯ ವಹಿಸಿದ್ದರು.ಹಿರಿಯ ಸಾಹಿತಿ ವಿರುಪಾಕ್ಷಪ್ಪ ಕೋರಗಲ್ಲ, ಅಮೃತಮ್ಮ ಶೀಲವಂತರ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಕೆ.ಎಚ್. ಮುಕ್ಕಣ್ಣನವರ, ಶಂಕರ ಸುತಾರ, ಎಸ್.ಎನ್. ದೊಡ್ಡಗೌಡರ, ಮುರುಗೆಪ್ಪ ಶೆಟ್ಟರ, ನಾಗರಾಜ ವಿಭೂತಿ, ಸಿ.ಎಸ್. ಮರಳಿಹಳ್ಳಿ, ದೀಪಾ ಗೋನಾಳ, ಭಾರತಿ ಯಾವಗಲ್ಲ, ಪರಶುರಾಮ ಕರ್ಜಗಿ ಇತರರು ಇದ್ದರು.ಎಸ್.ಆರ್. ಹಿರೇಮಠ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವಿರಾಜ ಬೆಟಗೇರಿ ನಿರೂಪಿಸಿದರು. ಬಿ.ಎಂ. ಜಗಾಪುರ ವಂದಿಸಿದರು.