ಕನಕಪುರ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 24ನೇ ಮಹಾರಾಜರಾಗಿ ಹತ್ತನೇ ವಯಸ್ಸಿಗೆ ಪಟ್ಟಾಭಿಷಿಕ್ತರಾದವರು. ಅನೇಕ ಶಾಶ್ವತ ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಉಳಿದ ಮಹನೀಯರು ಎಂದು ಮುಖ್ಯ ಶಿಕ್ಷಕಿ ಕೆ.ಎನ್.ಸುನೀತಾ ಹೇಳಿದರು.
ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇಂತಹ ಮಹನೀಯರನ್ನು ಪ್ರತಿ ದಿನವೂ ವಿದ್ಯಾರ್ಥಿಗಳು ಸ್ಮರಿಸಿಕೊಳ್ಳಬೇಕು. ಮಹನೀಯರ ಹಾಗೆ ನಿಮ್ಮ ಜೀವನದಲ್ಲಿ ಸಾಧನೆ ಮಾಡುವ ತುಡಿತ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕಬ್ಬಾಳೇಗೌಡ ಮಾತನಾಡಿ, ಮಹಿಳೆಯರ ಸಬಲೀಕರಣ, ವಿದ್ಯಾಭ್ಯಾಸ, ಶಿಕ್ಷಣ, ಕೃಷಿ, ಕೈಗಾರಿಕಾ ಕ್ಷೇತ್ರಕ್ಕೆ ಅಪಾರ ಉತ್ತೇಜನ ನೀಡಿದ ನಾಲ್ವಡಿ ಮಹಾರಾಜರು, ರಾಜ್ಯದಲ್ಲಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಸಾಧನೆಗಳನ್ನು ಮಾಡಿದರು. ಅವರು ನೀಡಿದ ಕೊಡುಗೆಗಳಿಗೆ ಅವರ ಹೆಸರುಗಳನ್ನು ಇಟ್ಟುಕೊಂಡಿಲ್ಲ. ಯೋಗ್ಯತೆ ಇದ್ದರೆ ಯೋಗ ತಾನಾಗಿಯೇ ಬರಲಿದೆ ಎಂದು ಬದುಕಿದವರು. ಕನ್ನಡನಾಡು ಮಾತ್ರವಲ್ಲದೆ ದೇಶದಲ್ಲಿ ಅವರ ಹೆಸರು ಅಜರಾಮರವಾಗಿದೆ ಎಂದು ಹೇಳಿದರು.ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಸಿ.ಎಸ್.ರಾಜು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನದ ಅಭಿವೃದ್ಧಿಯ ಹರಿಕಾರರೆಂದೇ ಪ್ರಸಿದ್ಧರು. ಅವರ ಸಾಧನೆಗಳು ಮತ್ತು ಕೊಡುಗೆಗಳು ಇಂದಿಗೂ ಜೀವಂತ ಸಾಕ್ಷಿಯಾಗಿವೆ. ನಾಲ್ವಡಿ ಮಹಾರಾಜರ ಆಡಳಿತಾವಧಿ(1902-1940) ಮೈಸೂರು ಇತಿಹಾಸದ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಏಷ್ಯಾದ ಮೊದಲ ಶಿವನಸಮುದ್ರ ಜಲವಿದ್ಯುತ್ ಯೋಜನೆ ಮತ್ತು ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISC)ಸ್ಥಾಪನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಹಾಗೂ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಗಳನ್ನು ಆರಂಭಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಭಾರತದ ಮೊದಲ ಸಂಸ್ಥಾನ ಮೈಸೂರು ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು.
ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕದ ಪ್ರತಿಯೊಬ್ಬ ರೈತರು ಸುಮಾರು 20ರಿಂದ 30 ಎಕರೆ ಜಮೀನು ಹೊಂದಿದ್ದಾರೆ. ರೈತರು ಅಭಿವೃದ್ಧಿ ಕಾಣಲು ಆಗುತ್ತಿಲ್ಲ, ಮೈಸೂರು ಭಾಗದ ರೈತರು ಅರ್ಧ ಎಕರೆ ಒಂದು ಎಕರೆ ಜಮೀನಿದ್ದರು ಸದೃಢರಾಗಿದ್ದಾರೆ. ಕಾರಣ ನಾಲ್ವಡಿಯವರು ನೀರಾವರಿ ಕ್ಷೇತ್ರಕ್ಕೆ ಕೊಟ್ಟ ದೊಡ್ಡ ಕೊಡುಗೆ ಎಂದು ಹೇಳಿದರು.ಜಯಕರ್ನಾಟಕ ಸಂಘಟನೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ನಾಲ್ವಡಿಯವರ ಕೊಡುಗೆ ದೇಶಕ್ಕೆ ಮಾದರಿಯಾಗಿದೆ. ಅವರ ದೂರದೃಷ್ಟಿಯಿಂದ ಮಂಡ್ಯದ ಜನತೆ ಹಾಗೂ ಬೆಂಗಳೂರಿನ ಜನರ ನೆಮ್ಮದಿಯ ಬದುಕಿಗೆ ಸಾಧ್ಯವಾಗಿದೆ. ನಮ್ಮದೇ ಕ್ಷೇತ್ರದ ಶಾಸಕರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕಾವೇರಿ ನೀರಿನ ಯೋಜನೆಯಿಂದ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ. ಕಾವೇರಿ ನದಿ ಮೇಕೆದಾಟು ನಿಮ್ಮ ಕನಸಿನ ಯೋಜನೆಯಾಗಿದೆ. ತಾವು ಮುಖ್ಯಮಂತ್ರಿಗಳಾಗಿದ್ದೀರಿ. ನಿಮ್ಮ ಅವಧಿಯಲ್ಲಿಯೇ ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ನಾಲ್ವಡಿಯವರು ಅನ್ನದಾತರು. ಅವರ ಜನ್ಮ ದಿನವನ್ನು ಸ್ಮರಣೀಯವಾಗಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮಹನೀಯರ ಕಾರ್ಯಕ್ರಮ ಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಸಿ.ವೆಂಕಟೇಶ, ಪತ್ರಕರ್ತ ಎಂ.ಎನ್. ಸುರೇಶ್, ಶಾಲಾ ಶಿಕ್ಷಕ-ಶಿಕ್ಷಕಿಯರು, ಆಡಳಿತ ಮಂಡಳಿ ಸಿಬ್ಬಂದಿ ಮೊದಲಾದವರು ಪಾಲ್ಗೊಂಡಿದ್ದರು.
(ಫೋಟೊ ಕ್ಯಾಪ್ಷನ್)ಕನಕಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಕೆ.ಎನ್.ಸುನೀತಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಸಿ.ವೆಂಕಟೇಶ, ಪತ್ರಕರ್ತ ಎಂ.ಎನ್. ಸುರೇಶ್ ಇತರರು ಪಾಲ್ಗೊಂಡಿದ್ದರು.