ಸಾರಾಂಶ
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವುದು ಕನ್ನಡಕ್ಕಿರುವ ತಾಕತ್ತು. ಕನ್ನಡದ ಕಲೆ, ಸಾಹಿತ್ಯ, ಸಂಗೀತ ಇಂಥಹ ತಾಂತ್ರಿಕ ಕಾಲೇಜಿನಲ್ಲೂ ಸಾಕಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಶುಕ್ರವಾರ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಎಸ್.ಟಿ.ಎನ್ ಬಯಲು ರಂಗಮಂದಿರದಲ್ಲಿ ನಡೆದ ಸುವರ್ಣ ಕರ್ನಾಟಕ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿ ಸಂರಕ್ಷಣೆಗೆ ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೇಕು. ಇಂಥಹ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಪ್ರತಿ ವರ್ಷ ಆಚರಿಸಬೇಕು ಎಂದು ತಿಳಿಸಿದರು.ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಕನ್ನಡದ ಕೆಲಸ ಬರೀ ವಿಲಾಸವಾಗದೆ ವಿಕಾಸವಾಗಬೇಕು. ಕನ್ನಡ ಕಟ್ಟುವ ಕೆಲಸ ಬರೀ ಕವಿಗಳ ಮತ್ತು ಸಾಹಿತಿಗಳ ಕೆಲಸವಾಗದೆ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ತಂತ್ರಜ್ಞರ ಕೆಲಸ. ಕನ್ನಡ ನಾಡಿನ ಯುವಕರಾದ ನೀವು ಕನ್ನಡದ ಕೆಲಸದಲ್ಲಿ ದೇವಮಾನವರಾಗಬೇಕು. ಭೌತಿಕವಾದ, ಪುರಾತನವಾದ ಕನ್ನಡ ಭಾಷೆ ಬಳಸಿದಂತೆ ಬೆಳೆಯುತ್ತದೆ. ತಾಳ್ಮೆ. ಸಂಯಮ ತಾಕತ್ತುಗಳಿರಬೇಕು ಎಂದು ಹೇಳಿದರು.
ಎಐಟಿ ನಿರ್ದೇಶಕ ಮತ್ತು ಅದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ ಮಾತನಾಡಿ, ಇದು ವಿದ್ಯಾರ್ಥಿಗಳಿಗಾಗಿ ಅಯೋಜನೆ ಮಾಡಿದ ಕಾರ್ಯಕ್ರಮ. ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿವೆ, ಆದರೆ, ಆ ಪ್ರತಿಭೆಗಳಿಗೆ ಬೇಕಾಗಿರುವುದು ಆತ್ಮವಿಶ್ವಾಸ ಮಾತ್ರ. ವಿದ್ಯಾರ್ಥಿಗಳೆ ನಿಮ್ಮ ಕನಸುಗಳನ್ನು ನಾವು ಸಾಕಾರಗೊಳಿಸುತ್ತೇವೆ. ಜೀವನದಲ್ಲಿ ಶಿಸ್ತು ಅತಿ ಮುಖ್ಯ, ಗುರಿ ತಲುಪುವುದು ಕಷ್ಟಕರವಲ್ಲ ಎಂದರು.ಕನ್ನಡ ಭಾಷೆ ನೆಲ, ಜಲ ಅಭಿಮಾನ ಮತ್ತು ಸಂಭ್ರಮದ ಜೊತೆ ಜೊತೆಗೆ ಉತ್ಸಾಹ, ಕ್ರೀಯಾತ್ಮಕತೆ ಮತ್ತು ಅಂತ ರಂಗದ ಶಕ್ತಿ ಯಾವಾಗಲು ಹೆಚ್ಚಿರಬೇಕು. ನಮ್ಮನ್ನು ಹೆತ್ತು, ಹೊತ್ತು ಸಾಕಿದ ತಾಯಿ, ನಂತರ ಈ ಮಣ್ಣು ಅಂದರೆ ಕನ್ನಡ ತಾಯಿಯನ್ನು ನಾವುಗಳು ಗೌರವಿಸಬೇಕು. ನಾವುಗಳು ಪರಭಾಷೆಯನ್ನು ಪ್ರೀತಿಸುತ್ತೆವೆ, ಆದರೆ ನಮ್ಮ ಕನ್ನಡ ಭಾಷೆಗೆ ಮಾತ್ರ ಮೊದಲ ಆದ್ಯತೆ ನೀಡುತ್ತೇವೆ. ಅಲ್ಪ ಮಾನವನನ್ನು ವಿಶ್ವಮಾನವನನ್ನಾಗಿಸುವುದೇ ನಮ್ಮ ಧ್ಯೇಯ. ವಿದ್ಯಾರ್ಥಿ ಗಳ ಬೆಳವಣಿಗೆಗಳಲ್ಲಿ ತಂದೆ ತಾಯಿ, ಗುರುಗಳು ಮತ್ತು ವಿದ್ಯಾ ಸಂಸ್ಥೆಯ ಪಾತ್ರ ಬಹಳ ಮುಖ್ಯವಾಗಿರುತ್ತದೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ ಮಾತನಾಡಿ, ಕನ್ನಡದ ಸಂಸ್ಕೃತಿ ಎಂದರೆ ಕನ್ನಡದ ಮನಸ್ಸುಗಳು ಎಂದರ್ಥ. ತಾಂತ್ರಿಕ ವಿದ್ಯಾರ್ಥಿಗಳಾದ ತಾವು ಕನ್ನಡದ ಭಾವವನ್ನು ಅರ್ಥಮಾಡಿಕೊಂಡರೆ ಮನಸ್ಸು ಉಲ್ಲಾಸ ಗೊಳ್ಳುತ್ತದೆ. ಕನ್ನಡದ ಹೆಗ್ಗಳಿಕೆ ಗೊತ್ತಾಗಬೇಕಾದರೆ ಕನ್ನಡದ ಸೇವೆ ಅತ್ಯಾವಶ್ಯಕ. ಜಗತ್ತಿನ ಭಾಷೆಗಳಲ್ಲಿ ಕನ್ನಡಕ್ಕೆ ಅತ್ಯಮೂಲ್ಯ ಸ್ಥಾನವಿದೆ ಎಂದರು.ಸುವರ್ಣ ಕರ್ನಾಟಕ ಸಂಭ್ರಮ -2023 ರ ನೆನಪಿಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಇನ್ನು ಮುಂದೆ ನಿತ್ಯೋತ್ಸವವಾಗುತ್ತದೆ. ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಮತ್ತು ಪ್ರತಿಯೊಬ್ಬರಿಗೂ ಕಲಿಸಬೇಕು. ಕನ್ನಡ ತಾಯಿಯ ರಥವನ್ನು ಎಳೆಯಬೇಕು. ಕನ್ನಡ ಪುಸ್ತಕ ಓದಬೇಕು, ಕನ್ನಡ ಬರೆಯಬೇಕು. ಬಹಳಷ್ಟು ಕವಿಗಳು, ವಿದ್ವಾಂಸರು, ಸಾಹಿತಿಗಳು, ಸಾಧಕರು ಈ ಕನ್ನಡದ ನೆಲದಲ್ಲಿ ಹುಟ್ಟಿದ್ದು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಎಐಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ಚಿನ್ಮಯಿ ಭಟ್ ಮಾತನಾಡಿ, ಈ ಹಿಂದೆ ನಾನು ಈ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯ ರಿಂಗ್ ಪದವಿಗಳಿಸಿದ್ದು ಸಾರ್ಥಕವಾಗಿದೆ. ಕಾರಣ ನನ್ನ ಅಭ್ಯಾಸದ ಸಮಯದಲ್ಲಿ ಹೆಚ್ಚು ಹೆಚ್ಚು ಕನ್ನಡದ ಬರವಣಿಗೆ ಗಳನ್ನು ಮಾಡಿ ಸೇವೆಗೈದಿದ್ದು ಸಾರ್ಥಕವಾಗಿದೆ. ಕನ್ನಡದ ಅಭಿಮಾನಿಗಳಿಗೆ ಈ ಮಣ್ಣಿನ ಸೊಗಡನ್ನು ಕ್ರಿಯಾತ್ಮಕವಾಗಿ ಪರಿಚಯಿಸಲು ಮತ್ತು ಸಮಾಜವನ್ನು ಬದಲಾಯಿಸುವ ಶಕ್ತಿ ಇರುವುದು ಸಾಮಾಜಿಕ ಜಾಲತಾಣಕ್ಕೆ ಮಾತ್ರ. ಹಾಗಾಗಿ ತಾವುಗಳೆಲ್ಲರೂ ಸಹಾ ಕನ್ನಡದ ಕಥೆ, ಕವನ ಮತ್ತು ಪದಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಬರುವಂತೆ ನೋಡಿಕೊಂಡು ಕನ್ನಡದ ಸೇವೆಗೈಯಬೇಕು. ತಿಂಗಳಿಗೊಂದು ಪುಸ್ತಕ ಓದಬೇಕು ಎಂದು ಕರೆ ನೀಡಿದರು.ವಿದ್ಯಾರ್ಥಿನಿ ವೈಷ್ಣವಿ ಪುರಾಣಿಕ್ ಮತ್ತು ಮೋನಿಷಾ ಪ್ರಾರ್ಥಿಸಿದರು. ಕೆ. ಪ್ರಣತಿ ಸ್ವಾಗತಿಸಿದರು, ವಿಷ್ಮಿಥ ವಂದಿಸಿದರು.
24 ಕೆಸಿಕೆಎಂ 3ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಬಯಲು ರಂಗಮಂದಿರದಲ್ಲಿ ಶುಕ್ರವಾರ ನಡೆದ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮವನ್ನು ಸೂರಿ ಶ್ರೀನಿವಾಸ್ ಉದ್ಘಾಟಿಸಿದರು.