ಶಿಸ್ತು, ಸಂಸ್ಕಾರದಿಂದ ಉತ್ತಮ ಶಿಕ್ಷಕರಾಗಲು ಸಾಧ್ಯ: ​ಡಾ.ಡಿ.ನಾಗರಾಜ್

| Published : Dec 26 2023, 01:30 AM IST

ಶಿಸ್ತು, ಸಂಸ್ಕಾರದಿಂದ ಉತ್ತಮ ಶಿಕ್ಷಕರಾಗಲು ಸಾಧ್ಯ: ​ಡಾ.ಡಿ.ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕನಾಗುವವನು ಜ್ಞಾನದ ಹಸಿವಿರಬೇಕು. ಹೇಗೆ ಉತ್ತಮ ಬೋಧಕನಾಗಬೇಕು ಎಂಬ ತುಡಿತ ಸದಾಇರಬೇಕು. ಮಲ್ಲಾಡಿಹಳ್ಳಿ ಶ್ರೀಗಳು ವಿದ್ಯೆಯ ಜೊತೆಯಲ್ಲಿ ನೈತಿಕತೆಯನ್ನು ಕಲಿಸಿದ್ದರಿಂದ ಅಂದು ಕಲಿತ ವಿದ್ಯಾರ್ಥಿಗಳು ಇಂದು ಯಾವುದೇ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿ ಉತ್ತಮ ನಾಗರೀಕರಾಗಿ ಜೀವನ ಮಾಡುತ್ತಿರುವುದು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆಶಿಸ್ತು ಮತ್ತು ಸಂಸ್ಕಾರದಿಂದ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಸರ್ಕಾರಿ ವಿಜ್ಞಾನ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಡಿ.ನಾಗರಾಜ್ ತಿಳಿಸಿದರು.

ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಬಿಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂದು ಜ್ಞಾನದ ಜೊತೆಗೆ ಶಿಸ್ತು ಮತ್ತು ಸಂಸ್ಕಾರ ಕಲಿಯುವುದು ಅಗತ್ಯವಿದೆ. ಅದರಿಂದ ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಲಿಕ್ಕೆ ಸಾಧ್ಯವಾಗುತ್ತದೆ ಎಂದರು. ಮಲ್ಲಾಡಿಹಳ್ಳಿ ಶ್ರೀಗಳು ವಿದ್ಯೆಯ ಜೊತೆಯಲ್ಲಿ ನೈತಿಕತೆಯನ್ನು ಕಲಿಸಿದ್ದರಿಂದ ಅಂದು ಕಲಿತ ವಿದ್ಯಾರ್ಥಿಗಳು ಇಂದು ಯಾವುದೇ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿ ಉತ್ತಮ ನಾಗರೀಕರಾಗಿ ಜೀವನ ಮಾಡುತ್ತಿರುವುದು ನಮ್ಮೆಲ್ಲರ ಕಣ್ಣೆದುರು ಕಾಣುತ್ತಿದೆ. ಆದ್ದರಿಂದ ಇಂದು ಅವರೇ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ ನೀವುಗಳೆಲ್ಲರು ಕಲಿಯುತ್ತಿರುವುದೇ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಚಿತ್ರದುರ್ಗ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕ ಪ್ರೊ.ಎನ್.ರಾಘವೇಂದ್ರ ಮಾತನಾಡಿ, ಶಿಕ್ಷಣ ಇಂದು ವ್ಯಾಪಾರೀಕರಣವಾಗಿದ್ದರೂ ಕೆಲವು ನೈತಿಕ ಅಂಶಗಳಿಂದ ನಾವೆಲ್ಲರೂ ಉತ್ತಮ ಶಿಕ್ಷಣ ಕೊಟ್ಟು ಸಮಾಜದಲ್ಲಿ ಉತ್ತಮ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಬೇಕು. ಸದಾ ಕ್ರಿಯಾಶೀಲರಾಗಿ, ಓದುಗರಾಗಿ ಉತ್ತಮ ಶಿಕ್ಷಣ ಕೊಡುವಲ್ಲಿ ಸಕ್ರೀಯರಾಗಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನಾಥಸೇವಾಶ್ರಮದ ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ಮಾತನಾಡಿ, ಉತ್ತಮ ಶಿಕ್ಷಣ ಕೊಡುವ ಎಲ್ಲಾ ವ್ಯವಸ್ಥೆಗಳನ್ನು ಅನಾಥಸೇವಾಶ್ರಮದ ಆಡಳಿತ ಮಂಡಳಿ ಸದಾ ಬದ್ಧವಾಗಿದ್ದು ಶಿಕ್ಷಕನಾಗುವವನು ಜ್ಞಾನದ ಹಸಿವಿರಬೇಕು. ಹೇಗೆ ಉತ್ತಮ ಬೋಧಕನಾಗಬೇಕು ಎಂಬ ತುಡಿತ ಸದಾಇರಬೇಕು ಎಂದರು.

ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ವಿದ್ಯಾರ್ಥಿಗಳಿಗೆ ದೀಪದಾನ ಮಾಡಿ, ಶಿಕ್ಷಣ ಸೇವೆಯ ಈ ನಂದಾದೀಪದಿಂದ ಮತ್ತೊಬ್ಬರಿಗೆ ಶಿಕ್ಷಣದ ದೀಪಗಳನ್ನು ಹಚ್ಚುತ್ತಾ ವಿದ್ಯಾರ್ಥಿಗಳ ಮನಸ್ಸಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಾ ಸಾಗಬೇಕು ಎಂದರು.

ಇದೇ ವೇಳೆ ಕ್ರೀಡೆ ಮತ್ತು ಶಿಕ್ಷಣೇತರ ಸ್ಪರ್ಧೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನಗಳನ್ನು ನೀಡಲಾಯಿತು. ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಸ್ವಾಮಿ ಸ್ವಾಗತಿಸಿ, ಪೂಜಾ ನಿರೂಪಿಸಿ, ನೂರ್ ತಸ್ಮಿಯಾ ವಂದಿಸಿದರು.