ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ವರ್ಗ, ಸಮಾಜ ಹಾಗೂ ಸಮುದಾಯಗಳ ಭಾವನೆಗಳಿಗೆ ಸೂಕ್ತ ಗೌರವ ನೀಡಿದಾಗ ಮಾತ್ರ ದೇಶವನ್ನು ಯಶಸ್ವಿಯಾಗಿ ಕಟ್ಟಲು ಸಾಧ್ಯ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ವರ್ಗ, ಸಮಾಜ ಹಾಗೂ ಸಮುದಾಯಗಳ ಭಾವನೆಗಳಿಗೆ ಸೂಕ್ತ ಗೌರವ ನೀಡಿದಾಗ ಮಾತ್ರ ದೇಶವನ್ನು ಯಶಸ್ವಿಯಾಗಿ ಕಟ್ಟಲು ಸಾಧ್ಯ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ದಿವಂಗತ ಡಿ.ಎಸ್. ಮಾಳಗಿ ಅವರ ಪುಣ್ಯಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಎಂದರೆ ಕೇವಲ ಅಧಿಕಾರ ನಡೆಸುವುದಲ್ಲ. ಸಮಾಜದ ಎಲ್ಲ ವರ್ಗಗಳ ಭಾವನೆಗಳಿಗೆ ಗೌರವ ನೀಡುವುದು ಅದರ ಪ್ರಮುಖ ಆಧಾರಸ್ತಂಭವಾಗಿದೆ. ಸಾಮಾಜಿಕ ನಾಯಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದಾಗ ಮಾತ್ರ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಉಳಿಯುತ್ತದೆ. ಹಿರಿಯ ನಾಯಕರು ಹಾಗೂ ಸಿದ್ಧಾಂತಕ್ಕಾಗಿ ಹೋರಾಡಿದವರ ಜೀವನ, ವಿಚಾರಧಾರೆ ಮತ್ತು ತಾತ್ವಿಕ ಹೋರಾಟಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.

ಮಾಳಗಿ ಬದುಕು ಚಿರಸ್ಮರಣೀಯ:ಡಿ.ಎಸ್. ಮಾಳಗಿ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ. ಹೀಗಾಗಿ ಇದು ಪುಣ್ಯಸ್ಮರಣೆಯಲ್ಲ, ಚಿರಸ್ಮರಣೆಯ ಕಾರ್ಯಕ್ರಮ ಎಂದ ಬೊಮ್ಮಾಯಿ, ಯಶಸ್ಸು ಮತ್ತು ಸಾಧನೆ ನಡುವೆ ಬಹಳ ವ್ಯತ್ಯಾಸವಿದೆ. ಸಾಧಕ ತನ್ನ ಜೀವನವನ್ನು ಸಮಾಜಕ್ಕಾಗಿ ಮುಡುಪಾಗಿಟ್ಟು ಕೆಲಸ ಮಾಡುವವನು. ಸ್ವಾಮಿ ವಿವೇಕಾನಂದರ ನುಡಿಯಂತೆ ಸಾಧಕನಿಗೆ ಸಾವಿಲ್ಲ, ಸಾವಿನ ನಂತರವೂ ತನ್ನ ವಿಚಾರ ಹಾಗೂ ಕಾರ್ಯಗಳ ಮೂಲಕ ಬದುಕುತ್ತಾನೆ. ಡಿ.ಎಸ್. ಮಾಳಗಿ ಅವರ ನಡೆದುಬಂದ ದಾರಿ ಹಾಗೂ ಮಠದ ಹಾದಿ ಸಮಾನವಾಗಿ ಬೆಳೆದು ಬಂದಿದ್ದವು. ಅವರ ಹೆಸರನ್ನು ಕೇಳಿದರೂ ಸಮಾಧಾನ ಸಿಗುವಂತಹ ಒಡನಾಟ ತಮ್ಮದಾಗಿತ್ತು. ಯಾವುದೇ ದೊಡ್ಡ ಹುದ್ದೆ ಅಥವಾ ಅಧಿಕಾರಕ್ಕೆ ಅಂಟಿಕೊಳ್ಳದೆ, ಬಸವ ತತ್ವದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಬೆಳೆಸಿದವರು ಮಾಳಗಿ ಎಂದು ಸ್ಮರಿಸಿದರು.

ದಶಕಗಳಿಂದ ಮೀಸಲಾತಿ ಜಾರಿಯಲ್ಲಿದ್ದರೂ ಸಮಾಜದಲ್ಲಿ ನಿರೀಕ್ಷಿತ ಬದಲಾವಣೆ ಸಂಪೂರ್ಣವಾಗಿ ಆಗಿಲ್ಲ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಬಡವರಿಗೆ ಹೆಚ್ಚಿನ ನೆರವು ನೀಡುವ ಮೂಲಕ ಬದಲಾವಣೆ ತರಬೇಕಿದೆ. ಭಿನ್ನತೆಗಳನ್ನು ಮರೆತು ಎಲ್ಲ ಸಮಾಜಗಳು ಒಗ್ಗಟ್ಟಿನಿಂದ ಬೆಳೆದಾಗ ಮಾತ್ರ ದೇಶದ ಭವಿಷ್ಯ ಉತ್ತಮವಾಗಲಿದೆ. ದ್ವೇಷದ ರಾಜಕಾರಣ ಬಿಟ್ಟು ಉತ್ತಮ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಹತ್ತಿಮತ್ತೂರಿನ ನಿಜಗುಣ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮುಖಂಡರಾದ ಭರತ ಬೊಮ್ಮಾಯಿ, ಎಂ.ಎಸ್. ಕೋರಿಶೆಟ್ಟರ, ಗವಿಸಿದ್ದಪ್ಪ ದ್ಯಾಮಣ್ಣವರ, ಭೋಜರಾಜ ಕರೂದಿ, ಪರಮೇಶಪ್ಪ ಮೇಗಳಮನಿ, ಡಿ.ಎಸ್. ಮಾಳಗಿ ಪುತ್ರ ಮಹೇಶ ಮಾಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.