ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಠಿಣ ಕಾನೂನುಗಳ ಅರಿವಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ, ಅಸಮಾನತೆ ಹೆಚ್ಚುತ್ತಿರುವುದು ವಿಷಾದನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಅಸಮಾನತೆ, ದೌರ್ಜನ್ಯಗಳು ನಿಯಂತ್ರಿಸಬೇಕಾದರೆ ಮಹಿಳೆಯರಿಗೆ ಧೈರ್ಯ ಅಗತ್ಯ. ಧೈರ್ಯ ಇಲ್ಲದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ. ಏನೇ ಕಷ್ಟ ಬಂದರೂ ಎದುರಿಸಬೇಕು ಎಂದರು.ದೌರ್ಜನ್ಯ ನಡೆದರೆ ವಿರೋಧಿಸಬೇಕು. ಪ್ರಸ್ತುತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ವರದಕ್ಷಿಣೆ ಕಿರುಕುಳಗಳು, ಹೆಚ್ಚಾಗುತ್ತಿದೆ, ಇದನ್ನು ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಬೇಕೆಂದು.ಮಹಿಳೆಯರು ಹೋರಾಟ ಮಾಡಬೇಕು: ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ರಜೆ ಕೊಡದೇ ದೌರ್ಜನ್ಯ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೂಲಿಯಲ್ಲು ತಾರತಮ್ಯ ಮಾಡಲಾಗುತ್ತಿದೆ. ಮಹಿಳೆಯರು ತಮಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು, ಈ ಹೋರಾಟ ನಿರಂತರವಾಗಿರಬೇಕು ಎಂದರು. ಕಾನೂನಿನ ಭಯವಿದ್ದರೂ ಸಂಪ್ರದಾಯದ ಹೆಸರಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ವಿಪರ್ಯಾಸ. ೧೦೦ ಗಂಡ ಮಕ್ಕಳಿಗೆ ೯೫ ಹೆಣ್ಣು ಮಕ್ಕಳಿದ್ದು ಲಿಂಗಾನುಪಾತದಲ್ಲಿಯೂ ಅಸಮಾನತೆ ಇದೆ. ಇದರಿಂದ ಸಾಮಾಜಿಕ ಬೆಳವಣಿಗೆಗೆ ತೊಂದರೆಯುಂಟಾಗುತ್ತದೆ ಎಂದರು. ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕು. ಶಿಕ್ಷಣ ಪಡೆದ ಹೆಣ್ಣು ಮಕ್ಕಳಿಂದ ಮಾತ್ರ ಬದಲಾವಣೆ ಸಾಧ್ಯ. ಶಿಕ್ಷಣದಿಂದ ಸಮರ್ಥತೆ ಬರುತ್ತದೆ ಎಂದು ತಿಳಿಸಿದರು.ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಪ್ರಸ್ತುತ ದಿನಗಳಲ್ಲೂ ಮಹಿಳೆಯರ ಸಮಸ್ಯೆಗಳು ಕಡಿಮೆ ಆಗಿಲ್ಲ. ೧೯೭೫ರಲ್ಲಿ ವಿಶ್ವಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳು ಮಾ. ೮ ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಣೆ ಮಾಡಲು ಆದೇಶ ಮಾಡಿತು ಎಂದರು. ಅಂತಾರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವಿಸುವುದಕ್ಕಷ್ಟೇ ಸೀಮಿತವಾಗದೆ ಅವರು ಎದುರಿಸುತ್ತಿರುವ ಸವಾಲುಗಳ ಮೇಲೆಯೂ ಬೆಳಕು ಚೆಲ್ಲಬೇಕು, ಸಾಧಕರು ನಮಗೆ ಸ್ಫೂರ್ತಿಯಾಗಬೇಕು.ಲಿಂಗಾಧಾರಿತ ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಹೋರಾಟ ಮನೆಯಿಂದಲೇ ಪ್ರಾರಂಭವಾಗಬೇಕು, ವಿದ್ಯಾರ್ಥಿದೆಸೆಯಲ್ಲಿಯೇ ಇದನ್ನು ರೂಢಿಸಿಕೊಂಡಾಗ, ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ, ಬುದ್ಧ, ಅಣ್ಣ ಬಸವಣ್ಣ, ಅಂಬೇಡ್ಕರರು ಸಾರಿದ ಸಮಸಮಾಜದ ಆಶಯ ಕೂಡಾ ಆಗಿದೆ.
ಪ್ರತಿಯೊಬ್ಬರ ಬದುಕಿನಲ್ಲಿ ಹೆಣ್ಣು ನಿರ್ವಹಿಸದ ಪಾತ್ರವಿಲ್ಲ. ಅದೇ ಕಾರಣಕ್ಕೆ ಮಹಿಳೆಯ ಈ ದಣಿವರಿಯದ ಕೆಲಸ, ನಿಸ್ವಾರ್ಥ ಶ್ರಮವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದರು.ಅಂತಾರಾಷ್ಟ್ರೀಯ ಮಹಿಳಾ ದಿನವು ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಕುರಿತಾಗಿ ಹೆಚ್ಚು ಮಹತ್ವ ಹೊಂದಿದೆ. ವಿಶ್ವಾದ್ಯಂತ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಇದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಏನಾದರೂ ಸಾಧಿಸುವ ಗುರಿ, ಸಮರ್ಥತೆ ಬೆಳೆಸಿಕೊಳ್ಳಬೇಕು.
ಮಹಿಳೆಯ ನೆರವಿಗೆಂದೇ ಕಾನೂನು, ಮಹಿಳಾ ಸಂಘಟನೆಗಳು, ರಕ್ಷಣಾ ಸಂಸ್ಥೆಗಳು ಇದ್ದು ಈ ಮೂಲಕ ಸ್ತ್ರೀಯರು ತಮ್ಮ ಕಷ್ಟವನ್ನು ಪರಿಹರಿಸಿಕೊಳ್ಳಬಹುದಾಗಿದೆ ಮುಖ್ಯವಾಗಿ ಶಿಕ್ಷಣ ಮತ್ತು ಸಮರ್ಥತೆ ಬೆಳೆಸಿಕೊಳ್ಳಬೇಕು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಸಮಿತಿ ಸಂಚಾಲಕಿ ಬಿ.ರೇವಣಾಂಬ. ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ. ಎ.ಆರ್.ಸುಷ್ಮಾ, ಉಪನ್ಯಾಸಕಿ ಅರುಣಾಶ್ರೀ, ಹಿರಿಯ ವಿದ್ಯಾರ್ಥಿನಿ ಆರ್.ಎಂ.ಮಧುಶ್ರೀ ಮತ್ತಿತರರಿದ್ದರು.