ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಎರಡು ವರ್ಷದ ಹಿಂದೆ ನಿರ್ಮಾಣಗೊಂಡು ಉದ್ಘಾಟನೆಗೊಳ್ಳದೆ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕ, ಎರಡು ಬೋರ್‌ವೆಲ್‌ಗಳು ಹಾಳಾಗಿದ್ದರೂ ದುರಸ್ತಿಪಡಿಸದ ಅಧಿಕಾರಿಗಳು. ಪರಿಣಾಮ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮೊತ್ತಹಳ್ಳಿಯಲ್ಲಿ ಜಲಕ್ಷಾಮ. ದಿನಬಳಕೆ ಹಾಗೂ ಕುಡಿಯುವ ನೀರಿಗೆ ಜನರ ಪರದಾಟ.ರವೀಂದ್ರ ಶ್ರೀಕಂಠಯ್ಯ ಶಾಸಕರಾಗಿದ್ದ ಸಮಯದಲ್ಲಿ ಮೊತ್ತಹಳ್ಳಿ ಗ್ರಾಮದಲ್ಲಿ ಪೂರ್ಣಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಯಾರೊಬ್ಬರೂ ಉದ್ಘಾಟನೆಯನ್ನೇ ಮಾಡಲಿಲ್ಲ. ಆದರೂ, ಜನರು ನೀರನ್ನು ಬಳಕೆ ಮಾಡಲು ಆರಂಭಿಸಿದರು.
ಗಾಜು ಒಡೆಯಿತು, ಕೆಟ್ಟುಹೋಯಿತು:ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿ ಮಕ್ಕಳು ಆಟವಾಡುವ ಸಮಯದಲ್ಲಿ ಗಾಜು ಒಡೆದುಹೋಯಿತು. ದಿನ ಕಳೆದಂತೆ ಕುಡಿಯುವ ನೀರಿನ ಘಟಕದಲ್ಲಿ ಹಣದ ಪೆಟ್ಟಿಗೆ ಮತ್ತು ಮೋಟಾರ್ ಎರಡೂ ಕಳ್ಳತನವಾದವು. ಈ ವಿಷಯವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಯಾರೂ ಅದನ್ನು ದುರಸ್ತಿಪಡಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸುಸ್ಥಿತಿಗೆ ತರುವ ಪ್ರಯತ್ನವನ್ನು ಮಾಡಲೇ ಇಲ್ಲ.
ಕುಂಟು ನೆಪದಲ್ಲೇ ಕಾಲಹರಣ:ಅದೇ ಸಮಯಕ್ಕೆ ವಿಧಾನಸಭೆ ಚುನಾವಣೆ ಎದುರಾಯಿತು. ಚುನಾವಣೆ ಮುಗಿಯುವಷ್ಟರಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಗ್ರಾಮ ಪಂಚಾಯಿತಿಯಿಂದ ಸಂಬಂಧಪಟ್ಟ ನೀರು ಸರಬರಾಜು ಇಲಾಖೆಗೆ ಗುತ್ತಿಗೆಯಾಗಿ ನೀಡಲ್ಪಟ್ಟಿದ್ದವು. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಶುದ್ಧ ಕುಡಿಯುವ ನೀರಿನ ಸ್ಥಿತಿ-ಗತಿಯ ಬಗ್ಗೆ ವಿಚಾರ ಮುಟ್ಟಿಸಿದರು. ಆಗಲೂ ಸಹ ಅಧಿಕಾರಿಗಳು ಕುಂಟು ನೆಪ ಹೇಳಿಕೊಂಡು ಬಂದರೇ ವಿನಃ ಸರಿಪಡಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇ ಇಲ್ಲ.
ಹಸ್ತಾಂತರಕ್ಕೂ ಕಿವಿಗೊಡಲಿಲ್ಲ:ಕೊತ್ತತ್ತಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಮತ್ತೆ ಶುದ್ಧ ಕುಡಿಯುವ ನೀರಿನ ಘಟಕದ ವಿಷಯ ಪ್ರಸ್ತಾಪಿಸಿ ಘಟಕವನ್ನು ದುರಸ್ತಿಪಡಿಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವುದು. ಇಲ್ಲವೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇದನ್ನು ವಶಕ್ಕೆ ಪಡೆದು ರೆಡಿ ಮಾಡಿಸಿಕೊಡುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ. ಆ ಕೆಲಸವನ್ನಾದರೂ ಮಾಡುವಂತೆ ಮನವಿ ಮಾಡಿದ್ದಾಯಿತು. ಇಷ್ಟು ದಿನವಾದರೂ ಆ ಸಂಬಂಧ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೂರು ದಿನಕ್ಕೊಮ್ಮೆ ನೀರು:ಮೂರು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡುವರು. ಅದೇ ನೀರನ್ನು ಕುಡಿಯುವುದಕ್ಕೆ, ದಿನಬಳಕೆಗೆ, ಶೌಚಾಲಯಕ್ಕೆಲ್ಲಾ ಸಂಗ್ರಹಿಸಿಟ್ಟುಕೊಳ್ಳಬೇಕು. ಊರಿನಲ್ಲಿ ನೀರಿಗೆ ಜನರು ತೀವ್ರ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಯಾರೊಬ್ಬರಿಗೂ ಅದರ ಚಿಂತೆಯೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಇನ್ನು ಗ್ರಾಮದಲ್ಲಿ ಎರಡು ಬೋರ್‌ವೆಲ್‌ಗಳಿದ್ದು ಎರಡೂ ಸಹ ಕೆಟ್ಟು ನಿಂತಿವೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಗ್ರಾಮ ಪಂಚಾಯಿತಿಯವರೂ ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೂ ಅನುಕೂಲ ಮಾಡಿಕೊಡುತ್ತಿಲ್ಲ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕೆನ್ನುವುದೇ ತಿಳಿಯದ ಗ್ರಾಮಸ್ಥರು ದಿಕ್ಕೆಟ್ಟಿದ್ದಾರೆ.‘ಮೊತ್ತಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಜಠಿಲವಾಗಿದೆ. ಜನ-ಜಾನುವಾರುಗಳು ನೀರಿಲ್ಲದೆ ತತ್ತರಿಸುವಂತಾಗಿದೆ. ಶುದ್ಧ ಕುಡಿಯುವ ನೀರಿನಘಟಕ ಕೆಟ್ಟು ಎರಡು ವರ್ಷವಾಗಿದೆ, ರಿಪೇರಿ ಮಾಡಿಸಿಲ್ಲ. ಬೋರ್‌ವೆಲ್‌ಗಳು ಹಾಳಾಗಿದ್ದರೂ ದುರಸ್ತಿಪಡಿಸಿಲ್ಲ. ಮೂರು ದಿನಗಳಿಗೊಮ್ಮೆ ಒಂದು ಗಂಟೆ ಪೂರೈಸುವ ನೀರಿಗೆ ಕಾದು ಕೂರಬೇಕು. ಅದನ್ನೇ ಕುಡಿಯುವುದರಿಂದ ಹಿಡಿದು ಎಲ್ಲದಕ್ಕೂ ಬಳಸುವ ದಯನೀಯ ಸ್ಥಿತಿ ಎದುರಾಗಿದೆ.’
- ಸಚಿನ್, ಗ್ರಾಮಸ್ಥ