ಸಾರಾಂಶ
ಗಜೇಂದ್ರಗಡ: ವಿದ್ಯಾರ್ಥಿಯ ಜೀವನವನ್ನು ಸಶಕ್ತಗೊಳಿಸುವುದರ ಜತೆಗೆ ಸದೃಢ ದೇಶ ನಿರ್ಮಾಣಕ್ಕೆ ಶಿಕ್ಷಣ ಸಹಕಾರಿಯಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯ ಎಂದು ಸ್ಥಳೀಯ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ, ಪುರಸಭೆ ಮಾಜಿ ಸದಸ್ಯ ಬಸವರಾಜ ಬಂಕದ ಹೇಳಿದರು.ಸಮೀಪದ ರಾಜೂರು ಗ್ರಾಮದ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅಂದು ನಮಗೆ ವಿದ್ಯಾಭ್ಯಾಸ ಮಾಡಲು ನಿಮಗಿರುವಷ್ಟು ಸೌಲತ್ತು ಹಾಗೂ ಸೌಲಭ್ಯಗಳಿರಲಿಲ್ಲ. ನಿಮಗಿರುವ ಸೌಲಭ್ಯ ಹಾಗೂ ಸೌಲತ್ತುಗಳು ಹೆಚ್ಚಿಗಿದ್ದು ವಿದ್ಯಾರ್ಥಿಗಳು ನಿರಂತರ ಅಧ್ಯಯನವನ್ನು ಅಳವಡಿಸಿಕೊಂಡರೆ ಯಶಸ್ಸು ಸುಲಭವಾಗುತ್ತದೆ ಎಂದರು.ನಿವೃತ್ತ ಮುಖ್ಯೋಪಾಧ್ಯಾಯ ವೀರಣ್ಣ ಕೋರಿ ಮಾತನಾಡಿ, ದೇಶದ ಅಮೂಲ್ಯ ಸಂಪತ್ತಾಗಿರುವ ವಿದ್ಯಾರ್ಥಿ ಸಮೂಹಕ್ಕೆ ಶಿಕ್ಷಣ ಪ್ರೇಮಿಗಳು ಶೈಕ್ಷಣಿಕ ಉನ್ನತಿಗಾಗಿ ಯುವ ಆವೃತ್ತಿ ಮೂಲಕ ನೀಡುತ್ತಿರುವ ಸಹಕಾರ ಅನುಕರಣೀಯ. ಪರೀಕ್ಷೆ ಹಾಗೂ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡಪ್ರಭ ಯುವ ಆವೃತ್ತಿ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಫಲಿತಾಂಶ ಗಳಿಸಿದರೆ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಶಿಕ್ಷಣ ಪ್ರೇಮಿಗಳು ನಡೆಸಲು ಮುಂದಾಗುತ್ತಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಧಾನ ಗುರು ಜಿ.ಎಸ್. ನೀಲಗಾರ ಮಾತನಾಡಿ, ಎಲ್ಲ ಕ್ಷೇತ್ರದಲ್ಲಿಯೂ ಸಹ ನಾನೇ ಮೊದಲು ಬರಬೇಕು ಎಂಬ ಸ್ಪರ್ಧಾ ಮನೋಭಾವ ಇಂದು ಹೆಚ್ಚಾಗಿದೆ. ತಂತ್ರಜ್ಞಾನ ಬಳಸಿಕೊಂಡು ಸಾಧನೆ ಮಾಡಬೇಕೆಂದು ಕರೆನೀಡಿದರು.ಕನ್ನಡಪ್ರಭ ವರದಿಗಾರ ಎಸ್.ಎಂ.ಸೈಯದ್, ವಿದ್ಯಾರ್ಥಿಗಳಾದ ರೇಣುಕಾ ಹಾದಿಮನಿ ಹಾಗೂ ಪಂಚಾಕ್ಷರಿ ಕಲ್ಮಠ ಮಾತನಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಸುರೇಶಗೌಡ ಪಾಟೀಲ, ಅಪ್ಪಣ್ಣ ಮುಜಾವರ, ಬನ್ನೇಪ್ಪ ಗೂಳಿ, ಗೂಳಪ್ಪ ಕಮಾಟರ, ಕೆ.ವಿ.ಕಂಬಿ, ನಾಹರಾಜ ಸಜ್ಜನರ, ದಶರಥ ಲಮಾಣಿ, ಮಂಜುನಾಥ ಬೋಸ್ಲೆ, ಬಸ್ತಾಬಿ ಮ್ಯಾಗಳಮನಿ ಇದ್ದರು.