ಬಸವಣ್ಣನ ತತ್ವ ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ

| Published : Nov 23 2024, 12:32 AM IST

ಬಸವಣ್ಣನ ತತ್ವ ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ: ದೇವರ ಪೂಜೆಯಿಂದ ಫಲ ಸಿಗುವುದಿಲ್ಲ. ಸಮಾಜ ಸುಖವೇ ಎನ್ನ ಸುಖ, ಸಮಾಜ ದುಃಖವೇ ಎನ್ನ ದುಃಖದ ಭಾವನೆ ಇದ್ದಾಗ ಮಾತ್ರ ದೇವರ ಒಲಿಮೆ ಸಾಧ್ಯ ಎಂಬುದು ಬಸವಣ್ಣ ನವರ ಭಾವವಾಗಿತ್ತು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು.

ಹೊಸದುರ್ಗ: ದೇವರ ಪೂಜೆಯಿಂದ ಫಲ ಸಿಗುವುದಿಲ್ಲ. ಸಮಾಜ ಸುಖವೇ ಎನ್ನ ಸುಖ, ಸಮಾಜ ದುಃಖವೇ ಎನ್ನ ದುಃಖದ ಭಾವನೆ ಇದ್ದಾಗ ಮಾತ್ರ ದೇವರ ಒಲಿಮೆ ಸಾಧ್ಯ ಎಂಬುದು ಬಸವಣ್ಣ ನವರ ಭಾವವಾಗಿತ್ತು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು.

ಇಂಡೋನೇಷಿಯಾದ ಹ್ಯಾರೀಸ್ ಕನ್ವೇನ್ಷಿಯಲ್ ಹಾಲ್‌ನಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ನಡೆದ ಭಾರತ ವಚನ ಸಾಂಸ್ಕೃತಿಕ ಯಾತ್ರಾ - 2024ರ ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಸವಣ್ಣ ಪರಿಪೂರ್ಣ ವ್ಯಕ್ತಿ. ಅಂದು ಇಂದು ಮುಂದು ಎಂದೆಂದಿಗೂ ಪ್ರಸ್ತುತ. ಇಡೀ ವಿಶ್ವಕ್ಕೆ ಬಸವಣ್ಣ ಗುರು. ಬದುಕಿನ ಎಲ್ಲ ಆಯಾಮಗಳನ್ನು ಕೊಟ್ಟಂಥ ಮಹಾನ್ ಪುರುಷ. ಇಂಥವರ ತತ್ವಗಳನ್ನು ಆಚರಣೆಗೆ ತರದೇ ಹೋದರೆ ಬಸವದ್ರೋಹಿಗಳಾಗುತ್ತೇವೆ. ಆದ್ದರಿಂದ ಬಸವಣ್ಣನವರ ತತ್ವಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ‌. ಬಸವ ತತ್ವ ವಿಶ್ವವ್ಯಾಪಿಯಾಗಲಿ. ಮಠಾಧೀಶರು ಮಾಡದ ಕೆಲಸವನ್ನು ಬಸವ ಪ್ರತಿಷ್ಠಾನದವರು ಮಾಡುತ್ತಿರುವುದು ಶ್ಲಾಘನೀಯ ಎಂದರು.ಈ ದೇಶದ ರಾಜಕೀಯ ಧಾರ್ಮಿಕ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮಗೆ ತುಂಬ ಸಂತೋಷವಾಗಿದೆ. ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳು, ಸಾಂಸ್ಕೃತಿಕ ನಾಯಕರುಗಳ ಸರಳತೆಯನ್ನು ನೋಡಿದರೆ ನಿಜವಾಗಿಯೂ ಬಸವತತ್ವ ನೆಲೆಸಿರುವುದು ಇಂಡೋನೇಷಿಯಾದಲ್ಲಿ ಎನ್ನುವ ಭಾವ ಮೂಡುವುದು ಎಂದರು.

ಇಂಡೋನೇಷಿಯಾದ ರಮೇಶ ಶಾಸ್ತ್ರೀಜಿ ಮಾತನಾಡಿ, ಮುಂದಿನ ವರ್ಷ ಬಸವಣ್ಣನವರ ತತ್ವ ವಿಚಾರಗಳ ಬಗ್ಗೆ ಅಂತಾರಾಷ್ಷ್ರೀಯ ವಿಚಾರ ಸಂಕಿರಣ ಇಂಡೋನೇಷಿಯಾದಲ್ಲಿ ನಡೆಯಬೇಕು ಎಂದರು.

ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಬಸವಾದಿ ಶಿವಶರಣರ ತತ್ವಗಳು ನಿಮ್ಮೆಲ್ಲರಿಗೂ ದಾರಿದೀಪವಾಗಲಿ. ಬಸವಣ್ಣ ನಮ್ಮ ಧರ್ಮಗುರು. ಅಂತಹ ಧರ್ಮ ಗುರುವಿನ ತತ್ವ ವಿಚಾರಗಳು ನಮ್ಮ ಬದುಕಿಗೆ ದಾರಿದೀಪವಾಗಲಿ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ್ರು, ಬಸವ ತತ್ವ ಚಿಂತಕ ರಂಜಾನ್ ದರ್ಗಾ, ಸಿದ್ದು ಯಾಪಲಪರವಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಮಾತಾನಾಡಿದರು.

ಇದೇ ವೇಳೆ ಬಾಲಿಯ ರಮೇಶ ಗುರೂಜಿಯವರಿಗೆ ಚೀಫ್ ಸಿವಿಲಿಯನ್ - 2024 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಇಂಡೋನೇಷಿಯಾದ ರಾಜನ ಮಗ ವೇದಾಂತ, ಪ್ರವಾಸೋದ್ಯಮ ಇಲಾಖೆಯ ಮಂತ್ರಿ ಇಗ್ನೋನಾ, ಧಾರ್ಮಿಕ ಇಲಾಖೆಯ ಅಧಿಕಾರಿ ಕೊರಾಸನ ಮತ್ತಿತರರಿದ್ದರು.

40 ಜನ ಪ್ರವಾಸಿಗರು ಹಾಗೂ ಇಂಡೋನೇಷಿಯಾದ ಪ್ರಜೆಗಳು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಶಿವಸಂಚಾರದ ಕಲಾವಿದರು ವಚನ ಗೀತೆಗಳನ್ನು ಹಾಡಿದರು. ಸುರೇಶ ಸ್ವಾಗತಿಸಿದರೆ ಇಂಡೋನೇಷಿಯಾದ ವಿದ್ಯಾರ್ಥಿಗಳು ನಿರೂಪಿಸಿದರು. ಕೊನೆಗೆ ಶಿವಕುಮಾರ ಕಲಾಸಂಘದ ಕಲಾವಿದರು ಉರಿಲಿಂಗ ಪೆದ್ದಿ ನಾಟಕ ಪ್ರದರ್ಶಿಸಿದರು.