ಸಾರಾಂಶ
ಮಹನೀಯರೇ ಜಗತ್ತಿನಲ್ಲಿ ಏನೆಲ್ಲಾ ದೋಷಗಳಿವೆಯೋ ಆ ಪಟ್ಟಿಯಲ್ಲಿ ಮಾತೃದೋಷ ಇಲ್ಲವೇ ಇಲ್ಲ. ಏಕೆಂದರೆ ಅವಳಲ್ಲಿರುವುದು ತಾಯಿ ಹೃದಯವಷ್ಟೇ. ಮಹಿಳಾ ದಿನಾಚರಣೆ ಯಾಕೆ ಮಾಡಬೇಕು ಎಂದರೆ ಒಂದು ದಿನವಾದರೂ ಮಹಿಳೆಯರ ತ್ಯಾಗ ಬದುಕಿನ ಕುರಿತು ಪುರುಷ ಪ್ರಧಾನ ವ್ಯವಸ್ಥೆ ಅರ್ಥ ಮಾಡಿಕೊಳ್ಳಲಿಕ್ಕಾಗಿ ಆಚರಿಸಬೇಕು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
2025ರ ಅಂತಾರಾಷ್ಟ್ರೀಯ ಮಹಿಳಾ ದಿನದ ಘೋಷಣೆ ಮಾಡಲಾಗಿದೆ. ಎಲ್ಲ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಹಕ್ಕುಗಳು, ಸಮಾನತೆ, ಸಬಲೀಕರಣದ ಅಗತ್ಯಗಳನ್ನು ಒತ್ತಿ ಹೇಳುತ್ತಿದೆ. ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅಧಿಕಾರ, ಅವಕಾಶಗಳನ್ನು ನೀಡುವುದು ಸಮಾಜದ ಜವಾಬ್ದಾರಿ ಎಂದು ವಿಟಿಯು ಮಹಿಳಾ ಸಬಲೀಕರಣ ಕೋಶದ ಡಾ. ನಿರ್ಮಲಾ ಹಿರೇಮನಿ ಹೇಳಿದರು. ತಾಲೂಕಿನ ಮುದ್ದೇನಹಳ್ಳಿ ಸಮೀಪದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿಧ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ರಾಜಸ್ಥಾನದ ಮಾದರಿ ಪಾಲಿಸಿ
ರಾಜಸ್ಥಾನದ ಪಿಂಪ್ಲಾತಿ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ ಆ ಗ್ರಾಮದಲ್ಲಿ 108 ಸಸಿಗಳನ್ನು ನೆಡುವ ಜವಾಬ್ದಾರಿ ಆ ಕುಟುಂಬಕ್ಕೆ ವಹಿಸಲಾಗುತ್ತದೆ. ಮೇಲಾಗಿ ಗ್ರಾಮಪಂಚಾಯಿತಿ ಆಡಳಿತ ಆ ಮಗುವಿನ ಹೆಸರಲ್ಲಿ ಬ್ಯಾಂಕಿನಲ್ಲಿ ಖಾತೆ ತೆರೆದು ನಿಶ್ಚಿತ ಠೇವಣಿಯನ್ನು ಇಡಲಾಗುತ್ತದೆ. ಈ ಮಾದರಿ ದೇಶದ ಎಲ್ಲಾ ಭಾಗಗಳಿಗೂ ಹಬ್ಬಿದಾಗ ಮಾತ್ರವೇ ಹೆಣ್ಣಿಗೆ ಗೌರವ ಸ್ಥಾನಮಾನಗಳು ದೊರೆಯುತ್ತವೆ. ಆಗ ಮಾತ್ರ ನಿಜವಾದ ಮಹಿಳಾ ಸಬಲೀಕರಣ ಆಗಲಿದೆ ಎಂದರು.ಡಾ. ನಾಗಶ್ರೀ ತ್ಯಾಗರಾಜ್ ಮಾತನಾಡಿ, 21ನೇ ಶತಮಾನದ ಮಹಿಳಾ ಜಗತ್ತು ಅನನ್ಯವಾದ ಸಾಧನೆಗೆ ತೊಡಗುವಾಗ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರನ್ನು ಆದರ್ಶವಾಗಿಟ್ಟುಕೊಂಡು ಮುನ್ನುಗ್ಗಬೇಕಿದೆ ಎಂದು ಅಭಿಪ್ರಾಯಪಟ್ಟರು.ಮಹಿಳೆಯ ತ್ಯಾಗ ಅರ್ಥ ಮಾಡಿಕೊಳ್ಳಿ
ಮಹನೀಯರೇ ಜಗತ್ತಿನಲ್ಲಿ ಏನೆಲ್ಲಾ ದೋಷಗಳಿವೆಯೋ ಆ ಪಟ್ಟಿಯಲ್ಲಿ ಮಾತೃದೋಷ ಇಲ್ಲವೇ ಇಲ್ಲ. ಏಕೆಂದರೆ ಅವಳಲ್ಲಿರುವುದು ತಾಯಿ ಹೃದಯವಷ್ಟೇ. ಮಹಿಳಾ ದಿನಾಚರಣೆ ಯಾಕೆ ಮಾಡಬೇಕು ಎಂದರೆ ಒಂದು ದಿನವಾದರೂ ಮಹಿಳೆಯರ ತ್ಯಾಗ ಬದುಕಿನ ಕುರಿತು ಪುರುಷ ಪ್ರಧಾನ ವ್ಯವಸ್ಥೆ ಅರ್ಥ ಮಾಡಿಕೊಳ್ಳಲಿಕ್ಕಾಗಿ ಆಚರಿಸಬೇಕು ಎಂದರು.ಸಾವಿತ್ರಿಬಾಯಿ ಫುಲೆ ಸ್ಮರಿಸಿ
ಈ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹೆಣ್ಣುಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಹೋಗುವಾಗ ಮಹಿಳೆಯರೇ ಮುಂದೆ ನಿಂತು ಅವರ ಮೇಲೆ ಸಗಣಿ ಕೊಚ್ಚೆ ಎರಚುತ್ತಿದ್ದರು. ಕಾರಣ ಅವರು ಶಾಲೆಗೆ ಹೋಗಬಾರದು ಎಂಬ ಕಾರಣಕ್ಕೆ.ಅವರ ತ್ಯಾಗದ ಫಲವಾಗಿ ನಾವಿಂದು ಈ ಸ್ಥಾನದಲ್ಲಿ ಇರಲು ಸಾಧ್ಯವಾಗಿದೆ. ಕುಟುಂಬ ನೆಮ್ಮದಿಯಾಗಿದ್ದಾಗ ಸಮಾಜ ನೆಮ್ಮದಿಯಾಗಿ ಇರಲಿದೆ. ಭಾರತೀಯ ಕುಟುಂಬ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿ ಇದೆ ಎಂದರೆ ಅಲ್ಲಿ ಹೆಣ್ಣಿನ ಪಾತ್ರ ಹೆಚ್ಚಿದೆ. ಇದನ್ನು ಇನ್ನಷ್ಟು ಕಾಲ ಕ್ಷೇಮವಾಗಿ ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೆಣ್ಣಿಗಿದೆ ಎಂದರು.ಕಾರ್ಯಕ್ರಮದಲ್ಲಿ ವಿಟಿಯು ಮುದ್ದೇನಹಳ್ಳಿ ಕೋಆರ್ಡಿನೇಟರ್ ಜಿ.ಎಸ್.ವೆಂಕಟೇಶ್, ಪ್ರೊ.ತನುಜಾ,ಪ್ರೊ. ವಿಶ್ವನಾಥ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕರು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.