ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುವುದು ಶಿಕ್ಷಕರ ಹೊಣೆ: ಸ್ವರ್ಣವಲ್ಲೀ ಸ್ವಾಮೀಜಿ

| Published : Jun 17 2024, 01:34 AM IST

ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುವುದು ಶಿಕ್ಷಕರ ಹೊಣೆ: ಸ್ವರ್ಣವಲ್ಲೀ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಹವ್ಯಕ ಶ್ರೇಷ್ಠತೆಯನ್ನು ತಿಳಿಸುವ ಕೆಲಸ ಆಗಬೇಕು. ಸಮಾಜದ ಸಮಸ್ಯೆಗಳ ಅರಿವು ಅಗತ್ಯವಿದೆ.

ಶಿರಸಿ: ಆಧುನಿಕ ಶಿಕ್ಷಣದ ಗಾಳಿ ಸಿಲುಕಿ ಹವ್ಯಕ ಮಕ್ಕಳು ದಾರಿ ತಪ್ಪದಂತೆ, ನಮ್ಮತನ ಬಿಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹವ್ಯಕ ಸಮಾಜ ಹಾಗೂ ಈ ಸಮಾಜದ ಶಿಕ್ಷಕರ ಮೇಲಿದೆ. ನಮ್ಮತನ ಬಿಡುವುದು ದೊಡ್ಡತನವಲ್ಲ, ಅದು ದಡ್ಡತನವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

ಭಾನುವಾರ ನಗರದ ತೋಟಗಾರ್ಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸಿದ ಹವ್ಯಕ ಶಿಕ್ಷಕರ ಸಮಾವೇಶದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ಹವ್ಯಕ ಸಮುದಾಯ ಷಟ್‌ಕರ್ಮಗಳನ್ನು ನಡೆಸಿಕೊಂಡು ಬಂದಿದೆ. ಯಜನ, ಯಾಜನ, ದಾನ, ಪ್ರತಿಗ್ರಹ, ಅಧ್ಯಯನ ಹಾಗೂ ಅಧ್ಯಾಪನ ಈ ಕರ್ಮಗಳನ್ನು ಮುನ್ನಡೆಸಿಕೊಂಡ ಬಂದ ಸುಸಂಸ್ಕೃತ ಸಮಾಜ ಎಂದ ಶ್ರೀಗಳು, ಮಕ್ಕಳಿಗೆ ಹವ್ಯಕ ಶ್ರೇಷ್ಠತೆಯನ್ನು ತಿಳಿಸುವ ಕೆಲಸ ಆಗಬೇಕು. ಸಮಾಜದ ಸಮಸ್ಯೆಗಳ ಅರಿವು ಅಗತ್ಯವಿದೆ. ವಿವಾಹ ವಿಚ್ಛೇದನ ಸಮಸ್ಯೆ, ಜನಸಂಖ್ಯೆಯೆ ಇಳಿಮುಖ ಸಮಸ್ಯೆಗಳ ಗಮನ ಇರಬೇಕು. ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ ಆಗಬೇಕು. ಇದಕ್ಕೆಲ್ಲ ಯುವಕ- ಯುವತಿಯರಿಗೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದರು.ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಿದ್ಯಾರ್ಥಿಗಳಂತೆ ಶಿಕ್ಷಕರನ್ನೂ ಕ್ರಿಯಾಶೀಲಗೊಳಿಸಲು ಇಂತಹ ಸಮಾವೇಶಗಳು ಕಾರಣವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕತೆ, ಬದ್ಧತೆಯಿಂದ ಕೆಲಸ ಮಾಡಬೇಕು. ಸಂಘಟಿತ ಸಂದರ್ಭದಲ್ಲಿ ಸಂಕಷ್ಟ ಎದುರಿಸಿ ಮುನ್ನಡೆಯಬೇಕು. ಸಂಕಷ್ಟಗಳು ಶಿಕ್ಷಣದಲ್ಲಿ ಕಾಣಬಾರದು. ಭವ್ಯ ಭಾರತದ ನಿರ್ಮಾಣ ಆಗಬೇಕು. ನಮ್ಮ ಗುರುಗಳು ಅವರು ಎಂಬ ಅಭಿಮಾನದಲ್ಲಿ ಶಿಷ್ಯರು ಹೇಳುವಂತೆ ಆಗಬೇಕು ಎಂದರು.ಅಖಿಲ ಹವ್ಯಕ ಮಹಾ ಸಭೆ ಅಧ್ಯಕ್ಷ ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜ ಹುಟ್ಟಿದ್ದೆ ಲೋಕ ಕಲ್ಯಾಣಾರ್ಥವಾಗಿ. ನಮ್ಮ ಸಂಸ್ಕೃತಿ, ಪರಂಪರೆಗೆ ಗಟ್ಟಿತನವಿದೆ. ಯಜ್ಞಯಾಗವನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಜ್ಞಾನದಾಸೋಹ ಮಾಡಿಸುತ್ತಿದ್ದೇವೆ. ವಿಶೇಷ ಪಾಕ ಸಂಸ್ಕಾರ ಹೊಂದಿದೆ. ಈ ಸಮಾಜಕ್ಕೆ ಪ್ರತ್ಯೇಕ ಭಾಷೆಯೇ ಇದೆ ಎಂದರು.ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಡಿ.ಪಿ. ಹೆಗಡೆ, ಪ್ರಶಾಂತ ಮಲವಳ್ಳಿ, ಮಹಾಬಲೇಶ್ವರ ಹೆಗಡೆ ಇದ್ದರು. ಭಾಸ್ಕರ ಗಾಂವಕರ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಸಾಧಕ ಶಿಕ್ಷಕರನ್ನು ಸ್ವರ್ಣವಲ್ಲೀ ಶ್ರೀಗಳು ಸನ್ಮಾನಿಸಿ, ಗೌರವಿಸಿದರು. ಅಭಿನಂದಿಸಿದರು.

ಸಾಧಕರಿಗೆ ಸನ್ಮಾನ

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ತಮ್ಮಣ್ಣ ಬೀಗಾರ, ಜಿ.ಜಿ. ಹೆಗಡೆ ಬಾಳಗೋಡು, ಆರ್.ಎಸ್. ಹೆಗಡೆ ಭೈರುಂಬೆ, ಶ್ರೀಪಾದ ಭಟ್ಟ, ಡಿ.ಪಿ. ಹೆಗಡೆ, ಕೆ.ಎಲ್. ಭಟ್ಟ, ನಾರಾಯಣ ಪಿ. ಭಾಗ್ವತ್, ರಾಜ್ಯ ಪ್ರಶಸ್ತಿ ಪಡೆದ ಎನ್.ಎಸ್. ಭಟ್ಟ ಶಿಗೆಕೇರಿ, ಕೆ.ಎ. ಹೆಗಡೆ, ಸತೀಶ ಯಲ್ಲಾಪುರ, ವಿ.ಟಿ. ಹೆಗಡೆ, ಪ್ರಭಾಕರ ಭಟ್ಟ, ನಾಗಪತಿ ಹೆಗಡೆ, ಜಿ.ಎಸ್. ಭಟ್ಟ, ಎಸ್.ಎನ್. ಭಾಗ್ವತ್ ಮತ್ತಿತರರನ್ನು ಸನ್ಮಾನಿಸಲಾಯಿತು.