ಶಿಕ್ಷಕರ ಮೇಲೆ ಉತ್ತಮ ನಾಗರೀಕರ ರೂಪಿಸುವ ಹೊಣೆ

| Published : Sep 06 2024, 01:04 AM IST

ಸಾರಾಂಶ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಯೋಜನೆಗಳು ಪ್ರತಿಭಾವಂತ ಬಡಮಕ್ಕಳಿಗೆ ಶ್ರೇಯಸ್ಕರವಾಗಿದೆ. ಶಿಕ್ಷಕರು ಸಹ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಯೋಜನೆಗಳು ಪ್ರತಿಭಾವಂತ ಬಡಮಕ್ಕಳಿಗೆ ಶ್ರೇಯಸ್ಕರವಾಗಿದೆ. ಶಿಕ್ಷಕರು ಸಹ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಪಟ್ಟಣದ ಹೊರವಲಯದ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಗುರುವಾರ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನ ಸಮಾರಂಭ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಎನ್ನುವುದು ಪವಿತ್ರವಾದ ಕೆಲಸವಾಗಿದೆ. ನಿಮ್ಮಿಂದ ಕಲಿತ ವಿದ್ಯಾರ್ಥಿಗಳು ನಿಮ್ಮ ಸೇವೆ ಅವರು ಯಾವುದೇ ಸ್ಥಾನಮಾನಗಳಲ್ಲಿದ್ದರೂ ನೆನೆಯುತ್ತಾರೆ. ಗುರುಗಳ ಕೈಯಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು ಅಕ್ಷರಗಳನ್ನು ಕಲಿತು ಮುನ್ನಡೆಯುತ್ತಾರೆ. ಉತ್ತಮ ಶಿಕ್ಷಣ ನೀಡಿದ ಗುರುವನ್ನು ವಿದ್ಯಾರ್ಥಿಗಳು ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಹಲವಾರು ವರ್ಷಗಳ ನಂತರ ಸಿಕ್ಕರೂ ಅವರಿಗೆ ಕೃತಜ್ಞತಾ ಭಾವದಿಂದ ನಮಿಸುತ್ತಾರೆ. ಅಂತಹ ಪವಿತ್ರವಾದ ಶಿಕ್ಷಕ ವೃತ್ತಿ ನಿಮ್ಮದಾಗಿದೆ. ಅದನ್ನು ಸಮರ್ಥವಾಗಿ ನಿರ್ವಹಿಸಿ, ಶಿಕ್ಷಕ ವೃತ್ತಿಗೆ ಗೌರವ ತರಬೇಕು ಎಂದು ಮನವಿ ಮಾಡಿದರು.

ಶಾಸಕ ಆದಾಗಿನಿಂದ ಚನ್ನಗಿರಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದೇನೆ. 10ನೇ ತರಗತಿಯ ವಿದ್ಯಾರ್ಥಿಗಳಿಗೆ ತಾಲೂಕಿನ 7 ಶಾಲೆಗಳಲ್ಲಿ ರಾತ್ರಿ ಶಾಲೆಗಳನ್ನು ನಡೆಸಿ, ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದ್ದೇನೆ. ಈ ಏಳು ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದ ಶಾಲೆಗೆ ನನ್ನ ವೈಯಕ್ತಿಕವಾಗಿ ₹1 ಲಕ್ಷ ಬಹುಮಾನ ನೀಡಿದ್ದೇನೆ ಎಂದು ತಿಳಿಸಿದರು.

ಸಮಾರಂಭದಲ್ಲಿ 40 ಜನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ರುಕ್ಮಿಣಿ ಬಾಯಿ, ತಾಪಂ ಇಒ ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಎಸ್.ಶಂಕರಪ್ಪ, ನಾಟಕ ಅಕಾಡೆಮಿ ಪುರಸ್ಕೃತ ಎಚ್.ಎಸ್. ಧ್ಯಾಮೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹಾಲಸಿದ್ದಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ.ಸ್ವಾಮಿ, ಪಿ.ಎಂ. ಜಯಪ್ರಕಾಶ್, ಗುರುಮೂರ್ತಿ, ವಸಂತಕುಮಾರ್, ಈಶ್ವರ ನಾಯ್ಕ್, ಬಿ.ಆರ್. ಬಸಪ್ಪ, ನೇತ್ರಾವತಿ, ಹನುಮಂತರಾಯ ಉಪಸ್ಥಿತರಿದ್ದರು.