ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಸೌಹಾರ್ದ ತುಮಕೂರು ವತಿಯಿಂದ ಮಹಾತ್ಮ ಹುತಾತ್ಮ ಸೌಹಾರ್ದ ಸಪ್ತಾಹದ ಅಂಗವಾಗಿ ನಗರದ ಟೌನ್‌ಹಾಲ್ ಮುಂಭಾಗದ ಬಿ.ಜಿ.ಎಸ್.ವೃತ್ತದಲ್ಲಿ ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಸೌಹಾರ್ದ ಸಂಕಲ್ಪ ದಿನ, ಸಭೆ-ಪ್ರತಿಭೆ-ಸ್ವೀಕಾರ, ಸೌಹಾರ್ದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಕುರಿತು ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಧರ್ಮ, ಜಾತಿ, ಭಾಷೆ ಇವೆಲ್ಲವೂ ಜನರ ನಡುವೆ ಸೌಹಾರ್ದ ಬೆಸೆಯುವ ಅಂಶಗಳು, ಆದರೆ ಇಂದು ಇವುಗಳೇ ಜನರ ನಡುವೆ ದ್ವೇಷ ಬಿತ್ತುವ ವಿಷಯಗಳಾಗಿರುವುದು ನಿಜಕ್ಕೂ ದುರಾದೃಷ್ಟಕರ. ಇಂತಹ ಅಂಶಗಳ ಬಗ್ಗೆ ಜನರು ಯಾವಾಗಲು ಎಚ್ಚರಿಕೆಯಿಂದ ಹೆಜ್ಜೆಗಳ ಇಡಬೇಕಿದೆ. ಮೊದಲು ನಮ್ಮ ನಡುವೆಯೇ ಸೌಹಾರ್ದವನ್ನು ಮೈಗೂಡಿಸಿಕೊಂಡು, ನಮ್ಮ ನೆರೆಹೊರೆಯವರನ್ನು ಸಹ ಸೌಹಾರ್ದದೆಡೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.ಕರ್ನಾಟಕ, ಹಾಗೆಯೇ ತುಮಕೂರು ಜಿಲ್ಲೆ ರಾಷ್ಟ್ರಕವಿ ಕುವೆಂಪು ಅವರ ಮಾತಿನಂತೆ ಶಾಂತಿಯ ತೋಟವಾಗಿದೆ. ನಾವುಗಳು ಇದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ತಾಳ್ಮೆ, ಸಹನೆಯಿಂದ ವರ್ತಿಸಬೇಕಿದೆ. ಎಲ್ಲ ಧರ್ಮ,ಜಾತಿ, ವರ್ಗದ ಜನರೊಂದಿಗೆ ಸ್ನೇಹದಿಂದ ಬೇರತ ಬಾಳುವುದನ್ನು ಕಲಿಯಬೇಕಾಗಿದೆ. ನಮ್ಮಗಳ ನಡುವೆ ಇರುವ ಗೋಡೆಯನ್ನು ಕೆಡವಿ, ಬಾಂಧವ್ಯ ಬೆಸೆಯುವ ಕೆಲಸ ಮಾಡಬೇಕಾಗಿದೆ ಎಂದು ಬಾ.ಹ.ರಮಾಕುಮಾರಿ ತಿಳಿಸಿದರು.ಸಾಹಿತಿ ಡಾ.ಶೈಲಾನಾಗರಾಜು ಮಾತನಾಡಿ , ನಾವು ಹಲವಾರು ದಾರ್ಶನಿಕರ ಬರಹಗಳನ್ನು ಓದುತ್ತೇವೆಯೇ ಹೊರತು, ಅದರಂತೆ ನಡೆದುಕೊಳ್ಳುವುದಿಲ್ಲ. ಬುದ್ದ,ಬಸವ,ಅಂಬೇಡ್ಕರ್ ಸೇರಿದಂತೆ ಅನೇಕ ದಾರ್ಶನಿಕರು ಜಾತಿ,ಧರ್ಮ ಮೀರಿ ನಡೆದು ಹೊಸ ಸಮಾಜ ಕಟ್ಟುವ ಪ್ರಯತ್ನ ನಡೆಸಿದ್ದರು. ಆದರೆ ನಾವುಗಳು ನಮ್ಮಗಳ ನಡುವೆಯೇ ಬೇಲಿಗಳನ್ನು ಹಾಕಿಕೊಂಡು ಬದುಕುತ್ತಿದ್ದೇವೆ. ಇಂತಹ ಸಮಯದಲ್ಲಿಯೇ ಸೌಹಾರ್ದತೆಯಿಂದ ಬದುಕುವುದನ್ನು ಕಲಿಯಬೇಕಿದೆ ಎಂದರು.ಗಾಂಧೀಜಿ ಸಾವು ಬರಿ ಸಾವಲ್ಲ. ಅದೊಂದು ರಾಕ್ಷಸಿಯ ಗುಣ. ಇಂದಿಗೂ ತೀರ ನಿಕೃಷ್ಟವಾಗಿ ನಡೆದುಕೊಂಡು ವ್ಯಕ್ತಿಯನ್ನು ನಾಥೂರಾಮ್ ಗೋಡ್ಸೆಗೆ ಹೊಲಿಕೆ ಮಾಡುತ್ತೇವೆ. ನಮ್ಮಲ್ಲಿಯೂ ಅಂತಹ ಗುಣಗಳಿವೆ. ಅವುಗಳನೆಲ್ಲಾ ತೊಡೆದು ಹಾಕುವಂತಹ ಮಾನವೀಯ, ಜ್ಯಾತ್ಯತೀತ, ಧರ್ಮಾತೀತ ಗುಣಗಳನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಿದೆ. ಸೌಹಾರ್ದತೆಯನ್ನು ಪ್ರತಿದಿನ ಆಚರಿಸಬೇಕಿದೆ. ಸಂಘರ್ಷಗಳ ಹೊರತಾಗಿ, ಸೌಹಾರ್ದ,ಶಾಂತಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.ಸೌಹಾರ್ದ ತುಮಕೂರಿನ ಸಿ.ಯತಿರಾಜು ಮಾತನಾಡಿ, 77 ವರ್ಷಗಳ ಹಿಂದೆ ನಾಥೂರಾಮ್ ಗೋಡ್ಸೆ ಎಂಬ ವ್ಯಕ್ತಿ ಹತ್ಯೆ ಮಾಡಿದ. ಇಂದು ಗೋಡ್ಸೆ ಸಂತಾನ ಹೆಚ್ಚಾಗಿ, ಗಾಂಧಿ ಸಂತಾನ ಕಡಿಮೆಯಾಗಿದೆ. ಇಂದಿಗೂ ವಿದೇಶಗಳು ಭಾರತವನ್ನು ನೋಡುವುದು ಗಾಂಧಿ ನಾಡು ಎಂದು. ತಂತ್ರಜ್ಞಾನದ ಬಲದಿಂದ ಸುಳ್ಳು ಮತ್ತು ದ್ವೇಷವನ್ನು ವ್ಯಾಪಕವಾಗಿ ಹರಡಲಾಗುತ್ತಿದೆ.ಇದನ್ನು ತಡೆಯುವುದು ದೊಡ್ಡ ಸವಾಲಾಗಿದೆ ಎಂದರು.ಅಮೇರಿಕಾದ ಅಧ್ಯಕ್ಷನಾಗಿ ಡೋನಾಲ್ಡ್ ಟ್ರಂಪ್ ಬಂದ ಮೇಲೆ ಹಲವಾರು ಅವಘಡಗಳ ಮುನ್ಸೂಚನೆ ಬರುತ್ತಿದೆ. ಉದ್ಯಮಿಗಳೇ ಸಚಿವ ಸಂಪುಟದಲ್ಲಿದ್ದಾರೆ. ಇದು ಯೂರೋಪ್‌ಗೂ ಹರಡುವ ಸಾಧ್ಯತೆ ಇದೆ. ವಿದೇಶಿ ಗಣ್ಯರು ಬಂದರೆ ರಾಜ್‌ಘಾಟ್‌ಗೆ ಕರೆದುಕೊಂಡು ಹೋಗುವ ಪ್ರಧಾನಿ ಮತ್ತು ಸಂಸದರು ನಾಥೂರಾಮ್ ಗೋಡ್ಸೆಯನ್ನು ಆಧಾರಿಸುತ್ತಾರೆ. ಈ ರೀತಿಯ ನಾಟಕೀಯ ಭಕ್ತಿಯ ಮುಖವಾಡವನ್ನು ಕಳಚಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಟಕಕಾರ ಎಸ್.ಎ.ಖಾನ್, ದಲಿತ ಮುಖಂಡರಾದ ಪಿ.ಎನ್.ರಾಮಯ್ಯ,ಕಾರ್ಮಿಕ ಮುಖಂಡ ಕಂಬೇಗೌಡ, ರಂಗನಿರ್ದೇಶಕ ಹೊನ್ನವಳ್ಳಿ ನಟರಾಜು, ಸಿಐಟಿಯುನ ಎನ್.ಕೆ.ಸುಬ್ರಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪ್ರತಿಜ್ಞಾ ವಿಧಿ, ಸೌಹಾರ್ದ ಗೀತ ಗಾಯನ ನಡೆಯಿತು.