ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಎಲ್ಲರೂ ಸಾಮೂಹಿಕವಾಗಿ ಕೈಜೋಡಿಸಿದಲ್ಲಿ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುವುದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನುತಾ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಸಂರಕ್ಷಣೆ ವಿಚಾರದಲ್ಲಿ ಕಾನೂನುಗಳ ಜೊತೆ ಎಲ್ಲರಲ್ಲಿ ಅರಿವನ್ನು ಮೂಡಿಸಬೇಕಿದೆ. ಈ ಭೂಮಿಯ ಮೇಲೆ ವಾಸಿಸುತ್ತಿರುವ ಎಲ್ಲಾ ಜೀವಿಗಳಿಗೂ ಅನುಕೂಲ ಮಾಡಿಕೊಟ್ಟಿರುವ ಈ ಪರಿಸರವನ್ನು ನಾವು ಗೌರವಿಸಬೇಕಿದೆ ಎಂದರು.
ಆಧುನಿಕತೆ ಹೆಚ್ಚಾದಂತೆ ಮರ, ಗಿಡಗಳು ಕಣ್ಮರೆಯಾಗುತ್ತಿರುವುದು ದುರದೃಷ್ಟಕರ. ಎಲ್ಲರೂ ಎಚ್ಚೆತ್ತುಕೊಂಡು ಪ್ರಕೃತಿ ಉಳಿಸುವತ್ತ ಗಮನಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತ ಎದುರಿಸಬೇಕಾಗುತ್ತದೆ. ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಮ್ಮ ಪೂರ್ವಜರು ಉತ್ತಮ ಬುನಾದಿ ಹಾಕಿ ಕೊಟ್ಟಿದ್ದಾರೆ. ಅವುಗಳನ್ನು ರೂಡಿಸಿಕೊಂಡು ಪರಿಸರ ಸಂರಕ್ಷಣೆಗೆ ಎಲ್ಲರೂ ಬದ್ದ ರಾಗಿರೋಣ ಎಂದು ಹೇಳಿದರು.ಪ್ರಾಂಶುಪಾಲ ಡಾ. ಪ್ರಸನ್ನಕುಮಾರ್ ಮಾತನಾಡಿ, ಕಾಲೇಜಿನ ಆವರಣದಲ್ಲಿ ಅಷ್ಟೆ ಅಲ್ಲದೆ ಎನ್ಎಸ್ಎಸ್ ಘಟಕದ ವತಿಯಿಂದ ಗ್ರಾಮೀಣ ಭಾಗಗಳಲ್ಲಿಯೂ ಗಿಡ ನೆಟ್ಟು ಸಾರ್ವಜನಿಕರನ್ನು ಪ್ರೇರೇಪಿಸುತ್ತಿದ್ದೇವೆ. ಇನ್ನೂ ಹೆಚ್ಚಿನ ಗಿಡಗಳನ್ನು ನೆಟ್ಟು ಘೋಷಿಸುವ ಜವಾಬ್ದಾರಿಯನ್ನು ಮಕ್ಕಳ ಜೊತೆ ನಿರ್ವಹಿಸುತ್ತೇವೆ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಮಾತನಾಡಿ, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅರಣ್ಯ ಇಲಾಖೆ ವ್ಯಾಪ್ತಿಯ ಸಸ್ಯ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಸಸಿಗಳನ್ನು ಬೆಳೆಸಿದ್ದು, ರೈತರಿಗೆ ಹಾಗೂ ಆಸಕ್ತರಿಗೆ ನೀಡಲಾಗುವುದು. ಸಾರ್ವಜನಿಕರು ಇಲಾಖೆಯ ಜೊತೆ ಸಹಕರಿಸಿದಲ್ಲಿ ಹೆಚ್ಚು ಮರ ಗಿಡಗಳನ್ನು ಬೆಳೆಸಲು ಸಾಧ್ಯವಾಗುವುದು ಎಂದು ತಿಳಿಸಿದರು.ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಯಿತು. ಕಾಲೇಜಿನ ಪ್ರಾಧ್ಯಾಪಕರು, ವಕೀಲರ ಸಂಘದ ಕಾರ್ಯದರ್ಶಿ ಸುರೇಶ್, ಖಜಾಂಚಿ ಶಿವಾನಂದ್,ಕಾನೂನು ಸೇವಾ ಪ್ರಾಧಿಕಾರದ ಕೃಷ್ಣಮೂರ್ತಿ, ಕಾಲೇಜಿನ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.