ಸಾರಾಂಶ
ನಮಗೂ ನರೇಂದ್ರಸ್ವಾಮಿ ಮಂತ್ರಿ ಆಗಬೇಕು ಎನ್ನುವ ಆಸೆ ಇದ್ದು, ಅವರ ಬೆಂಬಲಕ್ಕೆ ಇದ್ದೇವೆ. ಈ ಬಾರಿ ಅವರಿಗೆ ಮಂತ್ರಿ ಸ್ಥಾನ ಸಿಗುತ್ತೆ ಎನ್ನುವ ವಿಶ್ವಾಸವಿದೆ. ನರೇಂದ್ರಸ್ವಾಮಿ ಅವರಿಗೆ ಮಂತ್ರಿ ಸ್ಥಾನ ನೀಡುವುದು ನಮ್ಮ ಕೈಯಲ್ಲಿಲ್ಲ.
ಮದ್ದೂರು : ಸಚಿವ ಸಂಪುಟ ವಿಸ್ತರಣೆ ವೇಳೆ ಶಾಸಕ ನರೇಂದ್ರಸ್ವಾಮಿ ಅವರಿಗೆ ಮಂತ್ರಿ ಸ್ಥಾನ ನೀಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೋಮವಾರ ಹೇಳಿದರು.
ತಾಲೂಕಿನ ಕೋಣಸಾಲೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದದಿಂದ 2.46 ಲಕ್ಷ ರು. ವೆಚ್ಚದಲ್ಲಿ ಮರಳಿಗ ಗ್ರಾಮ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನಮಗೂ ನರೇಂದ್ರಸ್ವಾಮಿ ಮಂತ್ರಿ ಆಗಬೇಕು ಎನ್ನುವ ಆಸೆ ಇದ್ದು, ಅವರ ಬೆಂಬಲಕ್ಕೆ ಇದ್ದೇವೆ. ಈ ಬಾರಿ ಅವರಿಗೆ ಮಂತ್ರಿ ಸ್ಥಾನ ಸಿಗುತ್ತೆ ಎನ್ನುವ ವಿಶ್ವಾಸವಿದೆ ಎಂದರು.
ನರೇಂದ್ರಸ್ವಾಮಿ ಅವರಿಗೆ ಮಂತ್ರಿ ಸ್ಥಾನ ನೀಡುವುದು ನಮ್ಮ ಕೈಯಲ್ಲಿಲ್ಲ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವುದು ಪಕ್ಷದ ಹೈಕಮಾಂಡ್. ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಸಂತೋಷ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಈಗಾಗಲೇ ದಲಿತ ಜನಾಂಗದ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಅದೇ ರೀತಿ ನರೇಂದ್ರಸ್ವಾಮಿ ಅವರಿಗೂ ಮಂತ್ರಿ ಸ್ಥಾನ ನೀಡಬೇಕೆನ್ನುವುದು ನಮ್ಮ ಬಯಕೆ ಆಗಿದೆ. ಆದರೆ, ನರೇಂದ್ರಸ್ವಾಮಿ ಅವರಿಗೆ ಮಂತ್ರಿ ಸ್ಥಾನ ನೀಡುವಾಗ ಯಾರನ್ನು ಕೈ ಬಿಟ್ಟು ಮಂತ್ರಿ ಮಾಡುತ್ತಾರೆ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಕಾಂಗ್ರೆಸ್ ಮುಖಂಡರಾದ ಸಿದ್ದರಾಜು, ಶಿವಪ್ಪ, ಧರಣೇಶ್, ನಾಗರಾಜು, ಕೆ.ಎಸ್.ಸುನಿಲ್ ಕುಮಾರ್ ಹಾಗೂ ಗ್ರಾಮದ ಮುಖಂಡರು ಇದ್ದರು.