ನನ್ನನ್ನು ಸಚಿವನ್ನಾಗಿ ಮಾಡುವುದು ಹೈಕಮಾಂಡಿಗೆ ಬಿಟ್ಟಿದ್ದು: ಹಿಟ್ನಾಳ

| Published : Oct 06 2025, 01:01 AM IST

ನನ್ನನ್ನು ಸಚಿವನ್ನಾಗಿ ಮಾಡುವುದು ಹೈಕಮಾಂಡಿಗೆ ಬಿಟ್ಟಿದ್ದು: ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಷರ್ ಮಾಲೀಕರು ತೀವ್ರ ಸಂಕಷ್ಟದಲ್ಲಿದ್ದಾರೆ. ನಾನು ಸಹ ಕ್ರಷರ್ ಮಾಲೀಕನೇ ಆಗಿದ್ದು, ನನಗೂ ಅದರ ಬಗ್ಗೆ ಗೊತ್ತಿದೆ

ಕೊಪ್ಪಳ: ನವೆಂಬರ್‌ನಲ್ಲಿ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನನ್ನು ಸಚಿವನ್ನಾಗಿ ಮಾಡುವುದು- ಬಿಡುವುದು ಹೈಕಮಾಂಡಿಗೆ ಬಿಟ್ಟಿದ್ದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಆಕಾಂಕ್ಷಿಯೇ ಎಂದು ಕೇಳಿದರೆ ನೇರವಾಗಿ ಉತ್ತರಿಸದ ಅವರು, ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದಷ್ಟೇ ಹೇಳಿದರು.

ಕ್ರಷರ್ ಮಾಲೀಕರ ತೀರ್ಮಾನ ಸರಿ:ಕ್ರಷರ್ ಮಾಲೀಕರು ತೀವ್ರ ಸಂಕಷ್ಟದಲ್ಲಿದ್ದಾರೆ. ನಾನು ಸಹ ಕ್ರಷರ್ ಮಾಲೀಕನೇ ಆಗಿದ್ದು, ನನಗೂ ಅದರ ಬಗ್ಗೆ ಗೊತ್ತಿದೆ. ಹೀಗಾಗಿಯೇ ಎಲ್ಲರೂ ಸೇರಿ ಪ್ರೇರಣಾ ಎಜೆನ್ಸಿಯ ಮೂಲಕ ಮಾರಾಟ ಮಾಡುವ ತೀರ್ಮಾನ ಮಾಡಲಾಗಿದ್ದು, ಇದು ಸರಿ ಇದೆ ಎಂದು ಶಾಸಕರು ಹೇಳಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇದು ವ್ಯವಹಾರಿಕ ದೃಷ್ಟಿಯಿಂದ ಕ್ರಷರ್ ಮಾಲೀಕರು ಮಾಡಿಕೊಂಡಿರುವ ಒಪ್ಪಂದವಾಗಿದೆ. ನಾಲ್ಕಾರು ವರ್ಷಗಳಿಂದ ಬಾಕಿ ಇದ್ದರೂ ಗುತ್ತಿಗೆದಾರರು ಹಣ ಪಾವತಿ ಮಾಡಿಲ್ಲ. ಇದರಿಂದ ಕ್ರಷರ್ ನಡೆಸುವುದು ಕಷ್ಟವಾಗಿದೆ ಎಂದರು.

ಸರ್ಕಾರದ ಬಿಲ್ ಬಾಕಿ ಇಲ್ಲ. ಇದ್ದರೂ ನಾಲ್ಕಾರು ವರ್ಷ ಬಾಕಿ ಇಲ್ಲ, ಒಂದು ಅಥವಾ ಎರಡು ವರ್ಷ ಬಾಕಿ ಇರಬಹುದು. ಗುತ್ತಿಗೆದಾರರು ಮಾತುಕತೆಗೆ ಕರೆದಿದ್ದಾರೆ. ಅವರ ಜತೆಯಲ್ಲಿಯೂ ಮಾತುಕತೆ ಮಾಡಿ ಸರಿ ಮಾಡುತ್ತೇನೆ. ನೂರು ಕೋಟಿಗೂ ಅಧಿಕ ಬಾಕಿ ಇದೆ. ಹೀಗೆ ಇದ್ದರೆ ಕ್ರಷರ್ ನಡೆಸುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದರು.

ಸಕಲ ಸಿದ್ಧತೆ: ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ ಎಂದರು.

2 ಸಾವಿರ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಇದೇ ಮೊದಲು ಎಂದರು.

ಕಿಮ್ಸ್ ಕಾಲೇಜು ಆಸ್ಪತ್ರೆಯ ಉದ್ಘಾಟನೆಯ ಜತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಅಡಿಗಲ್ಲು ಪೂಜೆಯನ್ನು ಸಿಎಂ ನೆರವೇರಿಸಲಿದ್ದಾರೆ. ಇದಲ್ಲದೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಚಾಲನೆ ನೀಡಲಿದ್ದಾರೆ ಎಂದರು.