ಸಾರಾಂಶ
ಬೈಲಹೊಂಗಲ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಗುರುವಾರ ಎರಡು ಗಂಟೆಗಳ ಕಾಲ ಮಳೆ ಸುರಿಯಿತು.
ಕನ್ನಡಪ್ರಭ ವಾರ್ತೆ ಬೈಲಹೊಂಗಲಬಿಸಿಲಿನ ಧಗೆಯಿಂದ ಬಳಲುತ್ತಿದ್ದ ಜನತೆಗೆ ಗುರುವಾರ ಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಸುಮಾರು 2 ಗಂಟೆಗಳ ಕಾಲ ಸುರಿದ ಮಳೆಗೆ ರೈತರ ಮುಖದಲ್ಲಿ ಮಂದಹಾಸ ಮೂಡಿತು.
ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಅನೇಕ ರೈತರು ತಮ್ಮ ಜಮೀನುಗಳನ್ನು ಹದ ಮಾಡಿಕೊಂಡು ಬಿತ್ತನೆ ಕೈಗೊಂಡಿದ್ದು, ಮಳೆ ಬಾರದ ಕಾರಣ ರೈತರು ಮುಗಿಲು ನೋಡುವಂತಾಗಿತ್ತು. ಸುರಿದ ಮಳೆಯಿಂದ ಕೃಷಿ ವಲಯಕ್ಕೆ ಜೀವ ಬಂದಂತಾಗಿದೆ. ಬಸ್‌ಗಾಗಿ ಕಾಯ್ದು ನಿಂತಿದ್ದ ಪ್ರಯಾಣಿಕರು ಬಸ್ ಇಲ್ಲದೇ ಚಡಪಡಿಸಿದರು. ಜೋರಾದ ಮಳೆಯಲ್ಲಿ ರೀಕ್ಷಾಗಳ ಓಡಾಟ ಜೋರಾಗಿತ್ತು. ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತದ ಮುಖ್ಯ ರಸ್ತೆಯ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇಡೀ ರಾತ್ರಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಹಲವು ಕಡೆ ಚರಂಡಿಗಳ ನೀರು ಮನೆಗೆ ನುಗ್ಗಿದ್ದು ಕಂಡು ಬಂದಿತ್ತು.